ಬೆಂಗಳೂರು :  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಯಾಣ ದರ ಏರಿಸಿಕೊಂಡು ಗ್ರಾಹಕರ ಸುಲಿಗೆಗೆ ಮುಂದಾಗಿರುವ ಖಾಸಗಿ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾ ರಾತ್ರಿ ದಿಢೀರ್‌ ಕಾರ್ಯಾಚರಣೆ ನಡೆಸಿ ತಪಾಸಣೆ ನಡೆಸಿದರು. ದುಬಾರಿ ಪ್ರಯಾಣ ದರ ಸುಲಿಗೆ ಮಾಡಿದ 15 ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ತೆರಿಗೆ ಪಾವತಿಸದೆ ಅನಧಿಕೃತವಾಗಿ ಸಂಚರಿಸುತ್ತಿದ್ದ ನಡೆಸುತ್ತಿದ್ದ ಒಂದು ಖಾಸಗಿ ಬಸ್‌ ಅನ್ನು ಜಪ್ತಿ ಮಾಡಿದ್ದಾರೆ.

ನಗರದ ಕೆ.ಆರ್‌.ಪುರಂ. ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‌ ಜಂಕ್ಷನ್‌, ಗೊರಗುಂಟೆಪಾಳ್ಯ, ದೇವನಹಳ್ಳಿ ಟೋಲ್‌ ಹಾಗೂ ಕಲಾಸಿಪಾಳ್ಯದಲ್ಲಿ ತಪಾಸಣಾ ಕೇಂದ್ರ ತೆರೆದಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ನಗರದಿಂದ ಸಂಚರಿಸುತ್ತಿರುವ ಖಾಸಗಿ ಬಸ್‌ಗಳನ್ನು ತಡೆದು ತಪಾಸಣೆ ನಡೆಸಿದರು.

ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರ ಮನ ಬಂದಂತೆ ಏರಿಸಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎರಡು ದಿನ ವಿಶೇಷ ಕಾರ್ಯಾಚರಣೆ ಜರುಗಲಿದೆ. ಪ್ರಯಾಣಿಕರು ಸಾಮಾನ್ಯ ದಿನಗಳಿಗಿಂತ ದುಬಾರಿ ಹಣ ಪಡೆದಿರುವ ಬಸ್‌ ಆಪರೇಟರ್‌ಗಳ ವಿರುದ್ಧ ದೂರು ನೀಡಬಹುದು. ತಪಾಸಣೆ ವೇಳೆಯೂ ಪ್ರಯಾಣಿಕರು ಅಧಿಕಾರಿಗಳ ಗಮನಕ್ಕೆ ತಂದರೆ, ಸ್ಥಳದಲ್ಲೇ ಹೆಚ್ಚುವರಿ ಹಣವನ್ನು ಕೊಡಿಸುವಾಗಿ ಸಾರಿಗೆ ಇಲಾಖೆ ಜಂಟಿ ಆಯುಕ್ತ ಜ್ಞಾನೇಂದ್ರಕುಮಾರ್‌ ತಿಳಿಸಿದರು.

ಕಾಂಟ್ರಾಕ್ಟ್ ಕ್ಯಾರಿಯೇಜ್‌ ಬಸ್‌ಗಳಿಗೆ ದರ ನಿಗದಿಗೆ ಅವಕಾಶವಿಲ್ಲ. ಹಾಗೆಂದು ಮನಬಂದಂತೆ ಪ್ರಯಾಣ ದರ ಏರಿಸಿ ಗ್ರಾಹಕರ ಸುಲಿಗೆ ಮಾಡುವಂತಿಲ್ಲ. ಒಂದು ವೇಳೆ ಕಾಂಟ್ರಾಕ್ಟ್ ಕ್ಯಾರೇಜ್‌ ನಿಯಮ ಉಲ್ಲಂಘಿಸಿದರೆ, ಅಂತಹ ಖಾಸಗಿ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, ರಹದಾರಿ ರದ್ಧತಿಗೆ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ (ಆರ್‌ಟಿಎ) ಶಿಫಾರಸು ಮಾಡುವುದಾಗಿ ಅವರು ಹೇಳಿದರು.