ನವದೆಹಲಿ :  ‘2014ರ ಚುನಾವಣೆಯಲ್ಲೂ ಪೂರ್ಣ ಬಹುಮತದ ಸರ್ಕಾರದ ಬಗ್ಗೆ ಮಾತನಾಡಿದ್ದೆ. ಆದರೆ ಮೋದಿ ಹವಾ ಗುಜರಾತಿನಿಂದಾಚೆ ಇಲ್ಲ ಎಂದು ವ್ಯಾಪಕ ಚರ್ಚೆಗಳೇ ನಡೆದಿದ್ದವು. ಆಗ ಮೋದಿ ಯಾರೆಂದು ಗೊತ್ತಿರಲಿಲ್ಲ. ಈಗ ಎಲ್ಲರಿಗೂ ಗೊತ್ತಿದೆ. ಮೋದಿ ಕೆಲಸ ಏನು, ನೀತಿ ಏನು, ನಿಯತ್ತು ಏನು ಎಂಬುದು ಗೊತ್ತಾಗಿದೆ. ಕಳೆದ ಬಾರಿ ಗೆದ್ದಿದ್ದಕ್ಕಿಂತ ಹೆಚ್ಚು ಸೀಟುಗಳೊಂದಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ...’

- ಲೋಕಸಭೆ ಚುನಾವಣೆಯ ಮೊದಲ ಎರಡು ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಪೂರ್ಣಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮರುಆಯ್ಕೆ ಬಗ್ಗೆ ಅದಮ್ಯ ವಿಶ್ವಾಸ ವ್ಯಕ್ತಪಡಿಸಿರುವುದು ಹೀಗೆ.

‘ರಿಪಬ್ಲಿಕ್‌ ಟೀವಿ’ಗೆ ನೀಡಿರುವ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮೋದಿ ಮಾತನಾಡಿದ್ದಾರೆ. ಪುಲ್ವಾಮಾ ದಾಳಿ, ಉಪಗ್ರಹ ಹೊಡೆದುರುಳಿಸುವ ತಂತ್ರಜ್ಞಾನ ಕುರಿತು ಟೀಕೆಗಳನ್ನು ಮಾಡಿದ ಪ್ರತಿಪಕ್ಷಗಳಿಗೆ ಚಾಟಿ ಬೀಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

‘ಮಿಷನ್‌ ಶಕ್ತಿ’ ಘೋಷಣೆ ಮೂಲಕ ಪ್ರಧಾನಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನುತ್ತಿವೆಯಲ್ಲ ವಿಪಕ್ಷಗಳು?

ಕಾಂಗ್ರೆಸ್‌ ಪಕ್ಷ ದೀರ್ಘ ಅವಧಿಗೆ ಆಡಳಿತ ನಡೆಸಿದೆ. ಆದರೆ ಅದರ ನಾಯಕರಿಗೆ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಇಂತಹ ಸಾಹಸ, ಕ್ರಿಯೆಗಳು ದಿಢೀರ್‌ ಆಗುವುದಿಲ್ಲ. ಜಾಗತಿಕ ಸಮುದಾಯದ ಜತೆ ಸಮಾಲೋಚನೆ ಮಾಡಬೇಕು. ಅದು ದೀರ್ಘ ಪ್ರಕ್ರಿಯೆ. ವಿವಿಧ ದೇಶಗಳ ಸಮಯ ಪಡೆದು ನಾವು ಅದನ್ನು ಉಪಯೋಗಿಸಿಕೊಳ್ಳಬೇಕು. ನಮಗೆ ಯಾವಾಗ ಸಮಯ ಸಿಕ್ಕಿತೋ ಆಗ ಪ್ರಯೋಗ ಮಾಡಿದ್ದೇವೆ. ಒಂದು ವೇಳೆ ನೈಸರ್ಗಿಕ ವಿಕೋಪಗಳು ಸಂಭವಿಸಿದರೆ, ನೀತಿ ಸಂಹಿತೆ ಇದೆ ಎಂದು ಸರ್ಕಾರ ಏನೂ ಕೆಲಸ ಮಾಡುವುದಿಲ್ಲವೇ?

ಲೋಕಸಭೆ ಚುನಾವಣಾ ಪ್ರಚಾರ ಶುರುವಾಗಿದೆ. ಪ್ರಧಾನಿಗಳೇ ಜೋಶ್‌ ಹೇಗಿದೆ? ಗೆಲ್ಲುವ ಬಗ್ಗೆ ನಿಮಗೆ ವಿಶ್ವಾಸವಿದೆಯೇ?

ಚುನಾವಣೆಯಲ್ಲಿ ಮತದಾರನೇ ಕೇಂದ್ರ ಬಿಂದು. ಮತದಾರರ ಆಶೋತ್ತರ, ಅಪೇಕ್ಷೆ ಈಡೇರಿಸುವುದಕ್ಕಾಗಿ ರಾಜಕಾರಣಿಗಳು ಮತದಾರರ ಬಳಿ ಹೋಗುವುದೇ ಚುನಾವಣೆ. ಆದರೆ ನಮ್ಮ ದೇಶದಲ್ಲಿ ಪ್ರಧಾನಮಂತ್ರಿ ಕೇಂದ್ರಿತ ಚುನಾವಣೆ ಎಂದು ಬಿಂಬಿತವಾಗಿದೆ. ದೇಶದ ಉಜ್ವಲ ಭವಿಷ್ಯ ಹಾಗೂ ಆರೋಗ್ಯವಂತ ಪ್ರಜಾಪ್ರಭುತ್ವಕ್ಕಾಗಿ ಚುನಾವಣೆಯ ಕೇಂದ್ರ ಬಿಂದು ಮತದಾರನಾಗಿರಬೇಕು.

ಆದರೆ ಪ್ರಧಾನಿ ಮೋದಿ ಅವರ ಮೇಲೆ ಚುನಾವಣೆ ಕೇಂದ್ರಿತವಾಗಿದೆ ಎಂಬುದನ್ನು ನಿರಾಕರಿಸುತ್ತೀರಾ? ಇದು ವ್ಯಕ್ತಿ ಕೇಂದ್ರಿತ ಚುನಾವಣೆ ಅಲ್ಲವೇ? ಪ್ರಧಾನಿ ಮೋದಿ ಪುನರಾಯ್ಕೆಯಾಗಬೇಕೆಂದಿಲ್ಲವೇ?

ಐದು ವರ್ಷಗಳ ಕಾಲ ಆಳ್ವಿಕೆ ಮಾಡಿದ ಕಾರಣ, ಹಾಲಿ ಸರ್ಕಾರದ ಮೇಲೆ ಜನರ ಒಲವು ಇರುವುದು ಸ್ವಾಭಾವಿಕ. ನಾನೊಬ್ಬ ಸಕ್ರಿಯ ಪ್ರಧಾನಮಂತ್ರಿ. ಜನತೆಗಾಗಿ ಕೆಲಸ ಮಾಡುತ್ತಿರುವ ಪ್ರಧಾನಮಂತ್ರಿ. ಹಿಂದುಸ್ತಾನದ ಪ್ರತಿ ಮೂಲೆಮೂಲೆಗೂ ಹೋಗುವ ಪ್ರಧಾನಮಂತ್ರಿ. ಹೀಗಾಗಿ ಜನರಿಗೆ ನನ್ನ ಮೇಲೆ ಗಮನ ಸ್ವಾಭಾವಿಕ.

ಉಪಗ್ರಹ ಹೊಡೆದುರುಳಿಸುವ ತಂತ್ರಜ್ಞಾನ (ಮಿಷನ್‌ ಶಕ್ತಿ) ಸಿದ್ಧಿಸಿದ್ದರ ಕುರಿತು ಘೋಷಿಸುವ ಮೂಲಕ ಪ್ರಧಾನಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆಯಲ್ಲಾ?

ಕಾಂಗ್ರೆಸ್‌ ಪಕ್ಷ ದೀರ್ಘ ಅವಧಿಗೆ ಆಡಳಿತ ನಡೆಸಿದೆ. ವಿವಿಧ ಹುದ್ದೆ ಅಲಂಕರಿಸಿದ ಉನ್ನತ ನಾಯಕರು ಆ ಪಕ್ಷದಲ್ಲಿದ್ದಾರೆ. ಆದರೂ ಮೋದಿ ಹೇಳುತ್ತಿರುವುದು ಏನು ಎಂದು ಸಮಾಲೋಚನೆ ನಡೆಸದೇ ಆ ಪಕ್ಷ ಪ್ರತಿಕ್ರಿಯಿಸುತ್ತಿದೆ. ನನಗನಿಸುತ್ತಿದೆ, ಅವರಿಗೆ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಇಂತಹ ಸಾಹಸ, ಕ್ರಿಯೆಗಳು ದಿಢೀರ್‌ ಆಗುವುದಿಲ್ಲ. ಜಾಗತಿಕ ಸಮುದಾಯದ ಜತೆ ಸಮಾಲೋಚನೆ ಮಾಡಬೇಕು. ಅದು ದೀರ್ಘ ಪ್ರಕ್ರಿಯೆ. ವಿವಿಧ ದೇಶಗಳ ಸಮಯ ಪಡೆದು ನಾವು ಅದನ್ನು ಉಪಯೋಗಿಸಿಕೊಳ್ಳಬೇಕು. ನಮಗೆ ಯಾವಾಗ ಸಮಯ ಸಿಕ್ಕಿತೋ ಆಗ ಪ್ರಯೋಗ ಮಾಡಿದ್ದೇವೆ. ಒಂದು ವೇಳೆ ನೈಸರ್ಗಿಕ ವಿಕೋಪಗಳು ಸಂಭವಿಸಿದರೆ, ನೀತಿ ಸಂಹಿತೆ ಇದೆ ಎಂದು ಸರ್ಕಾರ ಏನೂ ಕೆಲಸ ಮಾಡಕೂಡದೇ? ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಬಳಿಕವೂ ಕೆಲವೊಂದು ರಾಜ್ಯಗಳಲ್ಲಿ ಬಜೆಟ್‌ ಅಧಿವೇಶನ ನಡೆಯುತ್ತಿವೆ. ಬಜೆಟ್‌ಗಳು ಬರುತ್ತಿವೆ, ಭಾಷಣಗಳನ್ನು ಮಾಡಲಾಗುತ್ತಿದೆ. ನನಗೊಂದು ಜೋಕ್‌ ನೆನಪಾಗುತ್ತಿದೆ: ಒಮ್ಮೆ ಪೊಲೀಸ್‌ ಮನೆಗೆ ಕಳ್ಳ ನುಗ್ಗುತ್ತಾನೆ. ಸಿಕ್ಕಸಿಕ್ಕದ್ದನ್ನು ದೋಚುತ್ತಿರುತ್ತಾನೆ. ಪೊಲೀಸನ ಹೆಂಡತಿ ಅದನ್ನು ನೋಡಿ, ಮಲಗಿದ್ದ ಪತಿಯನ್ನು ಎಬ್ಬಿಸುತ್ತಾಳೆ. ಆಗ ‘ನಾನು ಡ್ಯೂಟಿಯಲ್ಲಿಲ್ಲ’ ಎಂದು ಪೊಲೀಸಪ್ಪ ಹೇಳುತ್ತಾನೆ. ಹಾಗಾಗಬೇಕಾ?

ಪ್ರತಿಪಕ್ಷಗಳಿಗೆ ಉಪಗ್ರಹ ಹೊಡೆದುರುಳಿಸಿದ ಘೋಷಣೆಯ ಟೈಮಿಂಗ್‌ ಬಗ್ಗೆ ಆಕ್ಷೇಪ ಇದೆ. ಈ ಸಾಧನೆಯಲ್ಲಿ ದೊಡ್ಡದೇನಿದೆ ಎಂದು ಮಮತಾ ಕೇಳಿದ್ದಾರೆ? ಚೀನಾದವರು ಮೊದಲೇ ಮಾಡಿದ್ದಾರೆ ಎಂದು ಅಖಿಲೇಶ್‌ ಹೇಳಿದ್ದಾರೆ. ರಾಹುಲ್‌ ಗಾಂಧಿ ಹೇಳುತ್ತಾರೆ...

ಪ್ರಾಥಮಿಕ ಜ್ಞಾನವೇ ಇಲ್ಲದ ಇಂತಹ ವ್ಯಕ್ತಿಗಳಿಗೆ ದೇಶದ ಆಡಳಿತ ನೀಡುವುದು ಸುರಕ್ಷಿತವಲ್ಲ ಎಂದು ಜನತೆ ನಿರ್ಣಯ ಕೈಗೊಳ್ಳಬೇಕು.

ಬಿಜೆಪಿ ಏಕಾಂಗಿಯಾಗಿ 272 ಸೀಟು ಅಥವಾ ಎನ್‌ಡಿಎ 300ಕ್ಕಿಂತ ಹೆಚ್ಚು ಸ್ಥಾನ ಗಳಿಸುವ ಬಗ್ಗೆ ವಿಶ್ವಾಸವಿದೆಯೇ?

ಈ ಹಿಂದಿನ ಚುನಾವಣೆಯಲ್ಲೂ ನಾನು ಪೂರ್ಣ ಬಹುಮತದ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದೆ. ಆದರೆ ಮೋದಿ ಹವಾ ಇಲ್ಲ, ಗುಜರಾತಿನಿಂದಾಚೆ ಅವರ ಪ್ರಭಾವವಿಲ್ಲ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ದೇಶದ ಜನತೆ ಸಾಕಾರಗೊಳಿಸಿದರು. 30 ವರ್ಷಗಳ ಕಾಲ ಅಸ್ಥಿರತೆಯನ್ನು ದೇಶ ನೋಡಿತ್ತು. ದೇಶಕ್ಕೆ ಸಮ್ಮಿಶ್ರ ಸರ್ಕಾರ ಬೇಡ. ಸ್ಥಿರತೆಯನ್ನು ದೇಶ ಬಯಸುತ್ತದೆ. ಸಮ್ಮಿಶ್ರ ಕೂಟದ ಪ್ರಮುಖ ಪಕ್ಷಕ್ಕೆ ಪೂರ್ಣ ಬಹುಮತ ಕೊಟ್ಟು, ಇತರೆ ಪಕ್ಷಗಳಿಗೂ ಉತ್ತಮ ಶಕ್ತಿ ನೀಡಿದರೆ ಆಡಳಿತ ಚೆನ್ನಾಗಿರುತ್ತದೆ. ಪೂರ್ಣ ಬಹುಮತ ಪಡೆದ ಸರ್ಕಾರವನ್ನು ವಿಶ್ವದ ನಾಯಕರು ನೋಡುವ ರೀತಿಯೇ ಬೇರೆ ಇರುತ್ತದೆ. ದೇಶ ಅಸ್ಥಿರತೆಯತ್ತ ಹೋಗುವುದು ಜನರಿಗೆ ಇಷ್ಟವಿಲ್ಲ. 3 ದಶಕಗಳ ಅಸ್ಥಿರತೆಯ ಸರ್ಕಾರ ಹಾಗೂ 5 ವರ್ಷಗಳ ಸ್ಥಿರ ಸರ್ಕಾರ ಎರಡನ್ನೂ ಗಮನಿಸಿ, ಹೊಸ ಸರ್ಕಾರ ಬರುವುದಾದರೆ ಅದು ಪೂರ್ಣ ಬಹುಮತದ ಸರ್ಕಾರ ಆಗಬೇಕು ಎಂದು ಜನತೆ ಬಯಸುತ್ತಿದ್ದಾರೆ. ನನ್ನ ಅನುಭವದಲ್ಲಿ ಹೇಳುವುದಾದರೆ, ಮೊದಲೆಲ್ಲಾ ಮೋದಿ ಎಂದರೆ ಯಾರು ಎನ್ನುತ್ತಿದ್ದರು. ಈಗ ಎಲ್ಲರಿಗೂ ಗೊತ್ತಿದೆ. ಸುರಕ್ಷತೆಯ ವಿಷಯಕ್ಕೆ ಬಂದರೆ ಮೋದಿ ಏನು ಮಾಡಿದ್ದಾನೆ? ಬಡವರ ವಿಷಯಕ್ಕೆ ಬಂದರೆ ಮೋದಿ ಏನು ಮಾಡಿದ್ದಾನೆ? ಮೋದಿ ನೀತಿ ಏನು, ಆತನ ನಿಯತ್ತು ಏನು, ಕೆಲಸ ಏನು ಎಂಬುದನ್ನು ದೇಶದ ಜನತೆ ನೋಡಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಅಥವಾ ಹಿಂದೆ ಗಳಿಸಿದ್ದಕ್ಕಿಂತ ಹೆಚ್ಚು ಸ್ಥಾನ ಗಳಿಸುತ್ತದೆ. ಎನ್‌ಡಿಎ ಜತೆಗೂಡಿ ಈ ಹಿಂದಿನದಕ್ಕಿಂತ ಹೆಚ್ಚು ಸೀಟು ಗಳಿಸುತ್ತದೆ.

ಫೆ.14ರಂದು ಪುಲ್ವಾಮಾ ದಾಳಿ ನಡೆದಾಗ ತಾವು ಎಲ್ಲಿದ್ದಿರಿ? ತಮಗೆ ಮೊದಲು ಸುದ್ದಿ ಯಾವಾಗ ಸಿಕ್ಕಿತು? ಮೊದಲ ಪ್ರತಿಕ್ರಿಯೆ ಏನಾಗಿತ್ತು?

ಪೂರ್ವನಿರ್ಧರಿತ ಕಾರ್ಯಕ್ರಮಕ್ಕೆಂದು ಉತ್ತರಾಖಂಡಕ್ಕೆ ತೆರಳಿದ್ದೆ. ಪರಿಸರಕ್ಕೆ ಸಂಬಂಧಿಸಿದ ದಿನಪೂರ್ತಿ ಕಾರ್ಯಕ್ರಮವಿತ್ತು. ಪುಲ್ವಾಮಾ ದಾಳಿಯಾದಾಗ ಉತ್ತರಾಖಂಡದಲ್ಲಿ ಭಾರಿ ಮಳೆಯಾಗುತ್ತಿತ್ತು. ನನ್ನದು ಒಂದು ಬೃಹತ್‌ ರಾರ‍ಯಲಿ ಇತ್ತು. ಹೋಗಲಾಗದ ಕಾರಣ ಮೊಬೈಲ್‌ ಮೂಲಕ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದೆ. ದೊಡ್ಡ ರಾರ‍ಯಲಿಯಲ್ಲಿ ಅಂತಹ ಸುದ್ದಿಯ ಬಗ್ಗೆ ಚರ್ಚೆ ಮಾಡಬಾರದು. 2013ರ ಅಕ್ಟೋಬರ್‌ನಲ್ಲಿ ಬಿಹಾರದಲ್ಲಿ ನನ್ನ ರಾರ‍ಯಲಿಯಲ್ಲೇ ಬಾಂಬ್‌ ಸ್ಫೋಟವಾಗಿತ್ತು. ಆಗ ನಾನು ಸಮತೋಲನ ಕಳೆದುಕೊಂಡಿದ್ದರೆ, ಉತ್ತಮವಾಗಿ ನಿರ್ವಹಿಸದೇ ಇದ್ದರೆ ಅನಾಹುತವಾಗುತ್ತಿತ್ತು. ಆ ಸಮಯದಲ್ಲಿ ನಾನು ಶಾಂತಿಯಿಂದ ವರ್ತಿಸುವಂತೆ ಕರೆ ನೀಡಿದ್ದೆ. ಆನಂತರ ಜನರಿಗೆ ಬಾಂಬ್‌ ಸ್ಫೋಟ, ಸಾವಿನ ಬಗ್ಗೆ ಗೊತ್ತಾಗಿತ್ತು. ಅಂತಹ ಸ್ಥಿತಿಯಲ್ಲಿ ಸಂತುಲಿತ ರೀತಿಯಲ್ಲಿ ವ್ಯವಹಾರ ಮಾಡಬೇಕು. ಆ ರೀತಿಯ ವಿಷಯದಲ್ಲಿ ರಾಜಕೀಯ ಮಾಡುವುದು ನನಗೆ ಗೊತ್ತಿಲ್ಲ.

ಪುಲ್ವಾಮಾ ದಾಳಿಯಾದ 24 ಗಂಟೆಯಲ್ಲೇ ಕಠಿಣ ಕ್ರಮದ ಭರವಸೆಯನ್ನು ನೀಡಿದ್ದಿರಿ. 24 ಗಂಟೆಯಲ್ಲೇ ಬಾಲಾಕೋಟ್‌ ದಾಳಿ ಬಗ್ಗೆ ನಿರ್ಧರಿಸಿದ್ದಿರೆ?

ಆ ಬಗ್ಗೆ ಯೋಜನೆ ರೂಪಿಸುವುದು ಪ್ರಧಾನಿಯವರ ಕೆಲಸವಲ್ಲ. ಯಾವ ಪ್ರಧಾನಿಯೂ ಆ ಕೆಲಸ ಮಾಡುವುದಿಲ್ಲ. ಹಾಗೆ ಹೇಳಿದರೆ ಅದು ಸುಳ್ಳು. ಅದಕ್ಕೆ ನೈಪುಣ್ಯ ಬೇಕಾಗುತ್ತದೆ. ಮಾಹಿತಿ ಕ್ರೋಡೀಕರಿಸಬೇಕಾಗುತ್ತದೆ. ವಿವಿಧ ಸಂಸ್ಥೆಗಳು ಕೆಲಸ ಮಾಡಬೇಕಾಗುತ್ತದೆ. ಆಗಿನ ಪರಿಸ್ಥಿತಿಯಲ್ಲಿ ದೇಶದ ಆಸೆ, ಅಪೇಕ್ಷೆ ಏನು ಎಂಬುದನ್ನು ಪ್ರಧಾನಿ ನೋಡಿಕೊಳ್ಳಬೇಕಾಗುತ್ತದೆ. ಸಶಸ್ತ್ರ ಪಡೆಗಳು ಯೋಜನೆ ರೂಪಿಸಿದವು, ನಾನು ಮುಕ್ತ ಸ್ವಾತಂತ್ರ್ಯ ನೀಡಿದೆ.

ವಾಯುಪಡೆ ದಾಳಿ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಿರೇ?

ನಿದ್ರೆ ಮಾಡಲು ಆಗಲಿಲ್ಲ. ಏನಾಗುತ್ತಿದೆ ಎಂಬುದರ ಅರಿವಿತ್ತು.

ಪುಲ್ವಾಮಾ ಪ್ರಕರಣದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌- ತಮ್ಮ ನಡುವೆ ಮ್ಯಾಚ್‌ಫಿಕ್ಸಿಂಗ್‌ ಆಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆಯಲ್ಲಾ?

ಈ ದೇಶದ ಯಾವುದೇ ವ್ಯಕ್ತಿ ನರೇಂದ್ರ ಮೋದಿ ದೇಶಭಕ್ತಿಯನ್ನು ಪ್ರಶ್ನಿಸುವುದಿಲ್ಲ. ನಾನು ಶಬ್ದಗಳಲ್ಲಿ ಹೇಳಬೇಕಿಲ್ಲ. ನನ್ನ ಜೀವನವೇ ತಿಳಿಸುತ್ತದೆ. ಈ ಮನಸ್ಥಿತಿಯ ವ್ಯಕ್ತಿಗಳು ರಾಜಕೀಯ ಸ್ವಾರ್ಥಕ್ಕಾಗಿ ಇಂತಹ ದೊಡ್ಡ ಘಟನೆಯನ್ನು ಯಾವ ಹಂತಕ್ಕೆ ಬೇಕಾದರೂ ಒಯ್ಯುತ್ತಾರೆ ಎಂಬುದರ ಬಗ್ಗೆ ದೇಶವೇ ಚಿಂತೆ ಪಡಬೇಕು. ಈ ಆರೋಪದಲ್ಲಿ ಸತ್ಯ ಇದ್ದರೆ, ಇದನ್ನು ಪ್ರತಿಪಕ್ಷಗಳು ಜನತೆ ಮುಂದೆ ಇಡಲಿ. ಜನರೇ ನಿರ್ಧರಿಸಲಿ.

ಮಹಾಗಠಬಂಧನ ಬಗ್ಗೆ ಅಭಿಪ್ರಾಯ?

ದೇಶದ ಜನತೆ ನಮಗೆ ಸ್ಪಷ್ಟಬಹುಮತ ನೀಡಲು ನಿರ್ಧರಿಸಿರುವಾಗ, ನಮ್ಮನ್ನು ಅಧಿಕಾರದಿಂದ ದೂರವಿಡಲಾಗದು. ಪೂರ್ಣ ಬಹುಮತ ನೀಡಲು ಹಾಗೂ ಎನ್‌ಡಿಎ ಸರ್ಕಾರವನ್ನು ಮರುಸ್ಥಾಪಿಸಲು ದೇಶ ತೀರ್ಮಾನಿಸಿದೆ. ಅದನ್ನು ಪ್ರಶ್ನಿಸಲು ಯಾರಿಂದಲೂ ಆಗದು.

ನಿಮ್ಮ ಬಟ್ಟೆಗಳ ಬಗ್ಗೆ ಆರೋಪವಿದೆಯಲ್ಲಾ?

ನನ್ನ ಬಳಿ 250 ಜೊತೆ ಬಟ್ಟೆಇವೆ ಎಂದು ಪ್ರತಿಪಕ್ಷಗಳು ಆರೋಪಿಸುವಾಗ, 250 ಕೋಟಿ ರು. ಕದಿಯುವ ಬದಲು ಅದೇ ಉತ್ತಮ ಎಂದು ನಾನು ಹೇಳುತ್ತೇನೆ.

ಬಡತನ ನಿರ್ಮೂಲನೆಗಾಗಿ ಕಾಂಗ್ರೆಸ್‌ ‘ನ್ಯಾಯ’ ಯೋಜನೆ ರೂಪಿಸಿದೆಯಲ್ಲಾ?

ಬಡತನ ನಿರ್ಮೂಲನೆ ಬಗ್ಗೆ ಒಂದೇ ಕುಟುಂಬದ 4 ಪೀಳಿಗೆ ಮಾತನಾಡಿದೆ. ಇಂದಿರಾ ಗಾಂಧಿ ಮಾತನಾಡಿದ್ದರು. ರಾಜೀವ್‌ ಗಾಂಧಿ ಮಾತನಾಡಿದ್ದರು. ಈಗ ರಾಹುಲ್‌ ಗಾಂಧಿ.

ತಾವು ಕೈಗಾರಿಕೆಗಳ ಪರ ಇದ್ದೀರಂತೆ?

2.5 ಕೋಟಿ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕವನ್ನು ಸರ್ಕಾರ ಒದಗಿಸಿದೆ. ಅವರೆಲ್ಲಾ ಕೈಗಾರಿಕೋದ್ಯಮಿಗಳೇ?

ಸರ್ಕಾರ ರಾಜಕೀಯ ದ್ವೇಷದಲ್ಲಿ ತೊಡಗಿದೆ ಎಂದು ವಾದ್ರಾ ಆರೋಪಿಸುತ್ತಿದ್ದಾರೆ? ಅವರ ಪ್ರಕರಣದಲ್ಲಿ ತನಿಖೆ ತಡವಾಗಿದ್ದು ಏಕೆ?

ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿ ಕಾನೂನು ವ್ಯವಸ್ಥೆ ಇದೆ. ಜನರಿಗೆ ನೋಟಿಸ್‌ ಬರುತ್ತದೆ. ನೋಟಿಸ್‌ ಬಂದ ಬಳಿಕ ಅದಕ್ಕೆ ಪ್ರತಿಕ್ರಿಯೆ ಕೊಡಬೇಕು. ಆದರೆ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಲವು ನೋಟಿಸ್‌ಗಳನ್ನು ಕಳುಹಿಸಲಾಯಿತು. ಆದರೆ ತಮ್ಮನ್ನು ರಾಜ- ಮಹಾರಾಜ ಎಂದು ಭಾವಿಸುವ ವ್ಯಕ್ತಿಗಳು ನೋಟಿಸ್‌ಗೆ ಪ್ರತಿಕ್ರಿಯೆ ನೀಡಲಿಲ್ಲ. ಆಗ ನಾವು ಕೋರ್ಟಿಗೆ ಹೋದೆವು. ನ್ಯಾಯಾಲಯಗಳಿಂದ ದಿನಾಂಕ ಪಡೆಯುವುದು ಸುಲಭವಿಲ್ಲ. ಹೀಗಾಗಿಯೇ ಪ್ರಕರಣ ತಡವಾಯಿತು. ಇದೆಲ್ಲಾ ಆದ ಮೇಲೆಯೇ ಅವರು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡರು. ನಾವು ರಾಜಕೀಯ ದ್ವೇಷ ಸಾಧಿಸಬೇಕು ಎಂದಿದ್ದರೆ, ಥಟ್ಟನೆ ಮಾಡಬಹುದಿತ್ತು. ಆದರೆ ನಮಗೆ ಅದು ಬೇಕಿಲ್ಲ. ಏನಾದರೂ ತಪ್ಪಾದರೆ, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ನಾವು ಹೇಳುತ್ತೇವೆ.

ಕೆಲವರನ್ನು ಗುರಿಯಾಗಿಸಿಕೊಂಡು ಬಿಜೆಪಿ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆಯಲ್ಲಾ?

ನೋಡಿ, ನಾವು ಏನೂ ಮಾಡದೇ ಹೋದರೆ, ಏನೂ ಮಾಡಲಿಲ್ಲವೇಕೆ ಎಂದು ಪ್ರಶ್ನಿಸುತ್ತೀರಿ. ನಾವು ಏನನ್ನಾದರೂ ಮಾಡಿದರೆ, ಅದು ರಾಜಕೀಯ ಪ್ರೇರಿತ ಎನ್ನುತ್ತೀರಿ. ಹಾಗಾದರೆ ನಿಮ್ಮ ಸಮಸ್ಯೆಯಾದರೂ ಏನು? ಟೊಮೆಟೋ ದುಬಾರಿಯಾದರೆ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದೀರಿ ಎಂದು ಪತ್ನಿಯನ್ನು ಕೇಳುತ್ತೀರಿ. ಒಂದು ವೇಳೆ ಟೊಮೆಟೋ ಬೆಲೆ ಕುಸಿದರೆ, ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಿದ್ದೀರಿ ಎಂದು ರೈತರನ್ನು ಕೇಳುತ್ತೀರಿ.


ಪ್ರಧಾನಿ ಆಯ್ದ ಅಭಿಪ್ರಾಯಗಳು ‘ಚಾಯ್‌ವಾಲಾ’ ಹುಡುಕಿ ತೆಗೆದ ಟೀಕೆ

ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಚಾಯ್‌ವಾಲಾ ಎಂಬ ಟೀಕೆಯನ್ನು ಕೇಳಿದ್ದಿರಾ? ನಾನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಕೂಡಲೇ ಅದನ್ನು ಹುಡುಕಿ ತೆಗೆದರು.

ರಕ್ಷಣಾ ವ್ಯವಹಾರ ಎಟಿಎಂ ಆಗಿತ್ತು

ಹಿಂದಿನ ಸರ್ಕಾರಗಳು ರಕ್ಷಣಾ ವ್ಯವಹಾರಗಳು ಎಟಿಎಂ ರೀತಿ ಬಳಸಿಕೊಂಡವು. ಪಾರದರ್ಶಕವಾಗಿ ಈ ವ್ಯವಹಾರ ನಡೆಸಬಹುದು ಎಂಬುದನ್ನು ಅವು ಕಲ್ಪಿಸಿಕೊಂಡಿರಲೂ ಇಲ್ಲ.

‘ಪರಾರಿವೀರರು’ ಫುಟ್‌ಪಾತ್‌ ಮೇಲಿದ್ದಾರೆ

ದಿವಾಳಿ ಕಾನೂನನ್ನು ಜಾರಿಗೆ ತಂದಿದ್ದೇವೆ. ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳು ತಮ್ಮ ಕಂಪನಿಗಳನ್ನು ಕಳೆದುಕೊಂಡು, ಫುಟ್‌ಪಾತ್‌ಗೆ ಬಂದಿದ್ದಾರೆ. ಅವರ ಕಂಪನಿಗಳು ಸೂಕ್ತ ಆಡಳಿತ ಮಂಡಳಿಯ ಕೈಯಲ್ಲಿವೆ. ತಲೆಮರೆಸಿಕೊಂಡ ವಂಚಕರ ವಿರುದ್ಧ ಕಾನೂನು ತಂದಿದ್ದೇವೆ. ಅವರು ಎಲ್ಲೇ ಅಡಗಿ ಕುಳಿತುಕೊಂಡಿದ್ದರೂ, ಅವರ ಹಣವನ್ನು ನಾವು ಜಪ್ತಿ ಮಾಡಬಹುದಾಗಿದೆ. ಎಲ್ಲ ವಂಚಕರು ತಾವು ವಾಪಸ್‌ ಬರಲು ಸರ್ಕಾರ ಬದಲಾಗಲಿ ಎಂದು ಕಾಯುತ್ತಿದ್ದಾರೆ.

- ನರೇಂದ್ರ ಮೋದಿ, ಪ್ರಧಾನಮಂತ್ರಿ