ಮಂಡ್ಯ[ಮಾ.12]: ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಮಂಡ್ಯ ಕ್ಷೇತ್ರದಲ್ಲಿ ನಿರಂತರವಾಗಿ ಕ್ಷೇತ್ರಪರ್ಯಟನೆ ನಡೆಸುತ್ತಿರುವ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ, ಚಿತ್ರನಟಿ ಸುಮಲತಾ ಅಂಬರೀಷ್‌ ಇನ್ನು ಒಂದು ವಾರದೊಳಗೆ ಅಥವಾ ಮಾಚ್‌ರ್‍ 18ರಂದು ನಿಶ್ಚಿತವಾಗಿ ತನ್ನ ರಾಜಕೀಯ ನಿರ್ಧಾರ ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆ.

ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಷ್‌, ರಾಜಕೀಯದಲ್ಲಿ ಕೊನೇ ಕ್ಷಣದವರೆಗೂ ಏನೂ ಹೇಳಲು ಸಾಧ್ಯವಿಲ್ಲ. ಕೊನೆ ಘಳಿಗೆಯಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು. ಅದಕ್ಕಾಗಿ ನನ್ನ ನಿರ್ಧಾರ ಏನೆಂಬುದನ್ನು ಮೂರ್ನಾಲ್ಕು ದಿನಗಳಲ್ಲಿ ಆಪ್ತರೊಂದಿಗೆ ಚರ್ಚೆ ಮಾಡುತ್ತೇನೆ. ನನ್ನ ಸ್ಪರ್ಧೆ ಬಗ್ಗೆ ಮಾ.18ರಂದು ನಿರ್ಧಾರ ಘೋಷಣೆ ಮಾಡುವುದಾಗಿ ಸ್ಪಷ್ಟಪಡಿಸಿದರು.

ಏ.18ರಂದು ನಡೆಯುವ ಲೋಕಸಭಾ ಚುನಾವಣೆಗೆ ತಾವು ಸ್ಪರ್ಧಿಸಲೇಬೇಕೆಂಬ ಒತ್ತಡ ಹೆಚ್ಚಾಗಿದೆ. ಜಿಲ್ಲೆಯ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಹಾಗೂ ಅಂಬರೀಷ್‌ ಅಭಿಮಾನಿಗಳು ನನ್ನ ಮೇಲೆ ಅಪಾರ ವಿಶ್ವಾಸ ಇಟ್ಟು ಒತ್ತಾಯಿಸುತ್ತಿದ್ದಾರೆ. ನಾನು ಕೂಡ ಕೆಲ ದಿನಗಳಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ಪೂರಕ ಅಭಿಪ್ರಾಯಗಳು ಕೇಳಿ ಬಂದಿವೆ. ಆದರೂ ಅಂತಿಮ ನಿರ್ಧಾರಕ್ಕೆ ಇನ್ನೂ ಒಂದು ವಾರ ಸಮಯ ಬೇಕು ಎಂದರು.

ಡಿಕೆಶಿಯಿಂದ ಒತ್ತಡ ಬಂದಿಲ್ಲ:

ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬಾರದೆಂದು ಸಚಿವ ಡಿ.ಕೆ.ಶಿವಕುಮಾರ್‌ ನನ್ನ ಮೇಲೆ ಯಾವುದೇ ಒತ್ತಡ ಹಾಕಿಲ್ಲ. ಬದಲಿಗೆ ಮಂಡ್ಯ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ. ಆದರೆ ನಾನು ಚುನಾವಣೆಗೆ ಸ್ಪರ್ಧಿಸುವುದಿದ್ದರೆ ಮಂಡ್ಯ ಕ್ಷೇತ್ರದಿಂದ ಮಾತ್ರ. ಎಂತಹ ಪರಿಸ್ಥಿತಿ ಎದುರಾದರೂ ಮಂಡ್ಯ ಬಿಟ್ಟು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದರ್ಶನ್‌ಗೆ ನಾನು ಮದರ್‌ ಇಂಡಿಯಾ

ಅಂಬರೀಷ್‌ ಬದುಕಿದ್ದಾಗ ನಟ ದರ್ಶನ್‌ ನಮ್ಮ ಕುಟುಂಬದ ಮೇಲೆ ಯಾವ ರೀತಿ ಪ್ರೀತಿ ಹೊಂದಿದ್ದರೋ ಈಗಲೂ ಅದೇ ಪ್ರೀತಿ- ವಿಶ್ವಾಸ ತೋರುತ್ತಾರೆ. ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ‘ನೀವು ಆರ್ಡರ್‌ ಮಾಡಿ ಮದರ್‌ ಇಂಡಿಯಾ, ನಾನು ನಿಮ್ಮ ಮಾತನ್ನು ಶಿರಸಾವಹಿಸಿ ಪಾಲಿಸುತ್ತೇನೆ’ ಎಂಬ ಭರವಸೆ ನೀಡಿದ್ದಾರೆ. ಅಲ್ಲದೆ ಸಿನಿಮಾ ರಂಗದ ಹಲವರೂ ನನ್ನ ಬೆಂಬಲಕ್ಕೆ ನಿಂತಿರುವುದು ಬಲ ಬಂದಂತಾಗಿದೆ ಎಂದು ಹೇಳಿದರು.

ರೇವಣ್ಣಗೆ ಪ್ರತಿಕ್ರಿಯೆ ಇಲ್ಲ

ಸಚಿವ ರೇವಣ್ಣ ಹೇಳಿಕೆಗೆ ಸಂಬಂಧಿಸಿದಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಜಿಲ್ಲೆ ಮತ್ತು ರಾಜ್ಯದ ಜನರು ಎಲ್ಲವನ್ನೂ ಗಮನಿಸಿದ್ದಾರೆ. ಅಂತಿಮವಾಗಿ ಜನರೇ ಪ್ರತಿಕ್ರಿಯೆ ನೀಡುತ್ತಾರೆ. ಸಚಿವ ರೇವಣ್ಣ ಹೇಳಿಕೆ ಕುರಿತು ಸಿಎಂ ಕುಮಾರಸ್ವಾಮಿ ಕ್ಷಮೆ ಕೇಳಿರುವುದು ಸಂತಸದ ವಿಚಾರ ಎಂದು ಸುಮಲತಾ ಪ್ರತಿಕ್ರಿಯಿಸಿದ್ದಾರೆ.