ಮಂಡ್ಯ :  ಲೋಕಸಭಾ ಚುನಾವಣೆಯ ಅಖಾಡದಲ್ಲಿ ನಾನು ಒಂಟಿಯಲ್ಲ. ನನ್ನ ಜೊತೆ ಅಭಿಮಾನಿಗಳು ಇದ್ದಾರೆ ಎಂದು ಮಂಡ್ಯ ಲೋಕಸಭಾ ಸ್ಪರ್ಧಾಕಾಂಕ್ಷಿ ಸುಮಲತಾ ಅಂಬರೀಷ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ನಗರದ ಲಕ್ಷ್ಮೇಜನಾರ್ದನ ಸ್ವಾಮಿ ದೇವಾಲಯದಲ್ಲಿ ವೈರಮುಡಿ, ರಾಜಮುಡಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣಾ ಸ್ಪರ್ಧೆ ಬಗ್ಗೆ ಜನರ ಅಭಿಪ್ರಾಯವನ್ನು ತಿಳಿಯಲು ನಾನು ಎಂಟು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಮುಗಿಸಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರವಾಸದ ಸಮಯದಲ್ಲಿ ರೈತರನ್ನು ಭೇಟಿ ಮಾಡಿದ್ದೇನೆ. ಹಲವು ಸಲಹೆಗಳನ್ನು ನೀಡಿದ್ದಾರೆ. ಅದೆಲ್ಲವನ್ನೂ ಮನಸ್ಸಿನಲ್ಲಿ ಇಟ್ಟು ಕೊಂಡಿದ್ದೇನೆ. ನಾನು ಯಾರನ್ನೂ ಟೀಕೆ ಮಾಡುವುದಿಲ್ಲ. ಹಿರಿಯರಿಗೆ ಗೌರವ ಕೊಡುತ್ತೇನೆ. ಬಿಜೆಪಿ ಬೆಂಬಲ ಕೊಡುವ ಬಗ್ಗೆ ಅಧಿಕೃತವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ. ಮಾಜಿ ಸಂಸದ ಜಿ.ಮಾದೇಗೌಡ ಬೆಂಬಲ ನೀಡುವ ವಿಶ್ವಾಸವಿದೆ ಎಂದು ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಮಾಜಿ ಸಚಿವ ಚೆಲುವರಾಯಸ್ವಾಮಿ ಬೆಂಬಲ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ನನ್ನ ಫೇಸ್‌ಬುಕ್‌ ಅಧಿಕೃತ ಪೇಜ್‌ನಿಂದ ಅಂತಹ ಯಾವುದೇ ಸಂದೇಶವನ್ನು ನಾನು ಹಾಕಿಲ್ಲ ಎಂದು ಉತ್ತರಿಸಿದರು. ಮಂಡ್ಯದಲ್ಲಿ ಕಾಂಗ್ರೆಸ್‌ನವರು ಕೈ ಕೊಟ್ರೆ, ನಾವು ಮೈಸೂರಿನಲ್ಲಿ ಕೈಕೊಡುತ್ತೇವೆ ಎಂಬ ಸಚಿವ ಸಾ.ರಾ.ಮಹೇಶ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಗೆ ಏನು ಹೇಳಬೇಕೋ ನನಗೆ ಗೊತ್ತಾಗುತ್ತಿಲ್ಲ. ನಿಖಿಲ್‌ ನನ್ನ ವಿರೋಧಿಯಲ್ಲ. ನಿಖಿಲ್‌, ಅಭಿಷೇಕ್‌ ಇಬ್ಬರೂ ಒಳ್ಳೆಯ ಸ್ನೇಹಿತರಾಗಿ ಇರುತ್ತಾರೆ ಎಂದು ಉತ್ತರಿಸಿದರು.

ಫೇಸ್‌ಬುಕ್‌ನಲ್ಲಿ ಸಂತಸ:  ಮಂಡ್ಯ ಜನರ ಪ್ರೀತಿಗೆ ನಾನು ತಲೆ ಬಾಗಿದ್ದೇನೆ. ನೀವೆಲ್ಲಾ ನನ್ನನ್ನು ಅಮ್ಮ, ಅತ್ತಿಗೆ, ಅಕ್ಕ ಎಂದು ಕರೆಯುವಾಗ ಅದೆಷ್ಟೋ ಸಂತೋಷವಾಗುತ್ತದೆ. ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ರೀತಿ ವಾತ್ಸಲ್ಯ ತೋರಿಸುತ್ತೀರಿ. ನಿಜವಾಗಿಯೂ ಅಂಬರೀಷ್‌ ಅವರಂತಹ ಹೃದಯವಂತನ ಪತ್ನಿಯಾಗಿದ್ದಕ್ಕೆ ಸಾರ್ಥಕವಾಯಿತು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.