ನವದೆಹಲಿ: ಏಳು ಹಂತದ ಲೋಕಸಭೆ ಚುನಾವಣೆಯ ಪೈಕಿ ಮೊದಲ 3 ಹಂತದ ಮತದಾನ ಮುಕ್ತಾಯವಾಗಿದೆ. ಆದರೆ ಕೇಂದ್ರದಲ್ಲಿ ಮತ್ತೊಮ್ಮೆ ಗದ್ದುಗೆಗೇರಲು ಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಸೋಮವಾರದಿಂದ ಆರಂಭವಾಗಲಿರುವ 4ನೇ ಹಂತದ ಚುನಾವಣೆಯಿಂದ ಅಸಲಿ ಸತ್ವ ಪರೀಕ್ಷೆ ಎದುರಾಗಲಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿತ್ತು. ಆ ಪೈಕಿ 161 ಸ್ಥಾನಗಳು ಸಿಕ್ಕಿದ್ದು 4ನೇ ಹಂತದಿಂದ ಚುನಾವಣೆ ಎದುರಿಸಲಿರುವ 240 ಕ್ಷೇತ್ರಗಳಲ್ಲಿ ಎಂಬುದು ಗಮನಾರ್ಹ. ಈ 240 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಹೊರತುಪಡಿಸಿದರೆ 30 ಸೀಟುಗಳನ್ನು ತೃಣಮೂಲ ಕಾಂಗ್ರೆಸ್‌ ವಶಪಡಿಸಿಕೊಂಡಿದ್ದರೆ, ಕಾಂಗ್ರೆಸ್‌ 9 ಕ್ಷೇತ್ರಗಳಲ್ಲಿ ಮಾತ್ರವೇ ಗೆದ್ದಿತ್ತು. ಉಳಿಕೆ ಸ್ಥಾನಗಳು ಸಣ್ಣಪುಟ್ಟಪಕ್ಷಗಳ ಪಾಲಾಗಿದ್ದವು. ಹೀಗಾಗಿ ಬಿಜೆಪಿ ಪಾಲಿಗೆ ಉಳಿದ 4 ಹಂತದ ಚುನಾವಣೆ ಭಾರೀ ಮಹತ್ವದ್ದಾಗಿದೆ.

ನಾಲ್ಕನೇ ಹಂತದಿಂದ ಚುನಾವಣೆ ಎದುರಿಸಲಿರುವ 240 ಕ್ಷೇತ್ರಗಳ ಪೈಕಿ 2014ರಲ್ಲಿ 96 ಕಡೆ ಕಾಂಗ್ರೆಸ್‌ 2ನೇ ಸ್ಥಾನ ಪಡೆದಿತ್ತು. 20 ಕ್ಷೇತ್ರಗಳಲ್ಲಿ ಬಿಎಸ್ಪಿ, 18ರಲ್ಲಿ ಎಸ್ಪಿ, 17ರಲ್ಲಿ ಆರ್‌ಜೆಡಿ, 22ರಲ್ಲಿ ಸಿಪಿಎಂ ಎರಡನೇ ಸ್ಥಾನ ಗಳಿಸಿದ್ದವು. ಕಳೆದ ಬಾರಿಯಂತೆ ಈ ಸಲವೂ ಉತ್ತಮ ಪ್ರದರ್ಶನ ತೋರಲು ಬಿಜೆಪಿ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದೆ. ಅದರಲ್ಲಿ ಯಶಸ್ಸು ಸಿಕ್ಕರೆ ಮತ್ತೊಮ್ಮೆ ಅಧಿಕಾರ ಸಲೀಸಲಾಗಲಿದೆ ಎಂದು ವಿಶ್ಲೇಷಣೆಗಳು ತಿಳಿಸಿವೆ.

ಹಿಂದಿ ಭಾಷಿಕ ಪ್ರದೇಶಗಳು ಹಿಂದಿನಿಂದಲೂ ಬಿಜೆಪಿಯ ಶಕ್ತಿ ಕೇಂದ್ರ. ಆದರೆ ಉತ್ತರಪ್ರದೇಶದಲ್ಲಿ ಎಸ್‌ಪಿ- ಬಿಎಸ್ಪಿ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿ ಪಾಲಿಗೆ ದೊಡ್ಡ ಹೊಡೆತವಾಗಿದೆ. ಕಳೆದ ಬಾರಿ ಬಿಜೆಪಿಗೆ ದೊಡ್ಡ ಬಲ ತಂದುಕೊಟ್ಟಿದ್ದು ಉತ್ತರಪ್ರದೇಶ. ಆದರೆ ಈ ಬಾರಿ ಅಲ್ಲಿ ಕಳೆದ ಬಾರಿಯಷ್ಟುಸ್ಥಾನ ಲಭಿಸುವುದು ಕಷ್ಟವಾಗಿರುವ ಕಾರಣ, ಉಳಿದ ರಾಜ್ಯಗಳತ್ತ ಬಿಜೆಪಿ ಹೆಚ್ಚು ಗಮನ ಹರಿಸಿದೆ. ಮತ್ತೊಂದೆಡೆ ಈಶಾನ್ಯದ ಹಲವು ರಾಜ್ಯಗಳು ಈ ಬಾರಿ ಬಿಜೆಪಿ ತೆಕ್ಕೆಯಲ್ಲಿರುವುದು ಕಮಲ ಪಕ್ಷದ ಪಾಳಯಕ್ಕೆ ಸ್ವಲ್ಪ ಲಾಭ ತಂದುಕೊಡುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರವಿದೆ.

71 ಕ್ಷೇತ್ರಗಳಲ್ಲಿ ಸೋಮವಾರ ಮತದಾನ

 2019ರ ಲೋಕಸಭಾ ಚುನಾವಣೆಯ 4ನೇ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ ಶನಿವಾರ ಅಂತ್ಯವಾಗಿದೆ. 9 ರಾಜ್ಯಗಳ 71 ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಲಿದೆ. ಬಿಹಾರದ 5, ಜಮ್ಮು-ಕಾಶ್ಮೀರದ 1, ಜಾರ್ಖಂಡ್‌ 3, ಮಧ್ಯಪ್ರದೇಶದ 6, ಮಹಾರಾಷ್ಟ್ರದ 17, ಒಡಿಶಾದ 6, ರಾಜಸ್ಥಾನದ 13, ಉತ್ತರ ಪ್ರದೇಶದ 13 ಮತ್ತು ಪಶ್ಚಿಮ ಬಂಗಾಳದ 8 ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಭದ್ರತೆ ಸೇರಿದಂತೆ ಇತರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. 71 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 943 ಅಭ್ಯರ್ಥಿಗಳು ತಮ್ಮ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಮೇ 19ರವರೆಗೂ ಒಟ್ಟಾರೆ, 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.