Asianet Suvarna News Asianet Suvarna News

ರಾಜ್ಯದಲ್ಲಿಂದು 2ನೇ ಹಂತದ ಲೋಕ ಚುನಾವಣೆ

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಹಂತದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತಿದ್ದು, 237 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
 

Lok Sabha Elections 2019 Karnataka Second Phase Election
Author
Bengaluru, First Published Apr 23, 2019, 7:07 AM IST

ಬೆಂಗಳೂರು :  ರಾಷ್ಟ್ರದ ಮುಂದಿನ ಸರ್ಕಾರವನ್ನು ತೀರ್ಮಾನಿಸುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಹಂತದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತಿದ್ದು, 237 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಎರಡನೇ ಹಂತದಲ್ಲಿ ಶಿವಮೊಗ್ಗ ಸೇರಿದಂತೆ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, 2.43 ಕೋಟಿ ಮತದಾರರು 237 ಅಭ್ಯರ್ಥಿಗಳ ಹಣೆಬರಹವನ್ನು ಬರೆಯಲಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ, ಕೇಂದ್ರ ಸಚಿವರಾದ ಅನಂತಕುಮಾರ್‌ ಹೆಗಡೆ, ರಮೇಶ್‌ ಜಿಗಜಿಣಗಿ, ಮೈತ್ರಿಕೂಟದ ಅಭ್ಯರ್ಥಿಗಳಾದ ಮಧು ಬಂಗಾರಪ್ಪ, ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಸೇರಿದಂತೆ 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 227 ಪುರುಷ ಅಭ್ಯರ್ಥಿಗಳು ಮತ್ತು 10 ಮಹಿಳಾ ಅಭ್ಯರ್ಥಿಗಳು.

ಮೊದಲ ಹಂತದ ಚುನಾವಣೆಯಲ್ಲಿ ಶೇ.68ರಷ್ಟುಮತದಾನವಾಗಿದ್ದು, ಎರಡನೇ ಹಂತದಲ್ಲಿಯೂ ಅದೇ ರೀತಿಯ ಪ್ರತಿಕ್ರಿಯೆ ಮತದಾರರಿಂದ ವ್ಯಕ್ತವಾಗುವ ನಿರೀಕ್ಷೆ ಇದೆ. ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸಬೇಕಾದ ಸಂದಿಗ್ಧತೆಗೆ ಸಿಲುಕಿದ್ದರೆ, ಕಲಬುರಗಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿಂದೆಂದೂ ಇಲ್ಲದ ಪೈಪೋಟಿ ಎದುರಾಗಿದೆ.

ಒಟ್ಟು 28,022 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಕಾರ್ಯಕ್ಕಾಗಿ 2,03,591 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ 1,43,580 ಚುನಾವಣಾ ಸಿಬ್ಬಂದಿ, 34,548 ಪೊಲೀಸ್‌ ಸಿಬ್ಬಂದಿ, 5,407 ಸಂಚಾರ ಸಿಬ್ಬಂದಿ ಮತ್ತು 20,056 ಇತರೆ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ. ಚುನಾವಣಾ ಕಾರ್ಯಕ್ಕಾಗಿ ನಿಯೋಜನೆಗೊಂಡಿರುವ ಸಿಬ್ಬಂದಿ ಈಗಾಗಲೇ ಮತಯಂತ್ರ ಸೇರಿದಂತೆ ಇತರೆ ಸಲಕರಣೆಗಳೊಂದಿಗೆ ತಮಗೆ ವಹಿಸಿರುವ ಮತಗಟ್ಟೆಗೆ ತೆರಳಿ ವಾಸ್ತವ್ಯ ಹೂಡಿದ್ದಾರೆ.

ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, 5605 ಮತಗಟ್ಟೆಗಳನ್ನು ಕ್ಲಿಷ್ಟಕರ ಮತಗಟ್ಟೆಗಳು ಎಂದು ಪರಿಗಣಿಸಲಾಗಿದೆ. 1026 ಮತಗಟ್ಟೆಗಳಲ್ಲಿ ಕೇಂದ್ರ ಮೀಸಲು ಪಡೆಯ 57 ಪಡೆಗಳನ್ನು ನಿಯೋಜಿಸಲಾಗಿದೆ. 2174 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 1479 ಮತಗಟ್ಟೆಯಲ್ಲಿ ವೆಬ್‌ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿವೆ. 1952 ಮತಗಟ್ಟೆಯಲ್ಲಿ ವಿಡಿಯೋಗ್ರಾಫರ್‌ ಚುನಾವಣಾ ಕಾರ್ಯದಲ್ಲಿ ತೊಡಗಲಿದ್ದಾರೆ.

2.43 ಕೋಟಿ ಮತದಾರರ ಪೈಕಿ 5.41 ಲಕ್ಷ ಮತದಾರರು ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಈ ಪೈಕಿ 3.05 ಲಕ್ಷ ಯುವಕರು, 2.35 ಲಕ್ಷ ಯುವತಿಯರು ಮತ್ತು 81 ಇತರ ಮತದಾರರಾಗಿದ್ದಾರೆ. 18-21 ವರ್ಷದ ಯವಜನರು 14.33 ಲಕ್ಷ ಇದ್ದು, ಅವರಲ್ಲಿ 7.93 ಲಕ್ಷ ಯುವಕರು, 6.69 ಲಕ್ಷ ಯುವತಿಯರು ಮತ್ತು 205 ಇತರ ಮತದಾರರಿದ್ದಾರೆ. 2.38 ಲಕ್ಷ ಅಂಗವಿಕಲ ಮತದಾರರಿದ್ದಾರೆ. ಅಂಗವಿಕಲ ಮತದಾರರಿಗೆ ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಬೆಳಗಾವಿ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. 57 ಅಭ್ಯರ್ಥಿಗಳು ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ 4 ಎಇವಿಂಗಳನ್ನು ಬಳಕೆ ಮಾಡಲಾಗುತ್ತಿದೆ. ಬೀದರ್‌ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು, ಧಾರವಾಡದಲ್ಲಿ 19 ಮತ್ತು ದಾವಣಗೆರೆಯಲ್ಲಿ 25 ಅಭ್ಯರ್ಥಿಗಳು ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ 2 ಇವಿಎಂ ಬಳಕೆ ಮಾಡಲಾಗುವುದು. ಇನ್ನುಳಿದ ಕ್ಷೇತ್ರದಲ್ಲಿ ಒಂದೊಂದು ಇವಿಎಂ ಬಳಕೆ ಮಾಡಲಾಗುತ್ತಿದೆ. ಎರಡನೇ ಹಂತದ ಚುನಾವಣೆಯಲ್ಲಿ 28,022 ಮತಗಟ್ಟೆಗಳ ಪೈಕಿ 216 ಸಖಿ ಮತಗಟ್ಟೆ, 7 ಸಾಂಪ್ರದಾಯಿಕ ಮತಗಟ್ಟೆಮತ್ತು 37 ಅಂಗವಿಕಲ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 33626 ಕಂಟ್ರೋಲ್‌ ಯೂನಿಟ್‌, 48394 ಬ್ಯಾಲೆಟ್‌ ಯೂನಿಟ್‌ ಮತ್ತು 35028 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ.


ಇಂದು ಎಲ್ಲೆಲ್ಲಿ ಮತದಾನ?

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಹಾಗೂ ಶಿವಮೊಗ್ಗ.


ಮತ ಹಾಕಲು ಈ ದಾಖಲೆಗಳಿದ್ದರೂ ಸಾಕು

ಮತದಾರ ಪಟ್ಟಿಯಲ್ಲಿ ಹೆಸರಿದ್ದು, ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತ ಚಲಾಯಿಸಬಹುದಾಗಿದೆ. 11 ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು. ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಕೇಂದ್ರ/ರಾಜ್ಯ/ಖಾಸಗಿ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ಬ್ಯಾಂಕ್‌ ಅಥವಾ ಅಂಚೆ ಕಚೇರಿಯ ಫೋಟೋದೊಂದಿಗೆ ಪಾಸ್‌ ಬುಕ್‌, ಪಾನ್‌ ಕಾರ್ಡ್‌, ಎನ್‌ಪಿಆರ್‌ ಸ್ಮಾರ್ಟ್‌ಕಾರ್ಡ್‌, ನರೇಗಾ ಕಾರ್ಡ್‌, ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌, ಪೆನ್ಷನ್‌ ದಾಖಲೆ, ಆಧಾರ್‌ ಕಾರ್ಡ್‌, ಶಾಸಕರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಸಾಧ್ಯವಿದೆ.


2ನೇ ಹಂತದ ಚುನಾವಣೆ ವಿಶೇಷ

- 2.43 ಕೋಟಿ ಮತದಾರರು 237 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. 227 ಪುರುಷರು, 10 ಮಹಿಳಾ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ

- 28,022 ಮತಗಟ್ಟೆಗಳಲ್ಲಿ ಮತದಾನ

- ಒಟ್ಟು 2,03,591 ಮಂದಿ ಚುನಾವಣಾ ಕಾರ್ಯಕ್ಕೆ ನೇಮಕ. 143580 ಚುನಾವಣಾ ಸಿಬ್ಬಂದಿ, 34548 ಪೊಲೀಸ್‌ ಸಿಬ್ಬಂದಿ, 5407 ಸಂಚಾರ ಸಿಬ್ಬಂದಿ ಮತ್ತು 20,056 ಇತರೆ ಸಿಬ್ಬಂದಿ ನಿಯೋಜನೆ.

- 5605 ಕ್ಲಿಷ್ಟಕರ ಮತಗಟ್ಟೆಗಳಿವೆ. 1026 ಮತಗಟ್ಟೆಗಳಲ್ಲಿ ಕೇಂದ್ರ ಮೀಸಲು ಪಡೆಯ 57 ಪಡೆ ನಿಯೋಜನೆ. 2174 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರ ಕಾರ್ಯನಿರ್ವಹಣೆ. 1479 ಮತಗಟ್ಟೆಯಲ್ಲಿ ವೆಬ್‌ ಕ್ಯಾಮೆರಾ. 1952 ಮತಗಟ್ಟೆಯಲ್ಲಿ ವಿಡಿಯೋಗ್ರಾಫರ್‌ ಚುನಾವಣಾ ಕಾರ್ಯದಲ್ಲಿ ತೊಡಗಲಿದ್ದಾರೆ.

- ಬೆಳಗಾವಿ ಕ್ಷೇತ್ರದಲ್ಲಿ ಅತ್ಯಧಿಕ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 4 ಎಇವಿಂ ಬಳಸಲಾಗುತ್ತಿದೆ.

- ಬೀದರ್‌ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು, ಧಾರವಾಡದಲ್ಲಿ 19 ಮತ್ತು ದಾವಣಗೆರೆಯಲ್ಲಿ 25 ಅಭ್ಯರ್ಥಿಗಳ ಸ್ಪರ್ಧೆ. ಪ್ರತಿ ಕ್ಷೇತ್ರದಲ್ಲಿ 2 ಇವಿಎಂ ಬಳಕೆ. ಇನ್ನುಳಿದ ಕ್ಷೇತ್ರದಲ್ಲಿ ಒಂದೊಂದು ಇವಿಎಂ ಬಳಕೆ.

- 216 ಸಖಿ ಮತಗಟ್ಟೆ, 7 ಸಾಂಪ್ರದಾಯಿಕ ಮತಗಟ್ಟೆಮತ್ತು 37 ಅಂಗವಿಕಲ ಮತಗಟ್ಟೆಗಳ ಸ್ಥಾಪನೆ.

- 33626 ಕಂಟ್ರೋಲ್‌ ಯೂನಿಟ್‌, 48394 ಬ್ಯಾಲೆಟ್‌ ಯೂನಿಟ್‌ ಮತ್ತು 35028 ವಿವಿಪ್ಯಾಟ್‌ಗಳ ಬಳಕೆ

Follow Us:
Download App:
  • android
  • ios