ಬೆಂಗಳೂರು :  ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಗುರುವಾರ ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಗೊಂದಲವಿರುವ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಅಖೈರುಗೊಳಿಸಿದ್ದು, ಪಟ್ಟಿಯನ್ನು ಶುಕ್ರವಾರ ನಡೆಯಲಿರುವ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಮಂಡಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮೂಲಗಳ ಪ್ರಕಾರ ಶುಕ್ರವಾರ ಮಧ್ಯಾಹ್ನ ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಚುನಾವಣಾ ಸಮಿತಿ ಸಭೆಯ ನಂತರ ಕಾಂಗ್ರೆಸ್‌ ಪಟ್ಟಿಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ.

ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಶಾಸಕಾಂಗ ಪಕ್ಷದ ಮುಖ್ಯಸ್ಥ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಗುರುವಾರ ಮಧ್ಯಾಹ್ನವೇ ದೆಹಲಿಗೆ ತೆರಳಿದರು. ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆದಿದ್ದು, ಸಭೆಯಲ್ಲಿ ರಾಜ್ಯ ನಾಯಕರಲ್ಲದೆ, ಎಐಸಿಸಿ ಕಾರ್ಯದರ್ಶಿಗಳಾದ ಪಿ.ಸಿ. ವಿಷ್ಣುನಾಥನ್‌, ಮಾಣಿಕಂ ಠಾಕೂರ್‌, ಯಶೋಮತಿ ಠಾಕೂರ್‌, ಶಾಕೆ ಶೈಲಜನಾಥ್‌ ಮತ್ತು ಮಧುಯಾಸ್ಕಿ ಗೌಡ್‌ ಅವರು ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ನಾಯಕರು ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಪ್ರಯತ್ನ ನಡೆಸಿದ್ದು, ತೀವ್ರ ಪೈಪೋಟಿಯಿರುವ ಕೆಲ ಕ್ಷೇತ್ರಗಳನ್ನು ಹೈಕಮಾಂಡ್‌ನ ಅಂತಿಮ ನಿರ್ಧಾರಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ.

10 ಕ್ಷೇತ್ರದ ಬಗ್ಗೆ ಚರ್ಚೆ:

ದೆಹಲಿಯಲ್ಲಿ ನಡೆದ ಸಭೆಯಲ್ಲಿ ವಾಸ್ತವವಾಗಿ ಹಾಗೂ ವಿವರವಾಗಿ ಚರ್ಚೆಯಾಗಿದ್ದು 10 ಕ್ಷೇತ್ರಗಳ ಬಗ್ಗೆ ಎಂದೇ ಮೂಲಗಳು ಹೇಳುತ್ತವೆ. ಏಕೆಂದರೆ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳನ್ನು ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ಉಳಿದ 20 ಕ್ಷೇತ್ರಗಳಿಗೆ ಟಿಕೆಟ್‌ ಅಖೈರುಗೊಳಿಸಬೇಕಿತ್ತು. ಕಾಂಗ್ರೆಸ್‌ನ ಹಾಲಿ ಸಂಸದರಿಗೆ ಈ ಬಾರಿಯೂ ಟಿಕೆಟ್‌ ನೀಡಬೇಕು ಎಂಬುದು ಈಗಾಗಲೇ ನಿರ್ಧಾರವಾಗಿದೆ. ಪ್ರಸ್ತುತ ಕಾಂಗ್ರೆಸ್‌ ಗೆದ್ದಿರುವ 10 ಕ್ಷೇತ್ರಗಳಲ್ಲಿ ತುಮಕೂರು ಜೆಡಿಎಸ್‌ ಪಾಲಾಗಿದೆ. ಉಳಿದ 9 ಹಾಲಿ ಸಂಸದರಿಗೆ ಟಿಕೆಟ್‌ ಪಕ್ಕಾ ಮಾಡಲಾಗಿದೆ. ಹೀಗಾಗಿ ಉಳಿದ 11 ಕ್ಷೇತ್ರಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಹೊಣೆ ಪರಿಶೀಲನಾ ಸಮಿತಿಯ ಮುಂದೆ ಬಂದಿತ್ತು. ಈ 11 ಕ್ಷೇತ್ರಗಳ ಪೈಕಿ ಮೈಸೂರಿನಲ್ಲಿ ವಿಜಯಶಂಕರ್‌ ಅವರಿಗೆ ಟಿಕೆಟ್‌ ಬಹುತೇಕ ನಿಕ್ಕಿಯಾದ ಕಾರಣ ಹೆಚ್ಚಿನ ಚರ್ಚೆ ನಡೆದಿಲ್ಲ.

ಬೆಂ.ದಕ್ಷಿಣಕ್ಕೆ ಕೆ.ಗೋವಿಂದರಾಜು?:

ಇನ್ನುಳಿದ 10 ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ಹಾಗೂ ದಾವಣಗೆರೆಗೆ ಸೂಕ್ತ ಅಭ್ಯರ್ಥಿಗಳು ದೊರೆತಿರಲಿಲ್ಲ. ಬೆಂಗಳೂರು ದಕ್ಷಿಣಕ್ಕೆ ಆಯ್ಕೆ ಮಾಡಿದವರೆಲ್ಲರೂ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿರುವುದು ಕಾಂಗ್ರೆಸ್‌ಗೆ ತಲೆನೋವಾಗಿದೆ. ಪ್ರಿಯಕೃಷ್ಣ, ರಾಮಲಿಂಗಾರೆಡ್ಡಿ ಮತ್ತು ಪ್ರೊ.ರಾಜೀವ್‌ಗೌಡ ಅವರು ತಮಗೆ ಸ್ಪರ್ಧಿಸಲು ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ ಬಳಿಗೆ ಒಯ್ದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ನಗರ ಘಟಕದ ಪದಾಧಿಕಾರಿ ಜಿ. ಕೃಷ್ಣಪ್ಪ ಹಾಗೂ ಒಲಿಂಪಿಕ್‌ ಅಸೋಸಿಯೇಷನ್‌ ಅಧ್ಯಕ್ಷ ಕೆ.ಗೋವಿಂದರಾಜು ಅವರ ಹೆಸರಿತ್ತು. ಮೂಲಗಳ ಪ್ರಕಾರ ಕೆ.ಗೋವಿಂದರಾಜು ಅವರಿಗೆ ಟಿಕೆಟ್‌ ನೀಡುವ ಮನಸ್ಸು ರಾಜ್ಯ ನಾಯಕರಿಗೆ ಇದೆ.

ಇನ್ನು ದಾವಣಗೆರೆ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಹೆಸರನ್ನು ಒಯ್ಯಲಾಗಿತ್ತು. ಬಹುತೇಕ ಈ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್‌ ಅಂತಿಮಗೊಳಿಸಲಾಗಿದೆ ಎನ್ನಲಾಗುತ್ತಿದೆ. ಅಂತಿಮವಾಗಿ ಹೈಕಮಾಂಡ್‌ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಇನ್ನು ಬೀದರ್‌ನಿಂದ ಸ್ಪರ್ಧಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಸಜ್ಜಾಗಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಧರ್ಮಸಿಂಗ್‌ ಅವರ ಪುತ್ರ ವಿಜಯಸಿಂಗ್‌ ಅವರಿಗೆ ಟಿಕೆಟ್‌ ಕೊಡಿಸಲು ತೀವ್ರ ಯತ್ನ ನಡೆಸಿದ ಕಾರಣ ಈ ಬಗ್ಗೆ ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈಶ್ವರ್‌ ಖಂಡ್ರೆ ಅವರಿಗೆ ಟಿಕೆಟ್‌ ದೊರೆಯುವ ಸಾಧ್ಯತೆ ಹೆಚ್ಚಿದೆ.

ಉಳಿದಂತೆ ಮಂಗಳೂರು, ಬೆಳಗಾವಿ, ಬಾಗಲಕೋಟೆ, ಬೆಂಗಳೂರು ಕೇಂದ್ರ ಮತ್ತು ಕೊಪ್ಪಳ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿಯಿತ್ತು. ಈ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ಸಂಭವನೀಯರ ಪಟ್ಟಿ

1. ಮೈಸೂರು-ಕೊಡಗು: ವಿಜಯ್ ಶಂಕರ್‌

2- ಬೀದರ್‌: ಈಶ್ವರ್‌ ಖಂಡ್ರೆ/ ವಿಜಯಸಿಂಗ್‌

3- ದಾವಣಗೆರೆ: ಶಾಮನೂರು ಶಿವಶಂಕರಪ್ಪ /ಎಸ್‌.ಎಸ್‌. ಮಲ್ಲಿಕಾರ್ಜುನ್‌

4- ಬಾಗಲಕೋಟೆ: ವೀಣಾ ಕಾಶಪ್ಪನವರ್‌/ ರಕ್ಷಿತಾ ಇ.ಟಿ.

5- ಕೊಪ್ಪಳ: ಬಸನಗೌಡ ಬಾದರ್ಲಿ/ ಮಂಜುನಾಥ್‌ ಹಿಟ್ನಾಳ್‌

6- ಬೆಳಗಾವಿ: ಎಸ್‌.ಎ. ಸಾಧುನ್ನವರ್‌/ ಶಿವಕಾಂತ್‌ ಸಿದ್ನಾಳ್‌

7- ಮಂಗಳೂರು: ರಮಾನಾಥ ರೈ/ ರಾಜೇಂದ್ರಕುಮಾರ್‌ / ವಿನಯಕುಮಾರ್‌ ಸೊರಕೆ

8- ಬೆಂಗಳೂರು ದಕ್ಷಿಣ: ಕೆ.ಗೋವಿಂದರಾಜು/ ಜಿ.ಕೃಷ್ಣಪ್ಪ

9- ಬೆಂಗಳೂರು ಕೇಂದ್ರ: ರೋಷನ್‌ ಬೇಗ್‌/ ರಿಜ್ವಾನ್‌ ಅರ್ಷದ್‌

10- ಗದಗ-ಹಾವೇರಿ: ಬಸವರಾಜ್‌ ಶಿವಣ್ಣವರ/ ಡಿ.ಆರ್‌. ಪಾಟೀಲ…

11- ಹುಬ್ಬಳ್ಳಿ-ಧಾರವಾಡ: ವಿನಯ… ಕುಲಕರ್ಣಿ/ ಶಾಕಿರ್‌ ಸನದಿ (ಐ.ಜಿ.ಸನದಿ ಪುತ್ರ)

ಕಾಂಗ್ರೆಸ್‌ ಸಂಸ​ದರು ಇರುವ ಕ್ಷೇತ್ರ​ಗಳು

12-ಚಿಕ್ಕೋಡಿ: ಪ್ರಕಾಶ್‌ ಹುಕ್ಕೇರಿ

13-ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ

14-ರಾಯಚೂರು: ಬಿ.ವಿ. ನಾಯಕ್‌

15-ಬಳ್ಳಾರಿ: ವಿ.ಎಸ್‌. ಉಗ್ರಪ್ಪ

16-ಚಿತ್ರದುರ್ಗ: ಬಿ.ಎನ್‌.ಚಂದ್ರಪ್ಪ

17-ಚಾಮರಾಜನಗರ: ಆರ್‌. ಧ್ರುವನಾರಾಯಣ್‌

18-ಚಿಕ್ಕಬಳ್ಳಾಪುರ: ಡಾ.ಎಂ. ವೀರಪ್ಪ ಮೊಯ್ಲಿ

19-ಕೋಲಾರ: ಕೆ.ಎಚ್‌.ಮುನಿಯಪ್ಪ

20-ಬೆಂಗಳೂರು ಗ್ರಾಮಾಂತರ: ಡಿ.ಕೆ. ಸುರೇಶ್‌