ಬೆಂಗಳೂರು :  ತೀವ್ರ ಪೈಪೋಟಿಯಿರುವ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಿಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ದೆಹಲಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಆಖೈರುಗೊಳಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಪಟ್ಟಿಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರಭಾವಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿರುವ ಮಂಗಳೂರು, ಕೊಪ್ಪಳ, ಹುಬ್ಬಳ್ಳಿ-ಧಾರವಾಡ ಮತ್ತು ಬಿಜೆಪಿಯಿಂದ ಅಭ್ಯರ್ಥಿ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಬೆಳಗಾವಿಯಂತಹ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ನಿರೀಕ್ಷೆಯಂತೆಯೇ ಮೈಸೂರಿಗೆ ವಿಜಯಶಂಕರ್‌, ಬೀದರ್‌ ಕ್ಷೇತ್ರವನ್ನು ಈಶ್ವರ್‌ ಖಂಡ್ರೆ, ಬೆಂಗಳೂರು ದಕ್ಷಿಣಕ್ಕೆ ಕೆ. ಗೋವಿಂದರಾಜು, ಬೆಂಗಳೂರು ಕೇಂದ್ರಕ್ಕೆ ರಿಜ್ವಾನ್‌ ಅರ್ಷದ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕುತೂಹಲಕಾರಿ ಸಂಗತಿಯೆಂದರೆ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿಯು ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್‌ ನೀಡಲಿದೆ ಎಂಬುದನ್ನು ನೋಡಿಕೊಂಡು ನಿರ್ಧರಿಸಲು ತೀರ್ಮಾನಿಸಿದೆ. ಇದರಿಂದಾಗಿ ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ಹಂಚಿಕೆ ಸ್ವರೂಪ ಬದಲಾಗುವ ಸಾಧ್ಯತೆಯಿದೆ. ಬಿಜೆಪಿಯಲ್ಲಿ ಮಾಜಿ ಸಚಿವ ಉಮೇಶ್‌ ಕತ್ತಿ ಸಹೋದರ ರಮೇಶ್‌ ಕತ್ತಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇದೇ ಕ್ಷೇತ್ರ ಅಣ್ಣಾಸಾಹೇಬ್‌ ಜೊಲ್ಲೆ ಸಹ ತೀವ್ರ ಪೈಪೋಟಿ ನಡೆಸಿದ್ದಾರೆ. ಈ ಪೈಪೋಟಿಯ ಪರಿಣಾಮವಾಗಿ ಬಿಜೆಪಿ ಈ ಕ್ಷೇತ್ರದ ಅಭ್ಯರ್ಥಿ ಇನ್ನೂ ಪ್ರಕಟಿಸಿಲ್ಲ.

ಚಿಕ್ಕೋಡಿ-ಬೆಳಗಾವಿ ಅದಲು ಬದಲು?:  ಒಂದು ವೇಳೆ ಬಿಜೆಪಿಯು ಈ ಕ್ಷೇತ್ರದ ಟಿಕೆಟನ್ನು ಅಣ್ಣಾಸಾಹೇಬ್‌ ಜೊಲ್ಲೆ ಅವರಿಗೆ ನೀಡಿದರೆ, ಆಗ ರಮೇಶ್‌ ಕತ್ತಿ ಅವರನ್ನು ಕಾಂಗ್ರೆಸ್‌ಗೆ ಕರೆ ತಂದು ಚಿಕ್ಕೋಡಿ ಸದಲಗಾ ಕ್ಷೇತ್ರದ ಟಿಕೆಟ್‌ ಅನ್ನು ನೀಡುವ ಉದ್ದೇಶ ಕಾಂಗ್ರೆಸ್‌ ಹೊಂದಿದೆ. ಚಿಕ್ಕೋಡಿ-ಸದಲಗಾ ಕ್ಷೇತ್ರದ ಹಾಲಿ ಕಾಂಗ್ರೆಸ್‌ ಸಂಸದ ಪ್ರಕಾಶ್‌ ಹುಕ್ಕೇರಿ ಅವರಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್‌ ನೀಡುವ ಉದ್ದೇಶವನ್ನು ಕಾಂಗ್ರೆಸ್‌ ಹೊಂದಿದೆ ಎನ್ನಲಾಗಿದೆ. ಹೀಗಾಗಿ, ಈ ಬೆಳಗಾವಿ ಮತ್ತು ಹಾಲಿ ಸಂಸದರಿರುವ ಚಿಕ್ಕೋಡಿ-ಸದಲಗಾ ಕ್ಷೇತ್ರವನ್ನು ಸದ್ಯಕ್ಕೆ ತಡೆಹಿಡಿಯಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಇನ್ನೂ ಮಂಗಳೂರಿನಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿಯೇ ಇದೆ. ರಮಾನಾಥ್‌ ರೈ, ರಾಜೇಂದ್ರ ಕುಮಾರ್‌ ಅವರ ಹೆಸರನ್ನು ರಾಜ್ಯ ನಾಯಕರು ಪ್ಯಾನಲ್‌ನಲ್ಲಿ ತೆಗೆದುಕೊಂಡು ಹೋಗಿದ್ದರೂ, ಹೈಕಮಾಂಡ್‌ನಲ್ಲಿನ ತಮ್ಮ ಪ್ರಭಾವ ಬಳಸಿ ಹರಿಪ್ರಸಾದ್‌ ಅವರು ಲಾಬಿ ನಡೆಸಿದ್ದಾರೆ. ಜತೆಗೆ, ಡಿ.ಕೆ. ಶಿವಕುಮಾರ್‌ ಬೆಂಬಲ ಹೊಂದಿರುವ ಮಿಥನ್‌ ರೈ ಕೂಡ ತೀವ್ರ ಲಾಬಿ ನಡೆಸಿದ್ದಾರೆ. ಈ ಪ್ರಮಾಣದಲ್ಲಿ ಲಾಬಿಯಿರುವ ಕಾರಣಕ್ಕೆ ಅಭ್ಯರ್ಥಿಯನ್ನು ನಿರ್ಧರಿಸುವ ಹೊಣೆಯನ್ನು ಹೈಕಮಾಂಡ್‌ಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.

ಉಳಿದಂತೆ, ಮುಸ್ಲಿಮರು ಹಾಗೂ ಕುರುಬರಿಗೆ ಈ ಬಾರಿ ಎಷ್ಟುಕ್ಷೇತ್ರಗಳನ್ನು ನೀಡಬೇಕು ಎಂಬ ಗೊಂದಲವೂ ಇದೆ. ಮುಸ್ಲಿಮರ ಪೈಕಿ ಈಗಾಗಲೇ ಬೆಂಗಳೂರು ಕೇಂದ್ರದಿಂದ ರಿಜ್ವಾನ್‌ ಅರ್ಷದ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಒಂದು ವೇಳೆ ಮತ್ತೊಬ್ಬ ಮುಸ್ಲಿಂಗೆ ಟಿಕೆಟ್‌ ನೀಡಬೇಕು ಎಂದು ಹೈಕಮಾಂಡ್‌ ನಿರ್ಧರಿಸಿದರೆ ಆಗ ಧಾರವಾಡದಿಂದ ಐ.ಜಿ. ಸನದಿ ಅವರ ಪುತ್ರ ಶಾಕೀರ್‌ ಸನದಿ ಅವರಿಗೆ ಟಿಕೆಟ್‌ ದೊರೆಯಬಹುದು ಎನ್ನಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್‌ ದೊರೆಯದಿದ್ದರೆ ಮಾಜಿ ಶಾಸಕ ವಿನಯ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡುವ ಉದ್ದೇಶವಿತ್ತು. ಆದರೆ, ಧಾರವಾಡ ಕಟ್ಟಡ ಕುಸಿತದ ಹಿನ್ನೆಲೆಯಲ್ಲಿ ಅವರ ಬದಲಿಗೆ ಸದಾನಂದ ಡಂಗಣ್ಣನವರ ಹೆಸರು ಚಾಲ್ತಿಗೆ ಬಂದಿದೆ.

ಇನ್ನು ಕುರುಬರಿಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಬೇಕೋ ಅಥವಾ ಮೂರು ಕ್ಷೇತ್ರಗಳಿಂದಲೋ ಎಂಬ ಗೊಂದಲವಿದೆ. ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದಲ್ಲಿ ಇಬ್ಬರು ಕುರುಬರಿಗೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಈಗಾಗಲೇ ಮೈಸೂರು ಕ್ಷೇತ್ರಕ್ಕೆ ಕುರುಬ ಜನಾಂಗದ ವಿಜಯಶಂಕರ್‌ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ. ಇನ್ನು ಕೊಪ್ಪಳದಿಂದ ರಾಜಶೇಖರ್‌ ಹಿಟ್ನಾಳ್‌ ಮತ್ತು ಗದಗ-ಹಾವೇರಿ ಕ್ಷೇತ್ರದಿಂದ ಬಸವರಾಜ ಶಿವಣ್ಣವರ್‌ ಅವರ ಹೆಸರು ಪರಿಶೀಲನೆಯಲ್ಲಿದೆ. ಕುರುಬರಿಗೆ ಮೂರು ಕ್ಷೇತ್ರಗಳಿಗೆ ಟಿಕೆಟ್‌ ನೀಡಬೇಕು ಎಂದು ನಿರ್ಧಾರವಾಗಿದ್ದರೆ, ಕೊಪ್ಪಳ ಹಾಗೂ ಗದಗ-ಹಾವೇರಿಯಲ್ಲೂ ಕುರುಬ ಅಭ್ಯರ್ಥಿಗಲಿಗೆ ಟಿಕೆಟ್‌ ಸಿಗಬಹುದು.

ದಕ್ಷಿಣ ಕರ್ನಾಟಕದಿಂದ ಒಬ್ಬರಿಗೆ ಮತ್ತು ಉತ್ತರ ಕರ್ನಾಟಕದಿಂದ ಒಬ್ಬ ಕುರುಬರಿಗೆ ಟಿಕೆಟ್‌ ನೀಡಬೇಕು ಎಂದು ನಿರ್ಧಾರವಾದರೇ ಆಗ ಗದಗ-ಹಾವೇರಿಯಲ್ಲಿ ಎಚ್‌.ಕೆ. ಪಾಟೀಲರ ಸೋದರ ಡಿ.ಆರ್‌. ಪಾಟೀಲ್‌ ಅವರಿಗೆ ಟಿಕೆಟ್‌ ದೊರೆಯಬಹುದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ಸಂಭವನೀಯರ ಪಟ್ಟಿ

1. ಮೈಸೂರು-ಕೊಡಗು- ವಿಜಯಶಂಕರ್‌

2. ಬೀದರ್‌- ಈಶ್ವರ್‌ ಖಂಡ್ರೆ

3. ಬಾಗಲಕೋಟೆ- ವೀಣಾ ಕಾಶಪ್ಪನವರ್‌

4. ಬೆಂಗಳೂರು ದಕ್ಷಿಣ- ಕೆ. ಗೋವಿಂದರಾಜು

5. ಬೆಂಗಳೂರು ಕೇಂದ್ರ- ರಿಜ್ವಾನ್‌ ಅರ್ಷದ್‌

6. ಹುಬ್ಬಳ್ಳಿ-ಧಾರವಾಡ- ಶಾಕಿರ್‌ ಸನದಿ (ಐ.ಜಿ. ಸನದಿ ಪುತ್ರ)/ ಸದಾನಂದ ಡಂಗನವರ್‌

7. ಗದಗ-ಹಾವೇರಿ- ಡಿ.ಆರ್‌. ಪಾಟೀಲ…- ಶಿವಣ್ಣವರ್‌

8. ಕೊಪ್ಪಳ - ಬಸನಗೌಡ ಬಾದರ್ಲಿ/ ರಾಜಶೇಖರ್‌ ಹಿಟ್ನಾಳ್‌

9. ದಾವಣಗೆರೆ- ಶಾಮನೂರು ಶಿವಶಂಕರಪ್ಪ /ಎಸ್‌.ಎಸ್‌. ಮಲ್ಲಿಕಾರ್ಜುನ್‌

10. ಬೆಳಗಾವಿ- ಬಿಜೆಪಿ ಪಟ್ಟಿಆಧರಿಸಿ ಈ ಕ್ಷೇತ್ರದ ಟಿಕೆಟ್‌ ನಿರ್ಧಾರ (ಪ್ರಸ್ತುತ ಎಸ್‌.ಎ. ಸಾಧುನ್ನವರ್‌/ಶಿವಕಾಂತ್‌ ಸಿದ್ನಾಳ್‌ ಹೆಸರು)

11- ಮಂಗಳೂರು- ರಮಾನಾಥ ರೈ/ ಬಿ.ಕೆ. ಹರಿಪ್ರಸಾದ್‌ / ಮಿಥುನ್‌ ರೈ

ಕಾಂಗ್ರೆಸ್‌ ಸಂಸ​ದರು ಇರುವ ಕ್ಷೇತ್ರ​ಗಳು -

12-ಚಿಕ್ಕೋಡಿ- ಪ್ರಕಾಶ್‌ ಹುಕ್ಕೇರಿ (ರಮೇಶ್‌ ಕತ್ತಿ ಕಾಂಗ್ರೆಸ್‌ಗೆ ಬಂದರೆ ಹುಕ್ಕೇರಿ ಅವರು ಬೆಳಗಾವಿ ಕ್ಷೇತ್ರಕ್ಕೆ ಸ್ಥಳಾಂತರ)

13-ಕಲಬುರಗಿ- ಮಲ್ಲಿಕಾರ್ಜುನ ಖರ್ಗೆ

14-ರಾಯಚೂರು- ಬಿ.ವಿ. ನಾಯಕ್‌

15-ಬಳ್ಳಾರಿ - ವಿ.ಎಸ್‌. ಉಗ್ರಪ್ಪ

16-ಚಿತ್ರದುರ್ಗ- ಬಿ.ಎನ್‌.ಚಂದ್ರಪ್ಪ

17-ಚಾಮರಾಜನಗರ - ಆರ್‌. ಧ್ರುವನಾರಾಯಣ್‌

18-ಚಿಕ್ಕಬಳ್ಳಾಪುರ -ಡಾ. ಎಂ. ವೀರಪ್ಪ ಮೊಯ್ಲಿ

19-ಕೋಲಾರ- ಕೆ.ಎಚ್‌.ಮುನಿಯಪ್ಪ

20-ಬೆಂಗಳೂರು ಗ್ರಾಮಾಂತರ - ಡಿ.ಕೆ. ಸುರೇಶ್‌