ಹುಬ್ಬಳ್ಳಿ :  ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದಿ.ಅಂಬರೀಷ್‌ ಪತ್ನಿ ಸುಮಲತಾ ಅವರ ಪರ ಪ್ರಚಾರ ನಡೆಸಿದ ಖ್ಯಾತ ಚಿತ್ರ ನಟರಾದ ದರ್ಶನ್‌ ಹಾಗೂ ಯಶ್‌ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಕೆಂಡಾಮಂಡಲವಾಗಿದ್ದಾರೆ. ತಮ್ಮ ವಿರುದ್ಧ ಮಾತನಾಡಿದ ಸಿನಿಮಾ ನಟರು ಮುಂದೆ ಪಶ್ಚಾತ್ತಾಪ, ಪ್ರಾಯಶ್ಚಿತ್ತ ಎರಡನ್ನೂ ಮಾಡಿಕೊಳ್ಳಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಂಡ್ಯದಲ್ಲಿ ಕೆಲವು ಸಿನಿಮಾ ನಟರು ನನ್ನ ವಿರುದ್ಧ ಮಾತನಾಡಿದರು. ನಮ್ಮ ವಿರುದ್ಧ ತಂತ್ರವನ್ನಷ್ಟೇ ಅಲ್ಲ, ಕುತಂತ್ರವನ್ನೂ ನಡೆಸಿದರು. ಯಾರು, ಯಾವುದೇ ರೀತಿಯ ಕುತಂತ್ರವನ್ನು ಮಾಡಿದ್ದರೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದು ಮಾತ್ರ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌. 

ನಮ್ಮ ವಿರುದ್ಧ ಕುತಂತ್ರ ನಡೆಸಿದ ನಟರು ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಪಶ್ಚಾತ್ತಾಪವನ್ನೂ ಪಡಬೇಕಾಗುತ್ತದೆ. ಪ್ರಾಯಶ್ಚಿತ್ತವನ್ನೂ ಮಾಡಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.