ಹುಬ್ಬಳ್ಳಿ :  ಬಿಜೆಪಿ ತಲೆಯಾಳು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗುರುತರವಾದ ಜವಾಬ್ದಾರಿ ವಹಿಸಿದೆ. ಲಿಂಗಾಯತ ಬಾಹುಳ್ಯ ಹೊಂದಿರುವ ಮುಂಬೈ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಒಂದರ್ಥದಲ್ಲಿ ಬಿಜೆಪಿಯ ಭದ್ರಕೋಟೆ. 12 ಕ್ಷೇತ್ರಗಳಲ್ಲಿ 8 ಬಿಜೆಪಿ ಮಡಿಲಿಗಿವೆ. ಉಪ ಚುನಾವಣೆಯಲ್ಲಿ ಬಳ್ಳಾರಿಯನ್ನು ಕಳೆದುಕೊಂಡಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಈಗ ಹೇಗಾದರೂ ಮಾಡಿ ಕನಿಷ್ಠ 10 ಸ್ಥಾನಗಳನ್ನಾದರೂ ಗೆಲ್ಲಲೇಬೇಕು ಎನ್ನುವ ಹಟದಿಂದ ಪ್ರಬಲ ಲಿಂಗಾಯತ ನಾಯಕ ಜಗದೀಶ್‌ ಶೆಟ್ಟರನ್ನೇ ಇಲ್ಲಿ ಚೌಕಿದಾರನನ್ನಾಗಿ ನೇಮಿಸಿದೆ. ಬಳ್ಳಾರಿ ಕ್ಷೇತ್ರದ ಉಸ್ತುವಾರಿ ಜತೆಗೆ ಉತ್ತರ ಕರ್ನಾಟಕವನ್ನು ಕೇಂದ್ರೀಕರಿಸಿಕೊಂಡು ಕೆಲಸ ಮಾಡುತ್ತಿರುವ ಶೆಟ್ಟರ್‌, ಬಿಡುವು ಮಾಡಿಕೊಂಡು ‘ಕನ್ನಡಪ್ರಭ’ ಜತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಹೀಗೆ.

ಧಾರವಾಡ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ರಂಭಾಪುರಿ ಶ್ರೀಗಳನ್ನು ಭೇಟಿಯಾದ ಬಳಿಕ ಧಾರವಾಡ ಕ್ಷೇತ್ರದಲ್ಲಿ ‘ಲಿಂಗಾಯತ ಮೇನಿಯಾ’ ಬಲು ಜೋರಿನಿಂದ ಕೇಳಿಬರುತ್ತಿದೆ. ನಿಮ್ಮ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಅವರನ್ನು ಹೇಗೆ ರಕ್ಷಿಸುತ್ತೀರಿ?

ಇಲ್ಲಿ ವಿನಯ ಕುಲಕರ್ಣಿ-ಪ್ರಹ್ಲಾದ್‌ ಜೋಶಿ ಎನ್ನುವುದಕ್ಕಿಂತ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವುದಷ್ಟೇ ಪ್ರಮುಖ ವಿಷಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ಬೇರೆ ಬೇರೆ ಎಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುತ್ತ ರಂಭಾಪುರಿ ಶ್ರೀಗಳ ವಿರುದ್ಧ ಕೀಳು ಭಾಷೆಯಲ್ಲಿ ಮಾತನಾಡಿದವರು ಇಂದು ಚುನಾವಣೆ ಬಂದಿದೆ ಎನ್ನುವ ಕಾರಣಕ್ಕೆ ಅದೇ ಶ್ರೀಗಳ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ. ಧರ್ಮ ಒಡೆದದ್ದಕ್ಕೆ ಕ್ಷಮೆ ಯಾಚಿಸಿದ ಡಿ.ಕೆ.ಶಿವಕುಮಾರ್‌ ವಿರುದ್ಧ ಹುಚ್ಚರಂತೆ ಒದರಾರ‍ಯಡುವ ಎಂ.ಬಿ.ಪಾಟೀಲ್‌, ಈಗ ವಿನಯ ಕುಲಕರ್ಣಿ ನಡೆಗೆ ಉತ್ತರಿಸಬೇಕಿದೆ. ಜಾತಿ ಹಿಡ್ಕೊಂಡ್‌ ಹೋದರೆ ಜನ ನಂಬ್ತಾರೇನ್ರೀ?

ಮಹದಾಯಿ ವಿಷಯದಲ್ಲಿ ಬಿಜೆಪಿ ಸಂಸದರಾರ‍ಯರೂ ಸ್ಪಂದಿಸಲಿಲ್ಲ ಎನ್ನುವುದು ಸ್ವತಃ ಮಹದಾಯಿ ಹೋರಾಟಗಾರರ ಆರೋಪ?

ಇದು ತಪ್ಪು ಭಾವನೆ. ಕಳಸಾ-ಬಂಡೂರಿ ಯೋಜನೆ ಮತ್ತು ಮಹದಾಯಿಗಾಗಿ ಬಿಜೆಪಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಹಿಂದೆ ಯಡಿಯೂರಪ್ಪ ಅವರು ಗೋವಾ ಮುಖ್ಯಮಂತ್ರಿಗಳನ್ನು ಮನವೊಲಿಸಿದ್ದರು. ಆಗ ರಾಜ್ಯ ಸರ್ಕಾರ ಸ್ಪಂದಿಸಿದ್ದರೆ ಪ್ರಕರಣ ಶೀಘ್ರ ಬಗೆಹರಿಯುತ್ತಿತ್ತು, ಅದು ಆಗಲಿಲ್ಲ. ನ್ಯಾಯಾಧಿಕರಣದ ಮುಂದೆ ಪ್ರಕರಣ ಇದ್ದಾಗ ಯಾರಿಂದಲೂ ಏನೂ ಮಾಡಲು ಸಾಧ್ಯವಿರಲಿಲ್ಲ.

ಇದೀಗ ಮಹದಾಯಿ ಹೋರಾಟಗಾರ ಆಕ್ರೋಶ ಬಿಜೆಪಿ ವಿರುದ್ಧ ತಿರುಗಿದೆ. ಅವರನ್ನು ಹೇಗೆ ಸಮಾಧಾನ ಮಾಡ್ತೀರಿ?

ಮಹದಾಯಿ ತೀರ್ಪು ಬಂದ ಬಳಿಕವೂ ಕರ್ನಾಟಕ ಮತ್ತು ಗೋವಾ ಮೇಲ್ಮನವಿ ಸಲ್ಲಿಸಿವೆ. ಹೀಗಿದ್ದಾಗ್ಯೂ ನೋಟಿಫಿಕೇಶನ್‌ ಹೊರಡಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ಸಿಗರ ಈ ಕುತಂತ್ರವನ್ನು ಹೋರಾಟಗಾರರು ಅರಿಯಬೇಕು.

ಪ್ರಧಾನಿ ಮೋದಿ ನೋಡಿ ಮತ ಹಾಕಿ ಎನ್ನುತ್ತಿದ್ದೀರಿ. ಅಂದರೆ, ನಿಮ್ಮನ್ನು ಮತ್ತು ನಿಮ್ಮ ಸಂಸದರನ್ನು ಮತದಾರರು ನಂಬುವುದಿಲ್ಲವೇ?

ಇದು ಪಾರ್ಲಿಮೆಂಟ್‌ ಎಲೆಕ್ಷನ್‌. ಅಮೆರಿಕದಂತೆ ಅಧ್ಯಕ್ಷೀಯ ಮಾದರಿ ಇಲ್ಲಿದ್ದಿದ್ದರೆ ನಾವು ನೇರವಾಗಿ ನರೇಂದ್ರ ಮೋದಿಗೆ ಮತ ಹಾಕುತ್ತಿದ್ದೆವು. ಪರಿಸ್ಥಿತಿ ಹಾಗಿಲ್ಲ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಇದ್ದಾಗಲೂ ನಾಯಕರ ಹೆಸರು ಹೇಳಿಯೇ ಕಾಂಗ್ರೆಸ್‌ ಚುನಾವಣೆ ಎದುರಿಸುತ್ತ ಬಂದಿದೆ. ಅಭ್ಯರ್ಥಿಗಳ ಸಾಧನೆ, ಸಾಮರ್ಥ್ಯದ ಜತೆಗೆ ಪಕ್ಷ, ನಾಯಕರ ಹೆಸರೂ ಬೇಕಾಗುತ್ತದೆ. ಎಲ್ಲವೂ ಕಾಂಬೀನೇಶನ್‌ ಆದಾಗಲೇ ಗೆಲುವು ಸುಲಭವಾಗುತ್ತದೆ. ಮೋದಿ ಅವರನ್ನು ಮುಂದಿನ ಪ್ರಧಾನಿ ಎಂದು ಘೋಷಿಸಿದ್ದರಿಂದ ಅವರ ಹೆಸರು ಹೇಳುತ್ತಿದ್ದೇವೆ.

ಹಿಂದಿನ ಚುನಾವಣೆ ವೇಳೆ ಮೋದಿಯವರು ನೀಡಿದ ಭರವಸೆಗಳು ಈಡೇರಿವೆಯೇ? ಇಲ್ಲ ಎಂದಾದರೆ ಜನತೆ ಮೋದಿಯನ್ನು ಏಕೆ ನಂಬಬೇಕು?

ಕಪ್ಪು ಹಣ ತರುವ ದಿಸೆಯಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಿದ್ದಾರೆ. ದೇಶದಲ್ಲಿನ ಕಪ್ಪು ಕುಳಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಜತೆಗೆ 6 ಕೋಟಿ ಮಹಿಳೆಯರಿಗೆ ಗ್ಯಾಸ್‌, 50 ಕೋಟಿ ಜನರಿಗೆ ಆಯುಷ್ಮಾನ್‌ ಭಾರತ ಯೋಜನೆ ಮೂಲಕ ಆರೋಗ್ಯ ಸೇವೆ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ನೀಡಿದ್ದಾರೆ. ಇಂಥ ಉತ್ತಮ ಆಡಳಿತಕ್ಕಾಗಿ ಮತ್ತು ದೇಶದ ಸುರಕ್ಷತೆಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವುದು ಜನತೆಯ ಆಶಯವಾಗಿದೆ.

ರಾಷ್ಟ್ರೀಯತೆಯಂಥ ಭಾವನಾತ್ಮಕ ವಿಷಯಗಳನ್ನೇ ಚುನಾವಣಾ ಪ್ರಚಾರದ ಸರಕು ಮಾಡಿಕೊಂಡಿದ್ದೀರಲ್ಲ, ಏನಿದರ ಅರ್ಥ?

ನಾವು ಬಳಸುತ್ತಿಲ್ಲ. ಬದಲಾಗಿ ಜನತೆಯಲ್ಲೇ ಅಂಥ ಭಾವನೆ ಬಂದಿದೆ. ಪುಲ್ವಾಮಾ ಘಟನೆ ಬಳಿಕ ಭಾರತ ನಡೆಸಿದ ಏರ್‌ ಸ್ಟೆ್ರೖಕ್‌ ಕಂಡ ಭಾರತೀಯರೆಲ್ಲ ನಮ್ಮ ನಾಯಕ ಎಂದರೆ ಹೀಗಿರಬೇಕು ಎಂದು ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ. ಘಟನೆಗಳು ನಡೆಯುವುದು ಸಹಜ, ಆ ಸಂದರ್ಭದಲ್ಲಿ ಸರ್ಕಾರ ನಡೆದುಕೊಳ್ಳುವ ರೀತಿ ಜನತೆಯ ಮೇಲೆ ಪರಿಣಾಮ ಬೀರುತ್ತದೆ.

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಭಾರತೀಯ ಸೈನ್ಯವನ್ನು ‘ಮೋದಿ ಸೈನ್ಯ’ ಎಂದು ಕರೆದಿದ್ದಾರಲ್ಲ?

ಯಾರೋ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದರೆ, ಅದು ಪಕ್ಷದ ನಿರ್ಧಾರ ಆಗುವುದಿಲ್ಲ. ಬಿಜೆಪಿ ಎಂದೂ ಹಾಗೆ ಹೇಳಿಲ್ಲ. ನಮ್ಮದು ಭಾರತೀಯ ಸೈನ್ಯ.

ಈಗ ಎಷ್ಟುಕ್ಷೇತ್ರ ಸುತ್ತಿದ್ದೀರಿ, ಜನರ ನಾಡಿಮಿಡಿತ ಏನಿದೆ?

ಚಿಕ್ಕೋಡಿ, ಬೆಳಗಾವಿ, ಹಾವೇರಿ, ಕಾರವಾರ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು ಕ್ಷೇತ್ರಗಳನ್ನು ಸುತ್ತಿದ್ದೇನೆ. ಎಲ್ಲೆಡೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ಅದರಲ್ಲೂ ಮುಂಬೈ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿಯ ಸ್ಟ್ರಾಂಗ್‌ ವೋಟ್‌ಬ್ಯಾಂಕ್‌ ಇದೆ. ಹಳ್ಳಿ ಹಳ್ಳಿಯಲ್ಲೂ ಬಿಜೆಪಿ ಪಡೆ ಇದೆ. ಕೇಡರ್‌ ಬೇಸ್‌ ಪಾರ್ಟಿ ಎನ್ನುವುದರ ಅನ್ವರ್ಥಕ ಇದು. ಎಲ್ಲರದ್ದೂ ಒಂದೇ ಮಾತು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಹಾಗಾಗಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ.

ಬಿಜೆಪಿ ಶಿಸ್ತಿನ ಪಕ್ಷ, ಆದರೂ ಟಿಕೆಟ್‌ ಹಂಚಿಕೆಯಲ್ಲಿ ಗೊಂದಲವಾಯಿತಲ್ಲ?

ಕೊಪ್ಪಳದಲ್ಲಿ ಡಾ.ಬಸವರಾಜ್‌, ಸಿ.ವಿ.ಚಂದ್ರಶೇಖರ್‌ ಕೂಡ ಆಕಾಂಕ್ಷಿಗಳಾಗಿದ್ದರಿಂದ ಪರಿಸ್ಥಿತಿ ಗಮನಿಸಿದ ಹೈಕಮಾಂಡ್‌ ಕೊನೆಗೆ ಸಂಗಣ್ಣ ಕರಡಿ ಅವರಿಗೆ ಟಿಕೆಟ್‌ ನೀಡಿದೆ. ಚಿಕ್ಕೋಡಿಯಲ್ಲಿ ಪ್ರಭಾಕರ ಕೋರೆ, ಅಣ್ಣಾಸಾಹೇಬ ಜೊಲ್ಲೆ, ರಮೇಶ್‌ ಕತ್ತಿ ಮೂವರ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಇತ್ತು. ಕೋರೆಯವರು ಈಗಾಗಲೇ ರಾಜ್ಯಸಭೆ ಸದಸ್ಯರಿದ್ದಾರೆ, ರಮೇಶ್‌ ಕತ್ತಿ ಕಳೆದ ಬಾರಿ ಪರಾಜಿತರಾಗಿದ್ದಾರೆ. ಹಾಗಾಗಿ ಆ ಕ್ಷೇತ್ರದಲ್ಲಿ ಉದ್ಯಮ, ಬ್ಯಾಂಕುಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ಹತ್ತಿರವಾಗಿರುವ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಕಣಕ್ಕಿಳಿಸಲಾಗಿದೆ. ಒಂದು ರಾಷ್ಟ್ರೀಯ ಪಕ್ಷ ಎಂದ ಮೇಲೆ ಹಲವು ಆಕಾಂಕ್ಷಿಗಳನ್ನು ಸಂತೈಸುವಲ್ಲಿ ಸ್ವಲ್ಪ ವ್ಯತ್ಯಾಸ ಆಗುವುದು ಸಹಜ.

ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ನಿರಾಕರಿಸಲು ನಿಜಕ್ಕೂ ಕಾರಣ ಏನು?

ರಾಜ್ಯದಿಂದ ತೇಜಸ್ವಿನಿ ಅವರ ಹೆಸರನ್ನೇ ಒಮ್ಮತದಿಂದ ಕಳಿಸಿದ್ದೆವು. ಕೊನೆಯ ಹಂತದಲ್ಲಿ ಹೈಕಮಾಂಡ್‌ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ನೀಡಿದೆ. ಯಾವ ಮಾನದಂಡದಿಂದ ಈ ನಿರ್ಧಾರ ಕೈಕೊಳ್ಳಲಾಗಿದೆ ಎನ್ನುವುದು ನನಗೂ ಗೊತ್ತಾಗಿಲ್ಲ. ತೇಜಸ್ವಿನಿ ಅವರಿಗೆ ಟಿಕೆಟ್‌ ಸಿಗದಿರುವುದಕ್ಕೆ ವೈಯಕ್ತಿಕವಾಗಿ ನನಗೂ ಬೇಜಾರಾಗಿದೆ. ಹೈಕಮಾಂಡ್‌ ನಿರ್ಧಾರ ಒಪ್ಪಿಕೊಂಡು ಪ್ರಚಾರದಲ್ಲಿ ತೊಡಗಿದ್ದೇವೆ.

ಬಿಜೆಪಿ ಹಿರಿಯ ಮುಖಂಡ ಸಂತೋಷ್‌ ಅವರು ಕುಟುಂಬ ರಾಜಕಾರಣಕ್ಕೆ ತಡೆಯೊಡ್ಡಲು ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ?

ಅದು ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷದಲ್ಲಿ ಕುಟುಂಬ ರಾಜಕಾರಣದ ಪ್ರಸ್ತಾಪ ಇಲ್ಲ. ಎಲ್ಲ ಪಕ್ಷಗಳಲ್ಲೂ ಒಂದೇ ಕುಟುಂಬದ ಹಲವರು ಶಾಸಕರು, ಸಂಸದರು ಇದ್ದಾರೆ.

ಬಳ್ಳಾರಿಯಲ್ಲಿ ಸ್ಥಳೀಯ ಮುಖಂಡರು ಇರುವಾಗಲೂ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ ಸಂಬಂಧಿಗೆ ಟಿಕೆಟ್‌ ನೀಡಿದ್ದೀರಿ. ಬಿಜೆಪಿಗೆ ಜಾರಕಿಹೊಳಿ ಅಷ್ಟುಅನಿವಾರ್ಯವೇ ?

ರಾಜಕಾರಣ ಎಂದಮೇಲೆ ಗೆಲುವು ಮುಖ್ಯ. ಉಪಚುನಾವಣೆಯಲ್ಲಿ ನಮಗೆ ಹಿನ್ನಡೆಯಾಯಿತು. ಅದನ್ನು ಓವರ್‌ಟೇಕ್‌ ಮಾಡಬೇಕಿದೆ. ನಾನೇ ಹೋಗಿ ಅಲ್ಲಿ ಅಭಿಪ್ರಾಯ ಕ್ರೋಢೀಕರಣ ಮಾಡಿದಾಗ ಶ್ರೀರಾಮುಲು ಸೇರಿದಂತೆ ಅಲ್ಲಿನ ಎಲ್ಲ ಬಿಜೆಪಿ ಮುಖಂಡರು ವೈ.ದೇವೇಂದ್ರಪ್ಪ ಸೂಕ್ತ ಅಭ್ಯರ್ಥಿ ಎಂದು ಒಮ್ಮತದಿಂದ ಹೇಳಿದರು. ದೇವೇಂದ್ರಪ್ಪ ಗೆಲ್ಲುವ ತಾಕದ್ದು ಇದ್ದವರು. ಕಾಂಗ್ರೆಸ್ಸಿನಿಂದ ಬಂದಿದ್ದರೂ ಸರ್ವಸಮ್ಮತವಾಗಿ ಒಪ್ಪಿಕೊಂಡೆವು.

ಜಾರಕಿಹೊಳಿ ಕುಟುಂಬ ಬಳ್ಳಾರಿ ರಾಜಕೀಯದಲ್ಲಿ ಪ್ರವೇಶ ಮಾಡಿದೆ, ಶ್ರೀರಾಮುಲು-ಜನಾರ್ದನ ರೆಡ್ಡಿ ಕಥೆ ಏನು?

ಹಿಂದೆ ಬಳ್ಳಾರಿಯಲ್ಲಿ ಬಿಜೆಪಿ ಶಕ್ತಿ ಇರಲಿಲ್ಲ. ಸುಷ್ಮಾ ಸ್ವರಾಜ್‌ ಸ್ಪರ್ಧಿಸಿದ್ದಾಗ ಜನಾರ್ದನ ರಡ್ಡಿ, ಶ್ರೀರಾಮುಲು ಮುಂದೆ ನಿಂತು ಬಿಜೆಪಿ ಕಟ್ಟಿದರು. ಅವರನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಇಂದು ಶ್ರೀರಾಮುಲು ಅವರೇ ಮುಂದಾಗಿ ದೇವೇಂದ್ರಪ್ಪ ಅವರನ್ನು ಕಣಕ್ಕಿಳಿಸಲು ಹೇಳಿದ್ದರಿಂದ ಅವರ ಮುಂದಾಳತ್ವದಲ್ಲೇ ಪ್ರಚಾರ ಕಾರ್ಯ ನಡೆಯುತ್ತಿದೆ. ಇದರಿಂದ ಸ್ಥಳೀಯ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ. ಯಾರಲ್ಲೂ ಅಸ್ಥಿರತೆ ಕಾಣುತ್ತಿಲ್ಲ.


ವರದಿ :  ಮಲ್ಲಿಕಾರ್ಜುನ ಸಿದ್ದಣ್ಣವರ