ಹಾಸನ :  ಬೆಂಗಳೂರಿನಲ್ಲಿ ದೋಸ್ತಿ ಪಕ್ಷಗಳ ಬೃಹತ್‌ ಶಕ್ತಿಪ್ರದರ್ಶನದ ಬಳಿಕ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೊಸ ಹುಮ್ಮಸ್ಸಿನೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ. ಮೋದಿ ಅಲೆಯಲ್ಲಿ ಗೆದ್ದು ಬರುವ ನಿರೀಕ್ಷೆಯಲ್ಲಿರುವ ಬಿಜೆಪಿಯನ್ನು ಹೇಗಾದರೂ ಮಾಡಿ ರಾಜ್ಯದಲ್ಲಿ ಕನಿಷ್ಠ ಸೀಟುಗಳೊಂದಿಗೆ ಕಟ್ಟಿಹಾಕಬೇಕೆಂಬ ಉದ್ದೇಶದೊಂದಿಗೆ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಇದಕ್ಕಾಗಿ ರಾಜ್ಯದ ರೈತರು, ಯುವಜನರಿಗೆ ಭರಪೂರ ಭರವಸೆಗಳನ್ನು ಹೊಂದಿರುವ ಪ್ರಣಾಳಿಕೆಯೊಂದನ್ನು ಜೆಡಿಎಸ್‌ ಸಿದ್ಧಪಡಿಸಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಪ್ರತಿ ರೈತ ಕುಟುಂಬಕ್ಕೆ ತಿಂಗಳಿಗೆ 25 ಸಾವಿರ ಆದಾಯ ನೀಡುವ ವಿಶೇಷ ಯೋಜನೆ, ಕೃಷಿ ಅಧಾರಿತ ಕೈಗಾರಿಕೆಗಳು, ನಿರುದ್ಯೋಗ ನಿರ್ಮೂಲನೆಗೆ ಪ್ರೋತ್ಸಾಹ ನೀಡುವ ಹಲವು ಜನಪರ ಕಾರ್ಯಕ್ರಮಗಳು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿರಲಿವೆ. ಒಟ್ಟಾರೆ ಇಡೀ ರಾಜ್ಯದ ಬಡವರ ಜೀವನ ಸುಧಾರಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ರೂಪಿಸಲಾಗಿದೆ.

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ರಾಷ್ಟ್ರ ದ್ರೋಹ ಕಾನೂನು ರದ್ದುಪಡಿಸುವ ಘೋಷಣೆ ಇದೆಯಲ್ವಾ?

ಈ ಕಾನೂನು ಬಗ್ಗೆ ಹೇಗೆ ಬೇಕಾದರೂ ವ್ಯಾಖ್ಯಾನ ಮಾಡಬಹುದು. ಈ ರೀತಿಯ ಕಾನೂನು ರದ್ದುಪಡಿಸುವ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ದೇಶದಲ್ಲಿ ವ್ಯಾಪಕ ಚರ್ಚೆ ಆಗುವ ಅಗತ್ಯವಿದೆ. ಈ ಕಾನೂನು ರದ್ದು ಮಾಡುವುದರಿಂದ ಶಾಶ್ವತ ಪರಿಹಾರ ಸಾಧ್ಯವಾ? ಎಂಬ ಬಗ್ಗೆ ಸುದೀರ್ಘ ಚಿಂತನೆ ಮಾಡಬೇಕಿದೆ. ಕಾಶ್ಮೀರವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರದ್ರೋಹ ಕಾನೂನು ರೂಪಿಸಲಾಗಿದೆ. ಕಾಶ್ಮೀರ ಸೇರಿದಂತೆ ದೇಶದಲ್ಲಿ ಉಗ್ರರ ಹಾವಳಿ ಇರಬಹುದು. ಆದರೆ ಅದನ್ನು ತಡೆಯಲು ಅನೇಕ ಪರಾರ‍ಯಯ ಮಾರ್ಗಗಳಿವೆ. ಆದರೆ, ಅದರ ನಿಗ್ರಹಕ್ಕೆ ಜಾರಿಗೆ ತರುವ ಈ ರೀತಿಯ ಕಾನೂನುಗಳು ದೇಶದ ಶಾಂತಿ, ಅಭಿವೃದ್ಧಿಗೆ ಭಂಗ ತರುವಂತೆ ಆಗಬಾರದು. ಯಾವುದೇ ಸರ್ಕಾರ ಕೇಂದ್ರದಲ್ಲಿದ್ದರೂ ವಿರೋಧ ಪಕ್ಷಗಳೂ ಉಗ್ರರ ನಿರ್ನಾಮಕ್ಕೆ ಮತ್ತು ಶಾಂತಿಗಾಗಿ ತೆಗೆದುಕೊಳ್ಳುವ ಕ್ರಮಗಳಿಗೆ ಸಹಕರಿಸಲೇಬೇಕಾಗುತ್ತದೆ.

ಈಗಿನ ಲೋಕಸಭೆ ಚುನಾವಣೆ ನಡೆಯುತ್ತಿರುವುದು ಕೋಮುವಾದ ಮತ್ತು ರಾಷ್ಟ್ರ ಪ್ರೇಮದ ನಡುವೆಯೋ ಅಥವಾ ಕೋಮುವಾದ ಮತ್ತು ಜಾತ್ಯತೀತತೆಯ ನಡುವೆಯೋ?

ರಾಷ್ಟ್ರ ಪ್ರೇಮ ಅಂದರೆ ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮದ ವಿರುದ್ಧ ಸಂಘರ್ಷಕ್ಕಿಳಿಸುವುದಲ್ಲ. ಪ್ರತಿಯೊಬ್ಬರಲ್ಲೂ ದೇಶದ ಪ್ರಗತಿ ಆಧಾರಿತ ರಾಷ್ಟ್ರಪ್ರೇಮ ಇರಬೇಕೇ ಹೊರತು ಓಟಿನ ರಾಜಕಾರಣಕ್ಕೆ ರಾಷ್ಟ್ರಪ್ರೇಮ ಅಥವಾ ರಾಷ್ಟ್ರ ಭಕ್ತಿ ವಿಚಾರ ಎತ್ತುವುದು ಸರಿಯಲ್ಲ. ಕೋಮುವಾದ ಭಾರತ ದೇಶಕ್ಕೆ ಅಪಾಯಕಾರಿ. ನಮ್ಮಲ್ಲಿ ವಿಭಿನ್ನ ಧರ್ಮ, ಸಂಪ್ರದಾಯ, ಜಾತಿಗಳಿವೆ. ಪರಿಸ್ಥಿತಿ ಹೀಗಿದ್ದಾಗ ಸಾಮರಸ್ಯ, ಸಹಬಾಳ್ವೆಯ ಸಂದೇಶವನ್ನು ವಾಸ್ತವದಲ್ಲಿ ಸಾಕಾರಗೊಳಿಸಿದರೆ ಶಾಂತಿ ನೆಲೆಸಲು ಸಾಧ್ಯ. ಅದನ್ನು ಬಿಟ್ಟು ಈಗ ಕೋಮುವಾದವನ್ನೇ ಹೆಚ್ಚು ಬಿತ್ತಿ, ಬೆಳೆಯುವ ಕೆಲಸ ನಡೆಸಲಾಗುತ್ತಿದೆ. ಇದಕ್ಕೆ ಅಂಕುಶ ಹಾಕುವ ತುರ್ತು ಅಗತ್ಯವಿದೆ. ಆ ದೃಷ್ಟಿಯಿಂದ ನೋಡಿದರೆ ಈ ಲೋಕಸಭಾ ಚುನಾವಣೆ ಕೋಮುವಾದ ಮತ್ತು ಜಾತ್ಯತೀತ ತತ್ವದ ನಡುವೆ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಇವೆಯಲ್ಲವೇ?

ಅಂಥ ಸಾಧ್ಯತೆಗಳಿವೆ ಎಂಬುದೆಲ್ಲ ಬರೀ ಸುಳ್ಳು... ಭ್ರಷ್ಟಾಚಾರ ಮುಕ್ತ ಭಾರತ, ಕ್ಯಾಶ್‌ಲೆಸ್‌, ಡಿಜಿಟಲ್‌ ಇಂಡಿಯಾ ಎಂದೆಲ್ಲಾ ಮೋದಿ ಹೇಳಿದರು. ಎಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ? ಎಲ್ಲಿ ಕ್ಯಾಶ್‌ಲೆಸ್‌ ಮತ್ತು ಡಿಜಿಟಲ್‌ ವ್ಯವಸ್ಥೆ ಆಗಿದೆ. ಎಲ್ಲಾ ಮಾತಿನಲ್ಲಿ ಆಗಿದೆ ಅಷ್ಟೆ! ಚುನಾವಣೆಗಳಲ್ಲಿ ಬೀದಿ ಬೀದಿಗಳಲ್ಲಿ ಹಣ ಹಂಚುವ ಕೊಳಕು ವ್ಯವಸ್ಥೆ ಇನ್ನೂ ಇದೆ. ಸರ್ಜಿಕಲ್‌ ಸ್ಟೆ್ರೖಕ್‌ ಯಾರ ಕಾಲದಲ್ಲಿ ಆಗಿಲ್ಲ ಹೇಳಿ. ವಾಜಪೇಯಿ ಕಾರ್ಗಿಲ್‌ ಯುದ್ಧ ಮಾಡಲಿಲ್ಲವಾ?. ಇಂದಿರಾಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರ ಕಾಲದಲ್ಲೆಲ್ಲಾ ಯುದ್ಧ ಆಗಲಿಲ್ಲವಾ? ಆದರೆ, ಮೋದಿ ಸರ್ಜಿಕಲ್‌ ಸ್ಟೆ್ರೖಕ್‌ ಅನ್ನು ತಮ್ಮ ವೈಯಕ್ತಿಕ ವೈಭವೀಕರಣಕ್ಕೆ ಬಳಸಿಕೊಂಡರು. ಇದು ದೇಶದ ರಕ್ಷಣೆ ದೃಷ್ಟಿಯಿಂದಲೂ ಸರಿಯಲ್ಲ.

ಮೋದಿ ಅವರು ಕಿಸಾನ್‌ ಸಮ್ಮಾನ್‌ ಕಾರ್ಯಕ್ರಮದ ಬಗ್ಗೆ ಏನಂತೀರಿ?

ಕಿಸಾನ್‌ ಸಮ್ಮಾನ್‌ ಯೋಜನೆಯಡಿ 5 ಎಕರೆ ಜಮೀನು ಹೊಂದಿರುವ ರೈತರಿಗೆ ಕಂತಿನ ಆಧಾರದ ಮೇಲೆ ವಾರ್ಷಿಕ 6 ಸಾವಿರ ನೀಡುತ್ತಾರಂತೆ. ಅದೂ ಚುನಾವಣೆ ಸಂದರ್ಭದಲ್ಲಿ...! ಕೃಷಿ ಬಗ್ಗೆ ಕನಿಷ್ಠ ತಿಳಿವಳಿಕೆ ಇಲ್ಲದವರ ಕಾರ್ಯಕ್ರಮ ಇದು. ರೈತರಿಗೆ ಈ 6 ಸಾವಿರ ಏನೇನೂ ಸಾಲದು. ಅದರ ಬದಲು ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜ ಉಚಿತವಾಗಿ ನೀಡುವುದಾಗಿ ಹೇಳಿದ್ದರೆ ಒಪ್ಪಬಹುದಿತ್ತು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೋಡಿ ಪ್ರತಿ ರೈತರ 2 ಲಕ್ಷ ಸಾಲ ಮನ್ನಾಕ್ಕೆ 46 ಸಾವಿರ ಕೋಟಿ ನೀಡುತ್ತಿದ್ದಾರೆ. ಮೋದಿ ಅವರು ಮೊದಲು ಪ್ರತಿಯೊಂದಕ್ಕೂ ‘ನಾನು’ ಎಂಬ ಹೇಳುವುದನ್ನು ಬಿಡಬೇಕು. ಹಾಗೆ ನೋಡಿದರೆ ವಾಜಪೇಯಿ ಅವರು ಮೋದಿಗಿಂತ ಉತ್ತಮ ಪ್ರಧಾನಿ. ದೇಶದ ಘನತೆಯನ್ನು ಸಂಸ್ಕಾರಯುತ ನಡವಳಿಕೆ, ಉತ್ತಮ ಕಾರ್ಯಕ್ರಮಗಳು ಮತ್ತು ನಿರ್ಧಾರಗಳಿಂದ ಪ್ರಪಂಚದಲ್ಲಿ ಎತ್ತಿ ಹಿಡಿದರು ಅವರು.

ಮಹಾಮೈತ್ರಿಯಲ್ಲೇ ಗೊಂದಲ ಇದೆ, ಉತ್ತರ ಪ್ರದೇಶದಲ್ಲೇ ಕಾಂಗ್ರೆಸ್‌ ಮೈತ್ರಿಯೊಡನೆ ಸೇರಿಲ್ವಲ್ವಾ?

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮಹಾ ಮೈತ್ರಿಯೊಂದಿಗೆ ಹೊರಗಿದೆ. ಆದರೆ ಬಿಜೆಪಿಯೇತರ ಪಕ್ಷಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕರ್ನಾಟಕ ಸೇರಿದಂತೆ ಉಳಿದ ಎಲ್ಲಾ ರಾಜ್ಯಗಳಲ್ಲಿ ಮಹಾ ಮೈತ್ರಿ ಗಟ್ಟಿಯಾಗಿದೆ. ಮೋದಿ ಅವರು, ಐಟಿ, ಸಿಬಿಐ ಸೇರಿ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಪಕ್ಷಗಳ ಮುಖಂಡರನ್ನು ಹಣಿಯಬಹುದು ಎಂದು ತಿಳಿದಿದ್ದರೆ ಅದು ಭ್ರಮೆಯಷ್ಟೇ. ಮಹಾ ಮೈತ್ರಿ ಪಕ್ಷಗಳು ಮುಂದೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಖಂಡಿತ.

ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡಲಿಕ್ಕೆ ನೀವೂ ಸೇರಿದಂತೆ ಎಲ್ಲಾ ಪಕ್ಷಗಳು ಒಪ್ಪುತ್ತವೆಯೇ ?

ಮಹಾಮೈತ್ರಿ ಅಧಿಕಾರಕ್ಕೆ ಬಂದರೆ ನಾನಂತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡಲು ಒಪ್ಪಿದ್ದೇನೆ. ಈ ವಿಚಾರವಾಗಿ ಉಳಿದ ಪಕ್ಷಗಳು ಸೇರಿ ಸೂಕ್ತ ನಿರ್ಧಾರವೊಂದಕ್ಕೆ ಬರುವ ವಿಶ್ವಾಸವಿದೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯದ ಪ್ರಶ್ನೆಯೇ ಬರುವುದಿಲ್ಲ.

ಮಂಡ್ಯದಲ್ಲಿ ಪ್ರಚಾರ ವೇಳೆ ತಮ್ಮ ಪಕ್ಷದ ಮುಖಂಡರೇ ಗೌಡ್ತಿ ಎಂಬಿತ್ಯಾದಿ ಭಾಷೆ ಬಳಸಿ ಜನಾಂಗದ ಆಧಾರದ ಮೇಲೆ ಪ್ರತಿಪಕ್ಷದ ಅಭ್ಯರ್ಥಿಯನ್ನು ನಿಂದಿಸುತ್ತಿರುವುದು ಸರಿಯೇ ?

ಖಂಡಿತಾ ಇದು ಸರಿಯಲ್ಲ. ತುಟಿ ಮೀರಿದ ಮಾತು ಯಾರಿಗೂ ಶೋಭೆ ತರುವುದಿಲ್ಲ. ನಮ್ಮ ಪಕ್ಷದವರು ಅಂತಹ ಮಾತುಗಳನ್ನು ಆಡಿದ್ದರೂ ಅದು ಅತ್ಯಂತ ಖಂಡನೀಯ. ಚುನಾವಣೆ ಪ್ರಚಾರ ವೇಳೆ ಸಭ್ಯತೆ ಮೆರೆಯಬೇಕು. ಯಾರೇ ಆದರೂ ವೈಯಕ್ತಿಕ ನೆಲೆಯಲ್ಲಿ ಟೀಕೆ-ಟಿಪ್ಪಣೆ ಮಾಡುವುದು ಸರಿಯಲ್ಲ. ಸಂಸ್ಕಾರಹೀನ ಪದಗಳನ್ನು ಬಳಸಿದರೆ ಜನರ ಒಲವು ಗಳಿಸಲಸಾಧ್ಯ ಎಂಬ ಸತ್ಯ ಅರಿತು ಮಾತನಾಡಬೇಕು.

ನೀವು ತುಮಕೂರಿನಲ್ಲಿ ಸ್ಪರ್ಧಿಸುತ್ತಿದ್ದೀರಿ. ಅಲ್ಲಿ ನಿಮಗೆ ‘ಗಂಗೆ’ ಶಾಪ ಇದೆಯಂತೆ ?

ವೀರೇಂದ್ರ ಪಾಟೀಲ್‌ ಅವರು ಮುಖ್ಯಮಂತ್ರಿ ಆಗಿದ್ದಾಗ ಹೇಮಾವತಿ ಜಲಾಶಯದಿಂದ ಬಾಗೂರು-ನವಿಲೆ ಸುರಂಗ ಮಾರ್ಗದಿಂದ ತುಮಕೂರಿಗೆ ನೀರು ಒದಗಿಸುವ ಯೋಜನೆಗೆ ಅಡಿಗಲ್ಲು ಹಾಕಿಸಿದವನು ನಾನು. ನಂತರ 5 ವರ್ಷ ಕಾಮಗಾರಿ ಸ್ಥಗಿತಗೊಂಡಿತ್ತು. ನಂತರ ಕಾಮಗಾರಿ ಪೂರ್ಣಗೊಳಿಸಲು ನಾನೇ ಹೋರಾಟ ಮಾಡಬೇಕಾಯಿತು. ಬಾಗೂರು-ನವಿಲೆಯಿಂದ ಸುರಂಗ ಮಾರ್ಗ 100 ಅಡಿಗಳಿಗಿಂತ ಹೆಚ್ಚು ಅಳದಲ್ಲಿದೆ. ಇದರಿಂದ ಚನ್ನಪಟ್ಟಣ ತಾಲೂಕಿನ ಹಲವೆಡೆ ಭೂಮಿಯಲ್ಲಿ ನೀರಿನ ಕೊರತೆ ಉಂಟಾಗಿದೆ ತೆಂಗಿನ ತೋಟಗಳು ಒಣಗಿ ಹೋದವು. ಈ ನಾಲೆಯಿಂದ ತುಮಕೂರು ಜಿಲ್ಲೆಯ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಒದಗಿದೆ, ಕೆರೆಕಟ್ಟೆತುಂಬಿದೆ. ಇದನ್ನೆಲ್ಲ ಮರೆತು ವ್ಯರ್ಥ ಟೀಕೆ ಮಾಡಲಾಗುತ್ತಿದೆ. ಜನತೆಗೆ ನಾನೇನು ಮಾಡಿದ್ದೇನೆ ಎಂಬುದು ಗೊತ್ತಿದೆ.

ಹಿಂದಿನಿಂದಲೂ ನಿಮ್ಮ ಮೇಲೆ ಉತ್ತರ ಕರ್ನಾಟಕದ ವಿರೋಧಿ ಎಂಬ ಆರೋಪ ಇದೆಯಲ್ವಾ?

ಇದು ಸರಿಯಲ್ಲ. ನಾನು ಪ್ರಧಾನಿ ಆದ ತಕ್ಷಣವೇ ಬಚಾವತ್‌ ಆಯೋಗ ನೀಡಿದ ಗಡುವಿನಲ್ಲೇ ಕೃಷ್ಣ ಜಲಾಶಯವನ್ನು 521 ಮೀಟರ್‌ಗೆ ಎತ್ತರಿಸಲು 12 ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಗೆ ಸಾವಿರ ಕೋಟಿ ರುಪಾಯಿ ಸಾಲ ತರಲಾಗಿದೆ. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರಿಂದ 14 ಲಕ್ಷ ಎಕರೆ ಭೂಮಿ ನೀರಾವರಿ ಆಗಿದೆ. ಇದು ಉತ್ತರ ಕರ್ನಾಟಕದ ವಿರೋಧಿಯೇ? ನಾಯಕ ಜನಾಂಗವನ್ನು ಎಸ್ಟಿಗೆ ಸೇರಿಸಲಾಯಿತು. ಜಿಲ್ಲಾ, ತಾಲೂಕು ಮತ್ತು ಗ್ರಾಪಂಗಳಲ್ಲಿ ರಾಜಕೀಯ ಮೀಸಲಾತಿ ತರಲಾಯಿತು. ಇದರಿಂದ ಹಳೇ ಮೈಸೂರು ಪ್ರಾಂತ್ಯಕ್ಕೆ ಮಾತ್ರ ಅನುಕೂಲವಾಗಿದೆಯೇ?

ವರದಿ :  ದಯಾಶಂಕರ ಮೈಲಿ