ದೇಶದ ಮಹಾ ಸಮರವಾದ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ನಾಯಕರ ನಡುವೆ ವಾಗ್ಯುದ್ದ ಮುಂದುವರಿದಿವೆ.  ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ಸವಾಲ್ ಹಾಕಿದ್ದಾರೆ. 

ಶಿವಮೊಗ್ಗ : ಧನಲಕ್ಷ್ಮೀ, ಧಾನ್ಯ ಲಕ್ಷ್ಮೀ, ದರಿದ್ರ ಲಕ್ಷ್ಮೀ ಎಲ್ಲವೂ ಬಿಜೆಪಿಯವರ ಜೇಬಿನಲ್ಲಿಯೇ ಇವೆ. ನಾವು ಬಿಜೆಪಿಯವರ ಲಿಸ್ಟ್‌ ಕೊಡುತ್ತೇವೆ. ತಾಕತ್ತಿದ್ದರೆ ಅವರ ಮನೆ ಮೇಲೂ ಐಟಿ ಇಲಾಖೆ ದಾಳಿ ನಡೆಸಲಿ ನೋಡೋಣ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದರು.

ಮಧು ಬಂಗಾರಪ್ಪ ಅವರು ನಾಮಪತ್ರ ಸಲ್ಲಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮವರು ನ್ಯಾಯಯುತವಾಗಿದ್ದಾರೆ. ಚುನಾವಣೆಯಲ್ಲಿ ನಮ್ಮವರನ್ನು ಹೆದರಿಸಲು ಐಟಿ ದಾಳಿ ನಡೆಸಲಾಗುತ್ತಿದೆ. ಇದಕ್ಕೆಲ್ಲ ಹೆದರುವ ಪ್ರಶ್ನೆಯೇ ಇಲ್ಲ ಎಂದರು.

ಅಧಿಕಾರ ಇದ್ದಾಗ ಮಾಜಿ ಸಿಎಂ ಯಡಿಯೂರಪ್ಪ ಏನೂ ಮಾಡಲಿಲ್ಲ. ಈಗ ಮಾಡುತ್ತೇನೆ ಅಂತಿದ್ದಾರೆ. ಅಚ್ಛೆ ದಿನ್‌ ಎಂದು ಹೇಳುತ್ತಿದ್ದರು. ಆದರೆ ಯಾವ ವಿಷಯದಲ್ಲಿ ಅಚ್ಛೆ ದಿನ್‌ ಬಂದಿದೆ ಎಂದು ಅವರೇ ಸ್ಪಷ್ಟಪಡಿಸಬೇಕೆಂದು ಹೇಳಿದರು.

ಜಿಲ್ಲೆಗೆ ನೀರಾವರಿ ಯೋಜನೆ ಮಂಜೂರು ಮಾಡಿಸಿದ್ದು ನಾನೇ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಜೆಚ್‌ ಯಡಿಯೂರಪ್ಪ ಮಂಡಿಸಿದ್ದಾರಾ? ಇಲ್ಲ ನಾವು ಮಂಡಿಸಿದ್ದಾ? ಅಧಿಕಾರ ಇದ್ದಾಗ ಯಡಿಯೂರಪ್ಪ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಇದೀಗ ಎಲ್ಲವನ್ನೂ ನಾನೇ ಮಾಡಿಸಿದ್ದು ಎನ್ನುತ್ತಿದ್ದಾರೆ. ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ, ಶೂರನೂ ಅಲ್ಲ ಎಂದು ಛೇಡಿಸಿದರು.