ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ನಾಯಕರ ಮುನಿಸು
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಹಲವೆಡೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಕಾಂಗ್ರೆಸ್ ನಾಯಕರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.
ಕಾರವಾರ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಕೆಲವು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಮುನಿಸು ಮಾತ್ರ ಕಡಿಮೆಯಾಗಿಲ್ಲ.
ಅತ್ತ ಮಂಡ್ಯದಲ್ಲಿಯೂ ಮೈತ್ರಿ ಅಭ್ಯರ್ಥಿ ವಿರುದ್ಧ ಅಸಮಾಧಾನ ಭುಗಿಲೆದ್ದಿದ್ದರೆ, ಇತ್ತ ಉತ್ತರಕನ್ನಡದಲ್ಲಿಯೂ ಕೂಡ ಕಾಂಗ್ರೆಸ್ ನಾಯಕರು ಮುನಿಸಿಕೊಂಡಿದ್ದಾರೆ.
JDS ಗೆ ಕ್ಷೇತ್ರ ಬಿಟ್ಟು ಕೊಟ್ಟಿರುವ ನಿರ್ಧಾರದ ಬಗ್ಗೆ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಅಸಮಾಧಾನಗೊಂಡಿದ್ದು, ಮೈತ್ರಿ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಪರ ಪ್ರಚಾರಕ್ಕೆ ಆಗಮಿಸಿಲ್ಲ.
ಅಸ್ನೋಟಿಕರ್ ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಗೂ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಗೈರಾಗಿದ್ದು, ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನ ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಇನ್ನು ಸಚಿವ ದೇಶಪಾಂಡೆ ಹಾದಿಯನ್ನೇ ಶಾಸಕ ಸತೀಶ್ ಸೈಲ್ ಕೂಡ ತುಳಿದಿದದ್ದು, ಪ್ರಚಾರ ಕಾರ್ಯದಿಂದ ದೂರವೇ ಉಳಿದಿದ್ದಾರೆ. ಅಲ್ಲದೇ ಆನಂದ್ ಆಸ್ನೋಟಿಕರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.