ಶಿವಮೊಗ್ಗ :  ಮೋದಿಗೆ ಮಕ್ಕಳಿದ್ದಿದ್ದರೆ ಅವರಿಗೂ ಬಿಜೆಪಿ ಟಿಕೇಟ್ ನೀಡುತ್ತಿತ್ತು ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ರಿಪ್ಪನ್ ಪೇಟೆಯಲ್ಲಿ ಮಧು ಬಂಗಾರಪ್ಪನವರ ಪರ ಮತಪ್ರಚಾರದ ವೇಳೆ ಮಾತನಾಡಿದ ಅವರು ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ  ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನ ಜರಿಯುತ್ತಾ ಬಂದಿದೆ. ಬಿಜೆಪಿಯೂ ಸಹ ಈ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ಪುತ್ರ  ಬಿ.ವೈ.ರಾಘವೇಂದ್ರಗೆ ಲೋಕಸಭಾ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿ ಅವರು ಕುಟುಂಬ ರಾಜಕಾರಣ ಮಾಡಲಿಲ್ಲವೇ. ಹಾಗೆ ಮೋದಿಗೂ ಮಕ್ಕಳಿದ್ದಿದ್ದರೆ ಅವರಿಗೂ ಟಿಕೇಟ್ ನೀಡಲಾಗುತ್ತಿತ್ತು. ಹಾಗಾಗಿ ಕುಟುಂಬ ರಾಜಕಾರಣ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗದೆ ಈಗ ಎಲ್ಲಾ ಪಕ್ಷಗಳಲ್ಲಿಯೂ ಇದೆ ಎಂದರು.  

ಇದೇ ವೇಳೆ ಹಾಲಪ್ಪ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಮಂಗನ ಕಾಯಿಲೆ ಬಂದಿದ್ದೆ ಇವನಿಂದ. ರಾಜ್ಯದ ಬಜೆಟ್ ಬಗ್ಗೆ ಟೀಕೆ ಮಾಡುವ ಈ ವ್ಯಕ್ತಿಗೆ ಅನುದಾನ ಕೊಡದ ಕಾರಣ ಹೀಗೆ ನಡೆದುಕೊಳ್ಳುತ್ತಿದ್ದಾನೆ ಎಂದು ಹರಿಹಾಯ್ದರು. 

ಸುಮಲತಾ ಬಗ್ಗೆ ಅನುಕಂಪ ತೋರಿಸುವ ಯಡಿಯೂರಪ್ಪ, ನರೇಂದ್ರ ಮೋದಿಯವರೇ ನಿಮ್ಮದೇ ಪಕ್ಷದ ತೇಜಸ್ವಿನಿ ಅನಂತ ಕುಮಾರ್ ಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.