ಬೀದರ್ : ಬೀದರ್ ಹಾಲಿ ಸಂಸದ ಭಗವಂತ್ ಖೂಬಾ ವಿರುದ್ಧ ದೂರು ದಾಖಲಿಸಲಾಗಿದೆ. 

ಕರ್ನಾಟಕ ಸರ್ಕಾರದ ವಿರುದ್ಧ ನಕಲಿ ಆಡಿಯೋ ಸೃಷ್ಟಿಸಿ ಸರ್ಕಾರದ ವಿರುದ್ಧ ತೇಜೋವಧೆ ಮಾಡಲಾಗುತ್ತಿದೆ ಎಂದು ಚುನಾವಣಾ ಆಯೋಗದಲ್ಲಿ ದೂರು ನೀಡಲಾಗಿದೆ. 

ವ್ಯಕ್ತಿಯೋರ್ವ ಸಮ್ಮಿಶ್ರ ಸರ್ಕಾರ ವಿರುದ್ಧ ಸಾಲಮನ್ನಾ, ಪರ್ಸೆಂಟೆಜ್ ಸರ್ಕಾರ ಎಂದು ಮಾತನಾಡಿದ ಕಾಲ್ ರೆಕಾರ್ಡ್ ಜಿಲ್ಲೆಯಾದ್ಯಂತ ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ  ಕೆಪಿಸಿಸಿ ಜಾಲತಾಣದ ಸಂಚಾಲಕ ಸುಧಾಕರ ಕೊಳ್ಳುರ ದೂರು ದಾಖಲಿಸಿದ್ದಾರೆ. 

ಸಂಸದ ಭಗವಂತ ಖೂಬಾ ಕಚೇರಿ ಸಿಬ್ಬಂದಿ ಆಡಿಯೋ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದು,  ಯುವತಿಯೊಬ್ಬರು ಕರೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕಾಗಿ ವಿನಂತಿಸಿಕೊಂಡಿರುವ ಕಾಲ್ ರೆಕಾರ್ಡ್ ಇದಾಗಿದೆ.  

ಒಟ್ಟು 25 ನಿಮಿಷಗಳ ಕಾಲದ ಕಾಲ್ ರೆಕಾರ್ಡ್ ಇದಾಗಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಮನಬಂದಂತೆ ಈ ಆಡಿಯೋದಲ್ಲಿ ಮಾತನಾಡಲಾಗಿದೆ. ಇದೀಗ ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.  

ಈ ನಿಟ್ಟಿನಲ್ಲಿ ಈ ಆಡಿಯೋ ರೆಕಾರ್ಡ್ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ ಬೀದರ್ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.