ನವದೆಹಲಿ: ಲೋಕಸಭೆಯ 7ನೇ ಹಾಗೂ ಕೊನೆಯ ಹಂತದ ಚುನಾವಣಾ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದಿದೆ. ಇದೇ ವೇಳೆ, ಕರ್ನಾಟಕದ ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಸಮರದ ಬಹಿರಂಗಕ್ಕೂ ಪ್ರಚಾರವೂ ಅಂತ್ಯಗೊಂಡಿದೆ. ಹೀಗಾಗಿ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಬೇಕಾಗುತ್ತದೆ. ಸ್ಥಳೀಯರಲ್ಲದವರು ಕ್ಷೇತ್ರ ತೊರೆಯಬೇಕಾಗುತ್ತದೆ.

7 ಹಂತದ ಲೋಕಸಭೆ ಚುನಾವಣೆ ಏ.11ರಿಂದ ಆರಂಭವಾಗಿತ್ತು. ಮೇ 19ರ ಭಾನುವಾರದಂದು ಕೊನೆಯ ಹಂತದ ಚುನಾವಣೆ ನಡೆಯುವುದರೊಂದಿಗೆ ಸಾರ್ವತ್ರಿಕ ಲೋಕಸಭಾ ಮಹಾಸಮರದ ಮತದಾನ ಪ್ರಕ್ರಿಯೆಗೆ ತೆರೆ ಬೀಳಲಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

7ನೇ ಹಂತದ ಚುನಾವಣೆಯಲ್ಲಿ ಲೋಕಸಭೆಯ 59 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ- ತೃಣಮೂಲ ಕಾಂಗ್ರೆಸ್‌ ನಡುವಣ ಹಿಂಸಾಚಾರದಿಂದಾಗಿ ಗುರುವಾರ ಸಂಜೆಯೇ ಬಹಿರಂಗ ಪ್ರಚಾರ ಕೊನೆಗೊಂಡಿತ್ತು. ಶುಕ್ರವಾರ 50 ಕ್ಷೇತ್ರಗಳಲ್ಲಿ ಪ್ರಚಾರ ಅಂತ್ಯವಾಯಿತು.

ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಜತೆಗೆ ನಡೆಸಿದ ಈ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಅವರು ಸುದ್ದಿಗಾರರ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡಲಿಲ್ಲ. ಎಲ್ಲದಕ್ಕೂ ಅಮಿತ್‌ ಶಾ ಅವರೇ ಉತ್ತರ ನೀಡಿದರು.

ನನಗೆ ಆಶೀರ್ವಾದ ಮಾಡಿ 5 ವರ್ಷಗಳ ಕಾಲ ಅಧಿಕಾರ ನಡೆಸಲು ಅವಕಾಶ ನೀಡಿದ ದೇಶದ ಜನತೆಗೆ ಧನ್ಯವಾದ ಹೇಳುತ್ತೇನೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಸರ್ಕಾರ ರಚನೆಯಾಗುತ್ತಿದ್ದಂತೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಆದಷ್ಟುಶೀಘ್ರ ಈಡೇರಿಸುತ್ತೇವೆ. ಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸಿದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಿ ತುಂಬಾ ವರ್ಷಗಳೇ ಆಗಿವೆ ಎಂದರು.

ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು 142 ರಾರ‍ಯಲಿಗಳನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. 4 ರೋಡ್‌ ಶೋಗಳನ್ನು ನಡೆಸಿದ್ದಾರೆ. 1.05 ಲಕ್ಷ ಕಿ.ಮೀ. ಸಂಚರಿಸಿ, 10 ಸಾವಿರ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ. 7 ಸಾವಿರ ಫಲಾನುಭವಿಗಳ ಜತೆ ನೇರವಾಗಿ ಮಾತನಾಡಿದ್ದಾರೆ. ಸುಮಾರು 1.5 ಕೋಟಿ ಜನರನ್ನು ಅವರು ತಲುಪಿದ್ದಾರೆ. 46 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಹಾಗೂ 18 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನದಲ್ಲೂ ಅವರು ಪ್ರಚಾರ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾಹಿತಿ ನೀಡಿದರು.

ಮೋದಿ ಕ್ಷೇತ್ರಕ್ಕೆ ಚುನಾವಣೆ :  ಪಂಜಾಬಿನ (13), ಉತ್ತರ ಪ್ರದೇಶ (13), ಪಶ್ಚಿಮ ಬಂಗಾಳ (9), ಬಿಹಾರ (8), ಮಧ್ಯಪ್ರದೇಶ (8), ಹಿಮಾಚಲ ಪ್ರದೇಶ (4), ಜಾರ್ಖಂಡ್‌ (3) ಚಂಡೀಗಢ (1) ಕ್ಷೇತ್ರಗಳಿಗೆ ಭಾನುವಾರ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ವಾರಾಣಸಿ ಕ್ಷೇತ್ರವೂ ಕೊನೆಯ ಹಂತದ ಚುನಾಣೆಗೆ ಸಾಕ್ಷಿಯಾಗಲಿದೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವ ಮನೋಜ್‌ ಸಿನ್ಹಾ ಸೇರಿದಂತೆ 10 ಮಂದಿ ಬಿಜೆಪಿ ಮುಖಂಡರ ಭವಿಷ್ಯ ನಿರ್ಧಾರವಾಗಲಿದದೆ.

ಪಂಜಾಬಿನಲ್ಲಿ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌, ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸುನಿಲ್‌ ಜಾಖರ್‌ ಮತ್ತು ಆಮ್‌ ಆದ್ಮಿ ಪಕ್ಷದ ಪಂಜಾಬ್‌ ಅಧ್ಯಕ್ಷ ಭಗವಂತ್‌ ಮಾನ್‌, ಬಿಜೆಪಿಯಿಂದ ಸ್ಪರ್ಧಿಸಿರುವ ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳೆನಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.