ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಈ ವೇಳೆ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಾಯಕರು ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಹುಬ್ಬಳ್ಳಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ನಾಯಕರು ಎಲ್ಲೆಡೆ ಪ್ರವಾಸ ಕೈಗೊಂಡು ಪ್ರಚಾರ ಮಾಡುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜ್ಯದ ವಿವಿಧೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಮತದಾರರದಲ್ಲಿ ಹುಮ್ಮಸ್ಸು ಮೂಡಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಹೈದ್ರಾಬಾದ್ ಕರ್ನಾಟಕದಲ್ಲಿ ಎಲ್ಲ ಕ್ಷೇತಗಳು ಬಿಜೆಪಿ ಪಾಲಾಗಲಿವೆ. ಮುಂಬೈ ಕ್ಷೇತ್ರದಲ್ಲಿ ಕಳೆದ ಬಾರಿ ನಾವು ಒಂದು ಕ್ಷೇತ್ರದಲ್ಲಿ ಸೋಲು ಅನುಭವಿದ್ದೆವು. ಆದರೆ ಈ ಬಾರಿ ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎನ್ನುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ಇನ್ನು ಇತ್ತ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಧರ್ಮದ ಚುನಾವಣೆ ನಡೆಯುತ್ತಿದೆ. ಕಳೆದ ವಿಧಾನ ಸಭಾ ಚುನಾವಣೆ ಮುಂಚೆ ಧರ್ಮವನ್ನ ಒಡೆಯಲು ಹೋದವರು ಈಗ ಎಲ್ಲ ಒಂದೇ ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ವಿನಯ ಕುಲಕರ್ಣಿಗೆ ಶೆಟ್ಟರ್ ಟಾಂಗ್ ನೀಡಿದ್ದಾರೆ.
ಇನ್ನು ಮಹಾಮೈತ್ರಿ ಬಗ್ಗೆ ಮಾತನಾಡಿ ಈಗಾಗಲೇ ಮೂರಾಬಟ್ಟೆಯಾಗಿರುವ ಕೂಟವಾಗಿದೆ. ಮಂಡ್ಯ, ಮೈಸೂರು, ಹಾಸನ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ಮತಹಾಕಲು ಮುಂದಾಗಿದ್ದಾರೆ. ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಗನ ಸೋಲಿನ ಭಯ ಕಾಡುತ್ತಿದೆ ಎಂದರು.
