ಬೆಂಗಳೂರು :  ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಿತ್ವ ಮತ್ತು ಆಡಳಿತ ವೈಖರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕಳೆದ ಚುನಾವಣೆಗಿಂತ ಈ ಬಾರಿ ಶೇ.15ರಷ್ಟುಹೆಚ್ಚು ಮತವನ್ನು ಬಿಜೆಪಿ ಪಡೆದುಕೊಳ್ಳಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.

ಪಕ್ಷದಲ್ಲಿ ಹಿರಿಯರನ್ನು ಮೂಲೆಗುಂಪು ಮಾಡಿಲ್ಲ. ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮುನ್ನಡೆಸಲಾಗುತ್ತಿದೆ. 75 ವರ್ಷದ ಮಿತಿಯಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ಬದ್ಧವಾಗಿರುತ್ತೇನೆ. ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದ್ದು, ಮಿತ್ರ ಪಕ್ಷಗಳು ಬಡಿದಾಡಿಕೊಂಡು ಸರ್ಕಾರ ಪತನವಾಗಲಿದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ ಮತ್ತು ವರದಿಗಾರರ ಕೂಟಗಳು ಶುಕ್ರವಾರ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 22 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ. ಜೆಡಿಎಸ್‌-ಕಾಂಗ್ರೆಸ್‌ನವರು ಸುಳ್ಳಿನ ಕಥೆಗಳನ್ನು ಜನರ ಮುಂದಿಡುತ್ತಿದ್ದಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರಂತೂ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ, ಬಡವರಿಗೆ ಏನೂ ಮಾಡಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಆದರೆ, ದೇಶದ ನೈರ್ಮಲ್ಯ ಕಾಪಾಡಲು ಶೌಚಾಲಯಗಳ ನಿರ್ಮಾಣ, ಉಜ್ವಲ್‌ ಯೋಜನೆಯಡಿ ಗ್ಯಾಸ್‌ ವಿತರಣೆ, ಉದ್ಯಮ ಪ್ರಾರಂಭಕ್ಕೆ ಮುದ್ರಾ ಯೋಜನೆಯಡಿ ಸಾಲ ಸೇರಿದಂತೆ ಸಾಕಷ್ಟುಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಯಡಿಯೂರಪ್ಪ ಅವರು ಸಂವಾದದ ಪ್ರಶ್ನೋತ್ತರ ಹೀಗಿದೆ:

* ರಾಜ್ಯದ 28 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿರುವ ಬಿಜೆಪಿಗೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಿಂದ ಹಿನ್ನಡೆಯಾಗುವುದಿಲ್ಲವೇ?

- ಅದೇ ನಮಗೆ ಲಾಭ. ಜೆಡಿಎಸ್‌-ಕಾಂಗ್ರೆಸ್‌ ಹೊಂದಾಣಿಕೆಯು ಬಿಜೆಪಿಗೆ ಲಾಭ ತಂದುಕೊಡಲಿದೆ. ಮಿತ್ರ ಪಕ್ಷದಲ್ಲಿ ಕಚ್ಚಾಟ, ಗೊಂದಲಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದರ ಲಾಭ ಬಿಜೆಪಿಗೆ ಹೋಗಲಿದೆ ಎಂಬ ನಿರೀಕ್ಷೆ ಇದೆ.

* ದಿವಂಗತ ಇಂದಿರಾಗಾಂಧಿ ಆಡಳಿತವನ್ನು ಸರ್ವಾಧಿಕಾರಿ ಧೋರಣೆ ಎಂದು ಪ್ರತಿಪಕ್ಷಗಳು ಪ್ರತಿಪಾದನೆ ಮಾಡುತ್ತಿದ್ದವು. ಈಗ ದೇಶದಲ್ಲಿ ಅದೇ ಪರಿಸ್ಥಿತಿ ಇದ್ದು, ಮೋದಿ ವಿರುದ್ಧ ಮಾತನಾಡಿದರೆ ದೇಶದ್ರೋಹ ಎಂಬ ಹಣೆಪಟ್ಟಿಕಟ್ಟಲಾಗುತ್ತಿದೆ. ಇದು ನಿಮ್ಮ ಸರ್ವಾಧಿಕಾರಿ ಧೋರಣೆಯಲ್ಲವೇ?

- ಕಾಂಗ್ರೆಸ್‌ ಮುಕ್ತ ಭಾರತ ಎಂಬ ಪದ ಬಳಕೆ ಮಾಡಿದ್ದು ನಾವಲ್ಲ. ಸ್ವಾತಂತ್ರ್ಯಾನಂತರದ ದಿನಗಳಲ್ಲಿಯೇ ಹೇಳಲಾಗಿತ್ತು. 60 ವರ್ಷಗಳಿಗಿಂತಲೂ ಹೆಚ್ಚು ಆಡಳಿತ ನಡೆಸಿರುವ ಕಾಂಗ್ರೆಸ್‌ಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ದುಸ್ಥಿತಿ ಏಕೆ ಬಂತು ಎಂಬುದರ ಬಗ್ಗೆ ಅವರೇ ಚಿಂತನೆ ನಡೆಸಬೇಕು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಯಾರೂ ಪ್ರಶ್ನೆ ಎತ್ತಬಾರದು ಎಂದು ಹೇಳಿಲ್ಲ. ಅದಕ್ಕೆ ತಕ್ಕ ಉತ್ತರ ನೀಡಲು ಬಿಜೆಪಿ ಸನ್ನದ್ಧವಾಗಿದೆ. ಪ್ರಜಾತಂತ್ರ ವ್ಯವಸ್ಥೆಯ ಪರವಾಗಿಯೇ ಮೋದಿ ನಿಂತಿದ್ದಾರೆ.

* ಬಿಜೆಪಿಯ ಹಿರಿಯ ಮುಖಂಡರಾದ ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ್‌ ಜೋಶಿ ಸೇರಿದಂತೆ ಹಲವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಏಕೆ?

- ಪಕ್ಷದಲ್ಲಿ ಯಾರನ್ನೂ ಮೂಲೆಗುಂಪು ಮಾಡಿಲ್ಲ. ಹಿರಿಯರಾಗಿ ನಮಗೆ ಮಾರ್ಗದರ್ಶನ ಮಾಡಲಿದ್ದಾರೆ. ಅವರ ಸಲಹೆ, ಮಾರ್ಗದರ್ಶನದಂತೆ ಪಕ್ಷವನ್ನು ಮುನ್ನಡೆಸಲಾಗುತ್ತಿದೆ.

* ಪಕ್ಷದ 75 ವರ್ಷದ ವಯೋಮಿತಿಗೆ ನಿಯಮಕ್ಕೆ ನೀವೂ ಬದ್ಧವಾಗಿದ್ದೀರಾ?

- ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಕಾರ್ಯಕರ್ತ ನಾನು. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ. ಕಳೆದ 40 ವರ್ಷದಿಂದ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಕೇವಲ ಇಬ್ಬರು ಶಾಸಕರಿದ್ದ ಪಕ್ಷವನ್ನು ಐದು ವರ್ಷ ಆಡಳಿತ ನಡೆಸುವಷ್ಟರ ಮಟ್ಟಿಗೆ ಬೆಳೆಸಿಕೊಂಡು ಬರಲಾಗಿದೆ. ಇದು ನಿರಂತರ ಹೋರಾಟದ ಪ್ರತಿಫಲ.

* ಲೋಕಸಭೆ ಫಲಿತಾಂಶದ ನಂತರ ರಾಜಕೀಯ ಬದಲಾವಣೆಯಾಗಲಿದೆಯೇ? ನೀವು ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಇರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

- ರಾಜ್ಯ ಸರ್ಕಾರವು ಪತನವಾಗಲಿದೆ. ಕಾಂಗ್ರೆಸ್‌-ಜೆಡಿಎಸ್‌ ಪಕ್ಷದಲ್ಲಿ ಹೊಂದಾಣಿಕೆ ಇಲ್ಲ. ಭಿನ್ನಾಭಿಪ್ರಾಯ, ಗೊಂದಲ ಹೆಚ್ಚಾಗಿದೆ. ಲೋಕಸಭೆ ಚುನಾವಣೆ ಬಳಿಕ ಭಿನ್ನಾಭಿಪ್ರಾಯ ಮತ್ತಷ್ಟುಮುಗಿಲು ಮುಟ್ಟಲಿದೆ. ನಾನು ರಾಜ್ಯಾಧ್ಯಕ್ಷನಾಗಿ ಇರುವುದಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳಿಕೆ ನೀಡುವುದರಲ್ಲಿ ತಪ್ಪಿಲ್ಲ. ವಿರೋಧ ಪಕ್ಷದ ನಾಯಕನಾಗಿರುತ್ತೇನೆ. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತೇನೆ.

* ರಾಜ್ಯದ ಇಬ್ಬರು ನಾಯಕರಾದ ದೇವೇಗೌಡ ಮತ್ತು ಮಲ್ಲಿಕಾರ್ಜುನ ಖರ್ಗೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಕೆಲಸ ಮಾಡುತ್ತಿರುವುದು ಹೈಕಮಾಂಡ್‌ ತೀರ್ಮಾನವೇ ಅಥವಾ ರಾಜ್ಯ ನಾಯಕರ ತೀರ್ಮಾನವೇ?

- ಯಾರನ್ನೊ ಗುರಿಯಾಗಿಸಿಕೊಂಡು ಕೆಲಸ ಮಾಡುವುದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಸೋಲು ಖಚಿತ. ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಕಲಬುರಗಿ, ತುಮಕೂರು ಮತ್ತು ಕೋಲಾರದಲ್ಲಿಯೂ ಮೈತ್ರಿ ಅಭ್ಯರ್ಥಿಗೆ ಹಿನ್ನಡೆಯಾಗಲಿದೆ.

* ಹೆಲಿಕಾಪ್ಟರ್‌ ಬಳಕೆಗೆ ಅನುಮತಿ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ? - ಹೆಲಿಕಾಪ್ಟರ್‌ ಬಳಕೆಗೂ, ಕೇಂದ್ರಕ್ಕೂ ಏನು ಸಂಬಂಧ. ಅವರಿಗೆ ಹೆಲಿಕಾಪ್ಟರ್‌ ಸಿಗದಿದ್ದರೆ ಮೋದಿ ಜವಾಬ್ದಾರರೇ? ಹೆಲಿಕಾಪ್ಟರ್‌ಗಾಗಿ ಮೊದಲೇ ಬುಕ್‌ ಮಾಡಬೇಕು.

* ಅಲ್ಪಸಂಖ್ಯಾತರ ವಿಚಾರದಲ್ಲಿ ಪಕ್ಷದ ಮುಖಂಡ ಕೆ.ಎಸ್‌.ಈಶ್ವರಪ್ಪ ಹೇಳಿಕೆಗೆ ಶಿಸ್ತುಕ್ರಮ ಕೈಗೊಳ್ಳಲಾಗುವುದೇ?

- ಎಲ್ಲದಕ್ಕೂ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈಶ್ವರಪ್ಪ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದವರಿಗೆ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬರುವ ಸ್ಥಿತಿಯಲ್ಲಿಲ್ಲ. ಮುಂದಿನ ದಿನದಲ್ಲಿ ಸಮುದಾಯಕ್ಕೆ ಒಳ್ಳೆಯ ಸ್ಥಾನ-ಮಾನ ನೀಡಲಾಗುವುದು.

* ಯಡಿಯೂರಪ್ಪ ಬಳಿಕ ಪಕ್ಷಕ್ಕೆ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಪದೇ ಪದೇ ಮೂಡುತ್ತದೆ?

- ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ. ಪಕ್ಷದಲ್ಲಿ ಹಲವು ನಾಯಕರಿದ್ದಾರೆ. ನನ್ನ ನಂತರ ಯಾರು ಬೇಕಾದರೂ ಆಗಬಹುದು. ಕೇಂದ್ರದಲ್ಲಿಯೂ ವಾಜಪೇಯಿ ನಂತರ ಯಾರು ಎಂಬ ಪ್ರಶ್ನೆ ಬಂದಾಗ ಮೋದಿ ಅವರು ಬಂದು ಮುನ್ನಡೆಸಿದರು. ನನ್ನ ಉತ್ತರಾಧಿಕಾರಿ ಯಾರು ಎಂಬುದನ್ನು ಕಾಲವೇ ತೀರ್ಮಾನಿಸಲಿದೆ. ಯಾರಾದರೂ ಮುಂದೆ ಬಂದು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ.

* ನಿಮ್ಮದೇ ಪಕ್ಷದ ತೇಜಸ್ವಿನಿ ಅನಂತಕುಮಾರ್‌ಗೆ ಬೆಂಬಲ ನೀಡದೆ ಸುಮಲತಾಗೆ ಬೆಂಬಲ ನೀಡುತ್ತಿರುವುದು ಏಕೆ?

- ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರು ಬೆಂಬಲ ಕೇಳಿದ್ದರು. ಹೀಗಾಗಿ ನೀಡಿದ್ದೇವೆ. ತೇಜಸ್ವಿನಿ ಅನಂತಕುಮಾರ್‌ ಅವರ ಒಂದೇ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿದ್ದೆವು. ಆದರೆ, ದೆಹಲಿಯಲ್ಲಿ ತೇಜಸ್ವಿ ಸೂರ್ಯ ಹೆಸರು ಅಂತಿಮಗೊಳಿಸಲಾಗಿದೆ. ಅವರು ಎರಡು ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಸುಮಲತಾ ಸ್ಪರ್ಧೆ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಗುರವಾಗಿ ಮಾತನಾಡುತ್ತಿದ್ದಾರೆ. ಅಂಬರೀಶ್‌ ನಿಧನದ ಬಳಿಕ ಅವರ ಕೊಡುಗೆ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಇದರಿಂದ ಮಂಡ್ಯದ ಜನರು ಆಕ್ರೋಶಗೊಂಡಿದ್ದಾರೆ. ಸುಮಲತಾಗೆ ಬೆಂಬಲ ನೀಡುವ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ.

* ಮುಖ್ಯಮಂತ್ರಿ ಪುತ್ರನ ಸೋಲಿಗಾಗಿ ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಅವರಿಗೆ ಬೆಂಬಲ ನೀಡಲಾಗಿದೆಯೇ?

- ಮಂಡ್ಯದಲ್ಲಿ ಸುಮಲತಾ ಗೆಲ್ಲುವ ವಾತಾವರಣ ಇದೆ. ಇದೇ ಕಾರಣಕ್ಕಾಗಿ ಬೇಷರತ್‌ ಬೆಂಬಲ ನೀಡಲಾಗಿದೆ. ಅಂಬರೀಶ್‌ಗೆ ಮುಖ್ಯಮಂತ್ರಿ ಸೇರಿದಂತೆ ಜೆಡಿಎಸ್‌ನವರು ಅಪಮಾನ ಮಾಡುತ್ತಿದ್ದಾರೆ. ಅದು ಅವರಿಗೇ ತಿರುಗುಬಾಣವಾಗಲಿದೆ.