ಬೆಂಗಳೂರು : ರಾಜ್ಯದ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಿರುವ ಬಿಜೆಪಿಯು ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಹಂತದ ಕಸರತ್ತು ನಡೆಸಿದೆ. ಚಿತ್ರದುರ್ಗ, ಬಳ್ಳಾರಿ, ಕೋಲಾರ ಮತ್ತು ರಾಯಚೂರು ಕ್ಷೇತ್ರಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದು ಆಯ್ಕೆ ಕಠಿಣವಾಗಿದೆ. ಈ ಪೈಕಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಾದ ಚಿತ್ರದುರ್ಗ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪರಸ್ಪರ ಬೆಸೆದುಕೊಂಡಿದ್ದು, ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಆಗದೇ ಉಳಿಯುವವರ ಪೈಕಿ ಒಬ್ಬರನ್ನು ಕೋಲಾರದಿಂದ ಕಣಕ್ಕಿಳಿಸಲು ಚಿಂತನೆ ನಡೆದಿದೆ.

ಅಂದರೆ, ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಮಾನಪ್ಪ ವಜ್ಜಲ್ ಹಾಗೂ ನಿವೃತ್ತ ಐಎಎಸ್  ಅಧಿಕಾರಿ ಲಕ್ಷ್ಮೀನಾರಾಯಣ ಅವರ ಹೆಸರು ಚಿತ್ರದುರ್ಗ ಕ್ಷೇತ್ರ ದಿಂದ ಕೇಳಿಬರುತ್ತಿವೆ. ಈ ಪೈಕಿ  ಮಾನಪ್ಪ ವಜ್ಜಲ್ ಪರ ಯಡಿಯೂರಪ್ಪ ಒಲವು ತೋರಿ ದ್ದರೆ, ಪಕ್ಷದ ಇತರ ಹಿರಿಯ ನಾಯಕರು ನಾರಾಯಣಸ್ವಾಮಿ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂವರಲ್ಲಿ ಒಬ್ಬರು ಕಣಕ್ಕಳಿಯಲಿದ್ದು ಉಳಿದ ಇಬ್ಬರಲ್ಲಿ ಒಬ್ಬರು ಕೋಲಾರದ ಅಭ್ಯರ್ಥಿ ಯನ್ನಾಗಿಸುವ ಯತ್ನ ನಡೆದಿದೆ. 

ಇನ್ನು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಶಾಸಕ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲುಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ತಮ್ಮ ಸಹೋದರಿ ಶಾಂತಾ ಅವರಿಗೆ ಟಿಕೆಟ್ ನೀಡಬೇಕೊ ಅಥವಾ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್‌ರನ್ನು ಅಭ್ಯರ್ಥಿಯನ್ನಾಗಿಸಬೇಕೊ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ. ಈ ನಡುವೆ ಕಾಂಗ್ರೆಸ್ಸಿನ ಶಾಸಕ ರಮೇಶ್ ಜಾರಕಿಹೊಳಿ ಸಂಬಂಧಿ ದೇವೇಂದ್ರಪ್ಪ ಅವರ ಹೆಸರೂ ಪ್ರಸ್ತಾಪವಾಗಿದೆ. 

ರಾಯಚೂರು ಕ್ಷೇತ್ರದಿಂದ ಮಾಜಿ ಶಾಸಕ ತಿಪ್ಪರಾಜು ಅವರ ಬಗ್ಗೆ ರಾಜ್ಯ ನಾಯಕರು ಒಲವು ವ್ಯಕ್ತಪಡಿಸಿದ್ದರೂ ಶಾಸಕ ಶಿವನಗೌಡ ನಾಯಕ ಅವರ ವಿರೋಧದ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.