ಬೆಂಗಳೂರು : ದೇಶದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಸದ್ಯ ಚುನಾವಣಾ ಕಾವು ತಣ್ಣಗಾಗಿದೆ. ಇದೇ ವೇಳೆ ಅಭ್ಯರ್ಥಿಗಳು ಫಲಿತಾಂಶಕ್ಕೆ ಕಾತರರಾಗಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. 

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ಅವರು ಮೈತ್ರಿ  ಅಭ್ಯರ್ಥಿಯನ್ನು ಪರಾಭವಗೊಳಿಸಿ ಗೆಲ್ಲುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. 

ಬೆಂಗಳೂರಿನ ತಮ್ಮ ನಿವಾಸಲ್ಲಿ ಮಾತನಾಡಿದ ಅವರು ಸುಮಲತಾ ಜೊತೆಗೆ ಯಾರೆಲ್ಲಾ ಕೆಲಸ ಮಾಡಿದ್ದಾರೆ ಎನ್ನುವುದು ಜಗತ್ತಿಗೆ ತಿಳಿದ ವಿಚಾರ.  ಅವರ ಜೊತೆ ಕೆಲಸ ಮಾಡಿದವರೇ ಡಿನ್ನರ್ ಗೆ ಸೇರಿದ್ದರು ಎಂದರು.

ಇನ್ನು ಲೋಕಸಭಾ ಚುನಾವಣಾ ಫಲಿತಾಂಶ ಮೇ 23 ರಂದು ಪ್ರಕಟವಾಗಲಿದ್ದು, ಇದಾದ ನಂತರದ ಬೆಳವಣಿಗೆಗಳ ಬಗ್ಗೆ ಎಲ್ಲರೂ ಗಮನಿಸುತ್ತಿದ್ದು, ಯಾವ ರೀತಿ ಬೆಳವಣುಗೆಗಳಾಗಲಿದೆ ಎನ್ನುವುದನ್ನು ಕಾದು ನೋಡೋಣ ಎಂದರು. 

ಇನ್ನು ಮೈಸೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ಜಿ.ಟಿ.ದೇವೇಗೌಡ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿ ಬಿ.ಎಸ್ ಯಡಿಯೂರಪ್ಪ, ಅವರ ಹೇಳಿಕೆ ನೂರರಷ್ಟು ಸತ್ಯ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದರು.