Asianet Suvarna News Asianet Suvarna News

ನನ್ನ ಹೇಳಿಕೆ ಅರ್ಥ ಆಗದವರಿಂದ ವಿವಾದ ಸೃಷ್ಟಿ

ಆರನೇ ಬಾರಿ ಗೆಲ್ಲುವ ಗುರಿಯೊಂದಿಗೆ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅನಂತಕುಮಾರ ಹೆಗಡೆ ಅವರು  ವಿಶೇಷ ಸಂದರ್ಶನ ನೀಡಿ ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಜೊತೆಗೆ ಮುಂದೇನು ಮಾಡುತ್ತೇನೆ ಎಂಬುದನ್ನೂ ವಿವರಿಸಿದ್ದಾರೆ.

Lok Sabha Elections 2019 Ananth kumar Hegde Interview
Author
Bengaluru, First Published Apr 11, 2019, 4:08 PM IST
  • Facebook
  • Twitter
  • Whatsapp

ಕಾರವಾರ : ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯ ಬಿಜೆಪಿಯಲ್ಲಿ ಹೆಚ್ಚು ಸದ್ದು ಮಾಡಿದ್ದು ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ. ಸಂವಿಧಾನ ಕುರಿತು, ಮೀಸಲಾತಿ ಕುರಿತು ಹೀಗೆ ಹಲವು ವಿಚಾರಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಗಳನ್ನು ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದ ಹೆಗಡೆ ಈಗ ತುಸು ಬದಲಾಗಿದ್ದಾರೆ. ತಾವು ಅಭ್ಯರ್ಥಿಯಾಗಿ ಕಣಕ್ಕಿದಿಳಿದಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕಳೆದ ಬಾರಿ ಅವರ ವಿವಾದಾತ್ಮಕ ಹೇಳಿಕೆಗಳಿಂದಾಗಿ ಪಕ್ಷಕ್ಕೆ ನಷ್ಟಉಂಟಾಗಿದೆ ಎಂಬ ಆರೋಪವನ್ನು ಖುದ್ದು ಅವರ ಪಕ್ಷದ ನಾಯಕರೇ ಮಾಡಿದ್ದರು. ಹೀಗಾಗಿಯೇ ಅವರನ್ನು ಈ ಬಾರಿ ಪಕ್ಷದ ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಡುವ ಮೂಲಕ ಕ್ಷೇತ್ರ ಬಿಟ್ಟು ಬೇರೆಡೆ ಪ್ರಚಾರಕ್ಕೆ ತೆರಳದಂತೆ ನಿರ್ಬಂಧಿಸಿದೆ ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ. ಆರನೇ ಬಾರಿ ಗೆಲ್ಲುವ ಗುರಿಯೊಂದಿಗೆ ಬಿರುಸಿನ ಚುನಾವಣಾ ಪ್ರಚಾರ ಅನಂತಕುಮಾರ ಹೆಗಡೆ ಅವರು ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಜೊತೆಗೆ ಮುಂದೇನು ಮಾಡುತ್ತೇನೆ ಎಂಬುದನ್ನೂ ವಿವರಿಸಿದ್ದಾರೆ.

- ನೀವು ನೀಡುವ ಹಲವು ಹೇಳಿಕೆಗಳೇ ವಿವಾದಗಳಾಗಿ ನಿಮ್ಮನ್ನು ಸುತ್ತಿಕೊಳ್ಳುತ್ತಿವೆಯಲ್ಲ?

ನಾನು ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಹಾಗೂ ಅರಗಿಸಿಕೊಳ್ಳಲಾರದವರಿಗೆ ಮಾತ್ರ ಅದು ವಿವಾದವಾಗಿ ಕಾಣಿಸುತ್ತದೆ. ನನ್ನ ಹೇಳಿಕೆಗಳಲ್ಲಿ ಅಂತಹ ಯಾವುದೇ ವಿವಾದವೂ ಇರುವುದಿಲ್ಲ. ಇರುವುದನ್ನು ಹೇಳಿರುತ್ತೇನೆ ಅಷ್ಟೆ.

- ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್‌ ನಿಮ್ಮ ಬಾಯಿಗೆ ಬೀಗ ಹಾಕಿದೆಯಂತೆ?

ಇಲ್ಲವೇ ಇಲ್ಲ. ಅದು ಕೆಲವರ ಭ್ರಮೆ ಅಷ್ಟೆ.

- ಪಕ್ಷದ ಹೈಕಮಾಂಡ್‌ ನಿಮ್ಮ ಮೇಲಿಟ್ಟನಿರೀಕ್ಷೆ ಹುಸಿಯಾಗಿದೆ ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ?

ನಿಮ್ಮ ಭಾವನೆಗೆ ಬಿಟ್ಟಿದ್ದು. ಅವರಿಗೆ ಖುಷಿ ಇದೆ. ಅವರು ಕೊಟ್ಟಎಲ್ಲ ಕೆಲಸಗಳನ್ನೂ ಸಮರ್ಥವಾಗಿ ನಿಭಾಯಿಸಿದ್ದರಿಂದಲೇ ಹೊಸ ಹೊಸ ಅವಕಾಶಗಳನ್ನು ಕೊಡುತ್ತಿದ್ದಾರೆ.

- ಬಿಜೆಪಿಯ ಈ ಬಾರಿ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಕೇಂದ್ರ ಸಚಿವರಾಗಿರುವ ನಿಮ್ಮ ಹೆಸರಿಲ್ಲ. ಉದ್ದೇಶಪೂರ್ವಕವಾಗಿಯೇ ದೂರ ಇಡಲಾಗಿದೆಯಂತೆ ಹೌದೆ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಪಕ್ಷದ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದ್ದೆ. ಇದು ಲೋಕಸಭೆ ಚುನಾವಣೆ. ಇಲ್ಲಿ ನಾನೇ ಅಭ್ಯರ್ಥಿ. ಹೀಗಾಗಿ ಬೇರೆಡೆ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ನಾನು ಪಟ್ಟಿಯಲ್ಲಿ ಇಲ್ಲ ಅಷ್ಟೆ.

- ಈ ಬಾರಿಯ ಪ್ರಚಾರದಲ್ಲಿ ನೀವು ರಾಷ್ಟ್ರೀಯ ವಾದವನ್ನು ಹೆಚ್ಚು ಪ್ರತಿಪಾದಿಸುತ್ತಿದ್ದೀರಿ?

ದಿನದಿಂದ ದಿನಕ್ಕೆ ಜಾತಿವಾದ, ಪ್ರಾದೇಶಿಕವಾದ ಕ್ಷೀಣಿಸುತ್ತಿದೆ. ರಾಷ್ಟ್ರೀಯವಾದ ಬಲಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಘಾತಕರನ್ನು, ಒಡೆದು ಆಳುವವರನ್ನು ದೇಶ ಗಂಭೀರವಾಗಿ ಪರಿಗಣಿಸಲಿದೆ. ಸರ್ಕಾರ ಕೂಡ ತೀಕ್ಷ$್ಣವಾಗಿ ಪ್ರತಿಕ್ರಿಯಿಸಲಿದೆ.

- ನೀವು ಐದು ಬಾರಿ ಸಂಸದರಾಗಿ ಆಯ್ಕೆಯಾದರೂ ಮೋದಿ ಹೆಸರಿನಲ್ಲೇ ವೋಟು ಕೇಳಬೇಕಾದ ಅನಿವಾರ್ಯತೆ ಯಾಕೆ ನಿಮಗೆ ಬಂತು?

ನನ್ನನ್ನು ಐದು ಬಾರಿ ಗೆಲ್ಲಿಸಿದ ಜನ ಮೂರ್ಖರಲ್ಲ. ಸಾಕಷ್ಟುಯೋಚನೆ ಮಾಡಿಯೇ ಮತ ಹಾಕಿದ್ದಾರೆ. ಇಲ್ಲಿನವರು ಪ್ರಜ್ಞಾವಂತ ಜನ. ಜಾತಿ ಹಾಗೂ ದುಡ್ಡಿಗಾಗಿ ಇಲ್ಲಿನ ಜನ ವೋಟು ಹಾಕುವುದಿಲ್ಲ. ಘಟಾನುಘಟಿಗಳು ಇಲ್ಲಿ ಮಣ್ಣಾಗಿ ಹೋಗಿದ್ದಾರೆ. ಮೋದಿ ಹೆಸರಿನಲ್ಲಿ ಕೇಳದೆ ಮತ್ತೆ ಯಾರ ಹೆಸರಿನಲ್ಲಿ ಕೇಳಬೇಕು ಹೇಳಿ. ಇವತ್ತಿನ ನನ್ನ ಎದುರಾಳಿ (ಆನಂದ್‌ ಅಸ್ನೋಟಿಕರ್‌) ಅವರ ಅಪ್ಪನ ಹೆಸರಿನಲ್ಲಿ ವೋಟು ಕೇಳುತ್ತಿದ್ದಾರೆ. ಈ ರೀತಿ ಅಪ್ಪನ ಹೆಸರಿನಲ್ಲಿ ವೋಟು ಕೇಳುವ ದಾರಿದ್ರ್ಯ ಬಿಜೆಪಿಯವರಿಗೆ ಬಂದಿಲ್ಲ. ಬಿಜೆಪಿ ಐಡಿಯಾಲಾಜಿ ಇರುವ ಪಾರ್ಟಿ. ನಮ್ಮ ಲೀಡರ್‌ ಮೋದಿ ಹೆಸರಿನಲ್ಲಿ ವೋಟ್‌ ಕೇಳದೆ ಮತ್ತೆ ಯಾರ ಹೆಸರಿನಲ್ಲಿ ಕೇಳಲಿ?

- ರಾಜ್ಯದ ರಾಜಕಾರಣದಲ್ಲಿ ಆಸಕ್ತಿ ಇದೆಯಾ?

ಆ ಬಗ್ಗೆ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ನನಗೆ ಅಂಥ ಯಾವುದೇ ಆಸಕ್ತಿ ಇಲ್ಲ.

- ಜೆಡಿಎಸ್‌-ಕಾಂಗ್ರೆಸ್‌ ಹೊಂದಾಣಿಕೆ ಭವಿಷ್ಯದಲ್ಲಿ ಏನಾಗಲಿದೆ?

ಈ ಎರಡು ಧೂಮಕೇತುಗಳ ಸಮಾಗಮದಿಂದ ಆಕಾಶ ಅತ್ಯಂತ ಶುಭ್ರವಾಗುತ್ತದೆ. ರಾಜಕೀಯ ರಂಗ ಸ್ವಚ್ಛವಾಗುತ್ತದೆ. ಈ ಎರಡೂ ಪಕ್ಷಗಳವರು ಪರಸ್ಪರ ಹೊಡೆದಾಡಿಕೊಂಡು ಸಾಯುತ್ತಾರೆ.

- ನಿಮ್ಮ ಪ್ರಕಾರ ಯಾವ ಆಧಾರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ನಡೆಯುತ್ತಿದೆ?

ರಾಷ್ಟ್ರೀಯತೆ ಹಾಗೂ ಅಭಿವೃದ್ಧಿ ಇವೆರಡೇ ಮುಖ್ಯ. ನಮ್ಮ ಪ್ರಣಾಳಿಕೆ ಕೂಡ ಇದನ್ನು ಸ್ಪಷ್ಟವಾಗಿ ಹೇಳಿದೆ.

- ಅರಣ್ಯ ಅತಿಕ್ರಮಣ ಸಮಸ್ಯೆ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ನೀವು ತುಟಿ ಬಿಚ್ಚಿಲ್ಲ ಎಂಬ ಆಪಾದನೆ ಕೇಳಿಬರುತ್ತಿದೆ?

ಹಾಗೆ ಹೇಳುವವರು ಯೂಟ್ಯೂಬ್‌ನಲ್ಲಿ ಅನಂತಕುಮಾರ್‌ ಹೆಗಡೆ ವಿಡಿಯೋ ತೆರೆದು ನೋಡಲಿ. ಇದು ರಾಜ್ಯ ಸರ್ಕಾರದ ಕೊರತೆಯನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸುವ ಪ್ರಯತ್ನ. ರಾಜ್ಯ ಸರ್ಕಾರ ಇಚ್ಛಾಶಕ್ತಿಯ ಕೊರತೆಯಿಂದ ಬಳಲುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ್ದು ಮೂರ್ಖತನದ ನಿಲುವು.

- ಕೇಂದ್ರದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರಕ್ಕಿಂತ ಈಗಿನ ನಿಮ್ಮ ಬಿಜೆಪಿ ಸರ್ಕಾರ ಹೇಗೆ ಭಿನ್ನವಾಗಿದೆ?

ಕಾಂಗ್ರೆಸ್ಸಿಗರು ಕಳೆದ 70 ವರ್ಷ ನಮ್ಮ ದೇಶದ ಜನರಿಗೆ ಭಿಕ್ಷೆ ಕೊಟ್ಟಿದ್ದಾರೆ. ಹರಕಲು ಗುದ್ದಲಿ ನೀಡಿದ್ದಾರೆ. ಮನೆಮುರುಕು ಸ್ವಭಾವದ ಪಾಠ ಹೇಳಿದ್ದಾರೆ. ದೇಶದ್ರೋಹದ ಚಟುವಟಿಕೆ ಬಗ್ಗೆ ಹೇಳಿದ್ದಾರೆ. ಜಾತೀಯತೆ, ಪ್ರಾದೇಶಿಕತೆ ಕಲಿಸಿದ್ದಾರೆ. ಆದರೆ, ಬಿಜೆಪಿ ಇದಕ್ಕಿಂತ ಭಿನ್ನವಾಗಿದೆ. ಮೊದಲ ಬಾರಿಗೆ ಸ್ವಾವಲಂಬನೆ, ಸ್ವಾಭಿಮಾನ, ದೇಶಭಕ್ತಿಯನ್ನು ಕಲಿಸುತ್ತಿರುವುದು ಬಿಜೆಪಿ. ಇದನ್ನು ದೇಶ ಕೂಡ ಕೇಳುತ್ತಿದೆ. ಜನ ಮೆಚ್ಚಿಕೊಂಡಿದ್ದಾರೆ.

- ನೀವು ಆರನೇ ಬಾರಿ ಸಂಸತ್ತಿಗೆ ಆಯ್ಕೆಯಾದರೆ ಮುಂದಿನ ಐದು ವರ್ಷಗಳ ನಿಮ್ಮ ಅಜೆಂಡಾ ಏನು?

ಸೋಶಿಯೋ ಎಕಾನಮಿಕಲ್‌ ಡೆವಲಪ್‌ಮೆಂಟ್‌ (ಸಮಾಜೋ ಆರ್ಥಿಕ ಅಭಿವೃದ್ಧಿ), ಸಾಂಸ್ಕೃತಿಕ ಅಭಿವೃದ್ಧಿ. ಒಟ್ಟಿನಲ್ಲಿ ಸರ್ವಾಂಗೀಣ ಅಭಿವೃದ್ಧಿ ಆಗಬೇಕು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ.

- ಈ ಚುನಾವಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಹಾಗೂ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಎಷ್ಟುಸ್ಥಾನಗಳನ್ನು ಗೆಲ್ಲಬಹುದು?

ರಾಷ್ಟ್ರ ಮಟ್ಟದಲ್ಲಿ ಒಟ್ಟು ಕ್ಷೇತ್ರಗಳ ಮೂರನೇ ಎರಡರಷ್ಟುಕ್ಷೇತ್ರಗಳು ನಮ್ಮ ಬಿಜೆಪಿ ನೇತೃತ್ವದ ಎನ್‌ಡಿಎ ತೆಕ್ಕೆಗೆ ಬರಲಿವೆ. ಇನ್ನು ಕರ್ನಾಟಕದಲ್ಲಿ 25 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತವಾಗಿದೆ.

- ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ಜೊತೆಗೆ ಕೇರಳದಲ್ಲೂ ಸ್ಪರ್ಧಿಸುತ್ತಿದ್ದಾರೆ?

ಅವರವರ ಸ್ವಭಾವಕ್ಕೆ ತಕ್ಕಂತೆ, ಅವರವರ ಕಾರ್ಯಪ್ರಣಾಳಿಕೆಗೆ ತಕ್ಕಂತೆ ರಾಹುಲ್‌ ಗಾಂಧಿ ಅವರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ವರದಿ : ವಸಂತಕುಮಾರ್‌ ಕತಗಾಲ

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios