Asianet Suvarna News Asianet Suvarna News

ಬಿಜೆಪಿ ಶಾಸಕರಿಗೆ ದಕ್ಷಿಣ ಟಾರ್ಗೆಟ್‌!

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಬೆಂಗಳುರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ತೇಜಸ್ವಿ ಸೂರ್ಯ ಗೆಲುವಿಗಾಗಿ ಅಮಿತ್ ಶಾ ಬಿಜೆಪಿಗರಿಗೆ ಟಾರ್ಗೆಟ್ ನೀಡಿದ್ದಾರೆ. 

Lok Sabha Elections 2019 Amit Shah Gives Target To BJP leaders
Author
Bengaluru, First Published Apr 6, 2019, 8:32 AM IST

ಬೆಂಗಳೂರು :  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪಕ್ಷದ ಯುವ ಮುಖಂಡ ತೇಜಸ್ವಿ ಸೂರ್ಯ ಅವರನ್ನು ಗೆಲ್ಲಿಸಿಕೊಂಡು ಬರಬೇಕಾದ ಅನಿವಾರ್ಯತೆ ಆ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಶಾಸಕರಿಗೆ ಎದುರಾಗಿದೆ.

ಈ ಬಗ್ಗೆ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ತಮ್ಮ ಪಕ್ಷದ ಐವರು ಶಾಸಕರಿಗೆ ಸ್ಪಷ್ಟಸಂದೇಶ ರವಾನಿಸಿದ್ದಾರೆ. ಇದರ ಪರಿಣಾಮ, ಶಾಸಕರೆಲ್ಲರೂ ತಮ್ಮ ಅಸಮಾಧಾನ ಹಾಗೂ ಬೇಸರವನ್ನು ಬದಿಗಿಟ್ಟು ಮನಸ್ಸಿಲ್ಲದಿದ್ದರೂ ತೇಜಸ್ವಿ ಸೂರ್ಯ ಅವರ ಗೆಲುವಿಗಾಗಿ ದುಡಿಯುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಗಳಿಸಿದ ಮತಗಳಿಗಿಂತ ಶೇ.20ರಷ್ಟುಹೆಚ್ಚುವರಿ ಮತಗಳನ್ನು ತೇಜಸ್ವಿ ಸೂರ್ಯ ಅವರಿಗೆ ತಮ್ಮ ತಮ್ಮ ವಿಧಾನಸಭಾ ಕ್ಷೇತ್ರದಿಂದ ತಂದು ಕೊಡಬೇಕು ಎಂದು ಅಮಿತ್‌ ಶಾ ಅವರು ಟಾರ್ಗೆಟ್‌ ನೀಡಿದ್ದಾರೆ. ಇದನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದಲೇ ಎರಡು ದಿನಗಳ ಹಿಂದೆ ಅಮಿತ್‌ ಶಾ ಅವರು ನಗರಕ್ಕೆ ಆಗಮಿಸಿ ತೇಜಸ್ವಿ ಪರವಾಗಿ ರೋಡ್‌ ಶೋ ನಡೆಸಿದ್ದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಪದ್ಮನಾಭನಗರದ ಆರ್‌.ಅಶೋಕ್‌, ಗೋವಿಂದರಾಜನಗರದ ವಿ.ಸೋಮಣ್ಣ, ಬಸವನಗುಡಿಯ ರವಿ ಸುಬ್ರಹ್ಮಣ್ಯ, ಬೊಮ್ಮನಹಳ್ಳಿಯ ಸತೀಶ್‌ ರೆಡ್ಡಿ ಹಾಗೂ ಚಿಕ್ಕಪೇಟೆಯ ಉದಯ್‌ ಗರುಡಾಚಾರ್‌ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬಿಜೆಪಿ ಶಾಸಕರು.

ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಬಗ್ಗೆ ಮನಸ್ಸಿಲ್ಲದಿದ್ದರೂ ಅದನ್ನು ತೋರಿಸಿಕೊಳ್ಳದೆ ಪಕ್ಷ ಮತ್ತು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಉದ್ದೇಶದಿಂದಲಾದರೂ ಕೆಲಸ ಮಾಡಲು ಈ ಶಾಸಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ತೇಜಸ್ವಿ ಸೂರ್ಯ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದು ಪಕ್ಷದ ರಾಜ್ಯ ಘಟಕ ಅಲ್ಲ ಎಂಬುದು ಈಗ ಜಗಜ್ಜಾಹೀರಾಗಿರುವ ಸಂಗತಿ. ಅವರು ಕೇಂದ್ರದ ಸಚಿವರಾಗಿದ್ದ ದಿ. ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅವರೊಬ್ಬರ ಹೆಸರನ್ನು ಮಾತ್ರ ಅಭ್ಯರ್ಥಿ ಸ್ಥಾನಕ್ಕೆ ಶಿಫಾರಸು ಮಾಡಿದ್ದರು. ಆದರೆ, ಪಕ್ಷದ ವರಿಷ್ಠರು ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್‌ ನಿರಾಕರಿಸಿ ಅಚ್ಚರಿ ಎಂಬಂತೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ಘೋಷಿಸಿದರು.

ಇದಕ್ಕೆ ಪಕ್ಷದ ರಾಜ್ಯ ನಾಯಕರು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮುಖಂಡರು ಪ್ರತಿರೋಧ ತೋರಬಹುದು ಅಥವಾ ಸಹಕಾರ ನೀಡದೇ ಇರಬಹುದು ಎಂಬುದು ವರಿಷ್ಠರಿಗೆ ಗೊತ್ತಿತ್ತು. ಹೀಗಾಗಿಯೇ ಸಂಘ ಪರಿವಾರದ ಮುಖಂಡರ ಸಲಹೆ ಮೇರೆಗೆ ಖುದ್ದು ಅಮಿತ್‌ ಶಾ ಅವರೇ ರೋಡ್‌ ಶೋ ಕಾರ್ಯಕ್ರಮವನ್ನು ನಿಗದಿಪಡಿಸಿದರು. ಇಲ್ಲಿಗೆ ಆಗಮಿಸಿ ಪಕ್ಷದ ಶಾಸಕರಿಗೆ ಖಡಕ್‌ ಸಂದೇಶ ರವಾನಿಸಿ ಟಾರ್ಗೆಟ್‌ ನೀಡಿ ವಾಪಸಾದರು. ಪರಿಣಾಮ, ಈಗ ಎಲ್ಲ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲ ಶಾಸಕರೂ ತಮ್ಮ ಅಸ್ತಿತ್ವದ ಪ್ರಶ್ನೆ ಎಂಬಂತೆ ಪ್ರಚಾರಕ್ಕಾಗಿ ಓಡಾಡುತ್ತಿರುವುದು ಕಂಡು ಬರುತ್ತಿದೆ.

Follow Us:
Download App:
  • android
  • ios