ಮಂಡ್ಯ :  ಲೋಕಸಭೆ ಚುನಾವಣೆ ಮತದಾನ ಮುಗಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ರಿಲ್ಯಾಕ್ಸ್‌ ಮೂಡ್‌ನಲ್ಲಿರುವಾಗಲೇ, ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪುತ್ರ ಅಭಿಷೇಕ್‌ ಅವರು ಮಂಡ್ಯದಲ್ಲಿ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಪ್ರತ್ಯಕ್ಷರಾದರು. ಈ ವೇಳೆ ಪೆಟ್ಟಿಗೆ ಅಂಗಡಿಯೊಂದರಲ್ಲಿ ಜನ ಸಾಮಾನ್ಯರೊಂದಿಗೆ ಕುಳಿತು ಚಹಾ ಕುಡಿದರು. ಈ ಮೂಲಕ ಮತದಾನವಾದ ಬಳಿಕ ಕ್ಷೇತ್ರದಿಂದ ನಾಪತ್ತೆಯಾಗಲಿದ್ದಾರೆ ಎಂಬ ವಿರೋಧಿಗಳ ಹೇಳಿಕೆಗೆ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭಿಷೇಕ್‌, ಮತದಾನವಾದ ಬಳಿಕ ನಾನು ಹಾಗೂ ಅಮ್ಮ ಸಿಂಗಾಪುರಕ್ಕೆ ಹೋಗುತ್ತೇವೆ ಎಂಬ ವದಂತಿಗಳನ್ನು ಹಬ್ಬಿಸಲಾಗಿತ್ತು. ಈಗ ಏನು ಹೇಳುತ್ತಿರಾ? ಇವತ್ತು ಏ.19. ಈಗ ನಾನು ಮಂಡ್ಯದಲ್ಲಿ ಟೀ ಕುಡಿಯುತ್ತಿದ್ದೇನೆ. ಯಾರಿಗಾದರೂ ಸಂದೇಹವಿದ್ದರೆ ಬಂದು ನೋಡಿಕೊಂಡು ಹೋಗಲಿ ಎಂದರು.

ಏ.19ರಂದು ನಾವು ಸಿಂಗಾಪುರಕ್ಕೆ ಹೋಗುತ್ತೇವೆ ಎಂದು ಚುನಾವಣೆಗೂ ಮುನ್ನ ಸಾಮಾಜಿಕ ತಾಣಗಳಲ್ಲಿ ವದಂತಿ ಹಬ್ಬಿಸಲಾಗಿತ್ತು. ನಾವಿನ್ನೂ ಮಂಡ್ಯದಲ್ಲಿಯೇ ಇದ್ದೇವೆ. ಇದು ಸಿಂಗಾಪುರವಾ? ಎಂದು ಅಭಿಷೇಕ್‌ ಪ್ರಶ್ನಿಸಿದರು.