ಮೈಸೂರು :  ಪಕ್ಷಾಂತರ, ಅಸಮಾಧಾನ, ಗೊಂದಲ-ಗದ್ದಲಗಳ ನಡುವೆಯೇ ಲೋಕಸಭಾ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಮುಕ್ತಾಯಗೊಂಡಿದ್ದು, ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ಮೊದಲ ಹಂತದ 14 ಕ್ಷೇತ್ರಗಳ ಪೈಕಿ ಮೈಸೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಮತ್ತು ಹಾಸನ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಅತಿ ಕಡಿಮೆ ನಾಮಪತ್ರಗಳು ಸಲ್ಲಿಕೆಯಾಗಿವೆ. ಮೈಸೂರಿನಲ್ಲಿ ಒಟ್ಟು 34 ಅಭ್ಯರ್ಥಿಗಳು 49 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಹಾಸನದಲ್ಲಿ 10 ಅಭ್ಯರ್ಥಿಗಳು ಮತ್ತು ಚಾಮರಾಜನಗರದಲ್ಲಿ 13 ಅಭ್ಯರ್ಥಿಗಳು ತಲಾ 18 ನಾಮಪತ್ರಗಳು ಸಲ್ಲಿಕೆ ಮಾಡಿದ್ದಾರೆ. 

ಇನ್ನುಳಿದಂತೆ ಉಡುಪಿ-ಚಿಕ್ಕಬಳ್ಳಾಪುರದಲ್ಲಿ 14 ಅಭ್ಯರ್ಥಿಗಳು 26 ನಾಮಪತ್ರ, ದಕ್ಷಿಣ ಕನ್ನಡದಲ್ಲಿ 15 ಅಭ್ಯರ್ಥಿಗಳು 24 ನಾಮಪತ್ರ, ಚಿತ್ರದುರ್ಗದಲ್ಲಿ 24 ಅಭ್ಯರ್ಥಿಗಳು 29 ನಾಮಪತ್ರಗಳು, ತುಮಕೂರಿನಲ್ಲಿ 23 ಅಭ್ಯರ್ಥಿಗಳು 35 ನಾಮಪತ್ರಗಳು, ಮಂಡ್ಯದಲ್ಲಿ 29 ಅಭ್ಯರ್ಥಿಗಳು 37 ನಾಮಪತ್ರ, ಬೆಂಗಳೂರು ಗ್ರಾಮಾಂತರದಲ್ಲಿ 22 ಅಭ್ಯರ್ಥಿಗಳು 26 ನಾಮಪತ್ರಗಳು, ಬೆಂಗಳೂರು ಉತ್ತರದಲ್ಲಿ 37 ಅಭ್ಯರ್ಥಿಗಳು 46 ನಾಮಪತ್ರಗಳು, ಬೆಂಗಳೂರು ಕೇಂದ್ರದಲ್ಲಿ 35 ಅಭ್ಯರ್ಥಿಗಳು 40 ನಾಮಪತ್ರಗಳು, ಬೆಂಗಳೂರು ದಕ್ಷಿಣದಲ್ಲಿ 36 ಅಭ್ಯರ್ಥಿಗಳು 41 ನಾಮಪತ್ರಗಳು, ಚಿಕ್ಕಬಳ್ಳಾಪುರದಲ್ಲಿ 25 ಅಭ್ಯರ್ಥಿಗಳು 32 ನಾಮಪತ್ರಗಳು ಮತ್ತು ಕೋಲಾರದಲ್ಲಿ 23 ಅಭ್ಯರ್ಥಿಗಳು 31 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಕಳೆದ 2014ರ ಲೋಕಸಭಾ ಚುನಾವಣೆ ವೇಳೆ ಇದೇ 14 ಕ್ಷೇತ್ರದಲ್ಲಿ 306 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 289 ಪುರುಷರು ಮತ್ತು 16 ಮಹಿಳೆಯರು ಮತ್ತು ಒಬ್ಬರು ಇತರರು ನಾಮಪತ್ರ ಸಲ್ಲಿಸಿದ್ದರು. 232 ಮಂದಿ ಕಣಕ್ಕಿಳಿದಿದ್ದು, 110 ಸ್ವತಂತ್ರ ಅಭ್ಯರ್ಥಿಗಳಿದ್ದರು. 147 ಸಾಮಾನ್ಯ ವರ್ಗದವರು, ಪರಿಶಿಷ್ಟಜಾತಿ 84 ಮತ್ತು ಪರಿಶಿಷ್ಟವರ್ಗ ಇಬ್ಬರು ಇದ್ದರು. ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರವೀಣ್‌ ಎಂಬುವವರು ಅತಿ ಕಿರಿಯರಾಗಿದ್ದು, ಹಾಸನದಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಅತಿ ಹಿರಿಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು.