ಫಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆಯೇ ಸಟ್ಟಾಬಜಾರ್‌ನ ಬಿಸಿ ಕೂಡ ಏರುತ್ತಿದೆ. 2014ರ ಚುನಾವಣೆಯಲ್ಲಿ ಒಂದು ಲಕ್ಷ ಕೋಟಿ ಬೆಟ್ಟಿಂಗ್‌ ಕಂಡಿದ್ದ ಸಟ್ಟಾಮಾರುಕಟ್ಟೆಯಲ್ಲಿ ಈ ಬಾರಿ ಹತ್ತಿರ ಹತ್ತಿರ ಒಂದೂವರೆ ಲಕ್ಷ ಕೋಟಿ ಹಣ ಈಗಾಗಲೇ ಬಾಜಿ ಆಗಿದೆಯಂತೆ. 

ದೇಶದಲ್ಲಿಯೇ ಸಟ್ಟಾಬಜಾರ್‌ ಕೇಂದ್ರ ಎನಿಸಿಕೊಂಡಿರುವ ರಾಜಸ್ಥಾನದ ಫಲೂಡಿಯಲ್ಲಿ ಬಿಜೆಪಿ 240 ಸೀಟು ಪಡೆದರೆ ಒಂದು ರುಪಾಯಿಗೆ 28 ಪೈಸೆ, 245 ಸೀಟು ಬಂದರೆ 50 ಪೈಸೆ, 250 ಬಂದರೆ ಒಂದು ರುಪಾಯಿಗೆ ಒಂದು ರುಪಾಯಿ ರೇಟು ನಡೆಯುತ್ತಿದೆ.

ಫೆಬ್ರವರಿಯಲ್ಲಿ ಬಜೆಟ್‌ ಮಂಡನೆ ಆಗುವ ಸಂದರ್ಭದಲ್ಲಿ ಸಟ್ಟಾಬಜಾರ್‌ನಲ್ಲಿ ಬಿಜೆಪಿ 180 ಸೀಟು ತೋರಿಸುತ್ತಿತ್ತು. ಇನ್ನು ವಿಪಕ್ಷ ಕಾಂಗ್ರೆಸ್‌ಗೆ ಸಟ್ಟಾಮಾರ್ಕೆಟ್‌ 75-77 ಸೀಟು ತೋರಿಸುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ಮಹಾಗಠಬಂಧನ್‌ಗೆ 30 ಸೀಟು ತೋರಿಸುತ್ತಿದೆ. ಮೇ 19ರ ಸಂಜೆ ಎಕ್ಸಿಟ್‌ ಪೋಲ್ಗಳು ಬರುವವರೆಗೂ ರಾಜಕೀಯ ಆಸಕ್ತರಲ್ಲಿ ಸಟ್ಟಾಬಜಾರ್‌ ಚರ್ಚೆ ಜೋರಾಗಿ ನಡೆಯುತ್ತಿರುತ್ತದೆ.

ಸರ್ವಂ ಮೋದಿಮಯಂ

ಉತ್ತರ ಪ್ರದೇಶ, ಹರ್ಯಾಣ, ದಿಲ್ಲಿಯ ಬಹುತೇಕ ಬಿಜೆಪಿ ಅಭ್ಯರ್ಥಿಗಳು ತಮ್ಮ ತಮ್ಮ ಪೋಸ್ಟರ್‌ಗಳು ಮತ್ತು ಪ್ರಚಾರ ಸಾಮಗ್ರಿಗಳಲ್ಲಿ ಮೋದಿ ಫೋಟೋ, ತಮ್ಮ ಫೋಟೋ, ಕಮಲದ ಗುರುತು ಮಾತ್ರ ಮುದ್ರಿಸುತ್ತಿದ್ದು, ಬಿಜೆಪಿ ಹೆಸರೇ ಅನೇಕ ಕಡೆಗಳಲ್ಲಿ ಕಾಣುತ್ತಿಲ್ಲ.

ದಿಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹಾಕಿರುವ ದೊಡ್ಡ ದೊಡ್ಡ ಫ್ಲೆಕ್ಸ್‌ಗಳಲ್ಲಿ ಬಿಜೆಪಿ ಎಂದು ಸಣ್ಣ ಅಕ್ಷರದಲ್ಲೂ ಬರೆಯಲಾಗಿಲ್ಲ. ಮೋದಿ ಓಕೆ, ಬಿಜೆಪಿ ಯಾಕೆ ಎಂದು ಭಾವಿ ಸಂಸದರಿಗೆ ಈಗಲೇ ಅನ್ನಿಸತೊಡಗಿರುವುದು ಪಕ್ಷವಾಗಿ ಬಿಜೆಪಿಗೆ ಒಳ್ಳೆಯ ಸಂಗತಿ ಏನಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ