25 ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ : ಉಮೇಶ್ ಜಾಧವ್
ಕೈ ತೊರೆದು ಬಿಜೆಪಿ ಸೇರಿದ ಉಮೇಶ್ ಜಾಧವ್ ಇದೀಗ ತಮ್ಮದೇ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಜೆಪಿಗೆ ಬರಲು ಶಾಸಕರು ಸಿದ್ಧವಾಗಿದ್ದಾರೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಕಲಬುರಗಿ : ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಲವು ಅಭ್ಯರ್ಥಿಗಳು ತಮ್ಮದೇ ಗೆಲುವಿನ ಭರವಸೆ ಹೊಂದಿದ್ದಾರೆ.
ಇತ್ತ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತಾವು ಗೆಲ್ಲುವುದರೊಂದಿಗೆ ಚಿಂಚೋಳಿ ಕ್ಷೇತ್ರದಿಂದ ಉಪ ಚುನಾವಣೆ ಸ್ಪರ್ಧೆ ಮಾಡಿದ ತಮ್ಮ ಪುತ್ರನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ ಎಂದಿದ್ದಾರೆ.
ಸದ್ಯ ಕೈ ಮುಖಂಡರ ವಿರುದ್ಧ ರೋಷನ್ ಬೇಗ್ ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಜಾಧವ್, ಬೇಗ್ ಸೇರಿದಂತೆ 20 ರಿಂದ 25ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರ್ಪಡೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಸುಭದ್ರ ಸರ್ಕಾರಕ್ಕಾಗಿ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರು.
ಕೈ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಇವಿಎಂ ದೋಷದ ಬಗ್ಗೆ ಮಾತನಾಡುತ್ತಿದ್ದು, ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಸೋಲಲಿದೆ ಎನ್ನುವ ಅರ್ಥದಲ್ಲಿ ಹೇಳುತ್ತಿದ್ದಾರೆ. ನಿರೀಕ್ಷಣಾ ಜಾಮಿನು ಪಡೆದಂತೆ ಖರ್ಗೆ ಫಲಿತಾಂಶಕ್ಕೂ ಮುನ್ನ ಇವಿಎಂ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ಇನ್ನು ಕಲಬುರಗಿಯಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ಕಾಂಗ್ರೆಸ್ ಸೋಲು ಖಚಿತ ಎನಿಸುತ್ತದೆ. ನಾನು ಖಂಡಿತಾ ಗೆದ್ದೇ ಗೆಲ್ಲುವೆ ಎಂದು ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.