ಹಾಸನ :  ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್‌ ರೇವಣ್ಣ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಮಾ.13ರಂದು ಬೆಳಗ್ಗೆ ಹೊಳೆನರಸೀಪುರ ತಾಲೂಕು ಮೂಡಲಹಿಪ್ಪೆಯ ಶ್ರೀಚನ್ನಕೇಶವ ದೇವಾಲಯಕ್ಕೆ ಪೂಜೆ ಸಲ್ಲಿಸಿದ ನಂತರ ಪ್ರಚಾರ ಆರಂಭಿಸಲಿದ್ದಾರೆ.

ಮಾ.13 ರಿಂದ 15 ರವರೆಗೆ ಹೊಳೆನರಸೀಪುರ ಕ್ಷೇತ್ರಾದ್ಯಂತ ಪ್ರಚಾರ ಮಾಡಿದ ನಂತರ ಹಂತ ಹಂತವಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರಜ್ವಲ್‌ ಪ್ರಚಾರಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಪ್ರಜ್ವಲ್‌ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರಿನಲ್ಲಿ ಬಾಡಿಗೆ ಮನೆ ಮಾಡಿದ್ದಾರೆ. ಪ್ರಜ್ವಲ್‌ ಅವರಿಗೆ ಇದು ಮೊದಲ ಚುನಾವಣೆಯಾಗಿದೆ. ಹಾಸನ ಜೆಡಿಎಸ್‌ನ ಭದ್ರಕೋಟೆಯಾಗಿರುವುದು ಮತ್ತು ದೊಡ್ಡಗೌಡರಾದ ದೇವೇಗೌಡರ ಕೃಪಾಕೃಟಾಕ್ಷದಿಂದಾಗಿ ಪ್ರಜ್ವಲ್‌ ಗೆಲುವಿನ ನಗೆ ಬೀರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ದೇವೇಗೌಡ ಸ್ಪರ್ಧೆ ನಿಗೂಢ: ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿರುವ ದೇವೇಗೌಡ ಮಾತ್ರ ತಮ್ಮ ಸ್ಪರ್ಧೆಯನ್ನು ನಿಗೂಢವಾಗಿಟ್ಟಿದ್ದಾರೆ. ದೇವೇಗೌಡರು ಮೈಸೂರು ಅಥವಾ ಬೆಂಗಳೂರು ಉತ್ತರದಿಂದ ಸ್ಪರ್ಧಿಸುವರೆಂಬ ಚರ್ಚೆ ನಡೆಯುತ್ತಿದ್ದರೂ ಇನ್ನೂ ಯಾವುದೂ ಖಚಿತವಾಗಿಲ್ಲ. ದೇವೇಗೌಡರ ಈ ನಡೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.