ಬೆಂಗಳೂರು :  ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ರಾಷ್ಟ್ರೀಯ ಪಕ್ಷಗಳು ಬಹುಮತ ಪಡೆಯದೆ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ. 

ತಮ್ಮ ಪದ್ಮನಾಭನಗರದ ನಿವಾಸ ಬಳಿ ಶನಿವಾರ ಜಮಾಯಿಸಿದ್ದ ಅಭಿಮಾನಿಗಳು ಮತ್ತು ಕಾರ್ಯ ಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ 87 ನೇ  ಹುಟ್ಟು ಹಬ್ಬ ಆಚರಿಸಿಕೊಂಡ ಬಳಿಕ ಸುದ್ದಿಗಾರರ ಜತೆ ಮಾತಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ 300 ಸ್ಥಾನ ಗೆಲ್ಲುತ್ತೇವೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಬಿಜೆಪಿಗೆ ಬಹುಮತ ಬರುವುದಿಲ್ಲ. ಕಾಂಗ್ರೆಸ್‌ಗೂ ಸಹ ಸ್ಪಷ್ಟ ಬಹುಮತ ಬರುವುದು ಕಷ್ಟವಾಗಿದೆ. 

ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯ ಎಂದು ಹೇಳಿದರು. ಲೋಕಸಭೆ ಚುನಾವಣಾ ಫಲಿತಾಂಶದ ಬಗ್ಗೆ ಮೇ 23 ರ  ಸಂಜೆಯ ವೇಳೆ ಸ್ಪಷ್ಟ ಚಿತ್ರಣ ಹೊರಬರುವುದು ಅನುಮಾನ. ಮಧ್ಯರಾತ್ರಿಯವರೆಗೆ ಕಾಯಬೇಕಾಗುತ್ತದೆ. ಬಿಜೆಪಿಗೆ ಕಳೆದ ಬಾರಿ ಬಹುಮತ ಲಭ್ಯವಾಗಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ನಡೆಸಿದರು. ಆದರೆ ಈ ಬಾರಿ ಹಾಗಾಗುವುದಿಲ್ಲ. ಬಿಜೆಪಿಯವರು ಪ್ರಾದೇಶಿಕ ಪಕ್ಷಗಳನ್ನಿಟ್ಟುಕೊಂಡು ಒದ್ದಾಡಬೇಕಾಗುತ್ತದೆ.

ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರವಹಿಸಲಿದ್ದು, ಅವುಗಳ ಬೆಂಬಲದೊಂದಿಗೆ ರಾಷ್ಟ್ರೀಯ ಪಕ್ಷದವರು ಪ್ರಧಾನಿಯಾಗಬಹುದು ಎಂದು ತಿಳಿಸಿದರು. ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡವಳಿಕೆಯನ್ನು ಜನರು ಗಮನಿಸಿದ್ದು, ತುಂಬಾ ಬೇಸತ್ತಿದ್ದಾರೆ. ರಾಷ್ಟ್ರದಲ್ಲಿ ನಡೆದ ಚುನಾವಣೆ, ಉಪ ಚುನಾವಣೆಯ ಫಲಿತಾಂಶಗಳ ಬಗ್ಗೆ ಮೋದಿ ಅವರಿಗೂ ಅರಿವಿದೆ. ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರದಲ್ಲಿ ಸೋಲು ಅನುಭವಿಸಿ, ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದೀಗ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆದಿದೆ. ಈ ಬಗ್ಗೆ ಮೋದಿ ಅವರಿಗೂ ಗೊತ್ತಿದೆ ಎಂದರು.

ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂದಿದ್ದೆ: ನಾನು ಯಾವಾಗಲೂ ದೈವದಲ್ಲಿ ನಂಬಿಕೆ ಇಟ್ಟಿದ್ದೇನೆ. ವಿಧಾನಸಭಾ ಚುನಾವಣೆ ವೇಳೆ ಊಹೆ ಮಾಡಿ ಹೇಳಿಕೆ ನೀಡಿದ್ದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಲಿದೆ ಎಂಬ ವಿಶ್ವಾಸವೂ ಇತ್ತು. ಇದೇ ಆಧಾರದ ಮೇಲೆ ಕಳೆದ ಹುಟ್ಟುಹಬ್ಬದ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಹೇಳಿಕೆ ನೀಡಿದ್ದೆ. ಅದು ಹಾಗೆಯೇ ಆಗಿದೆ ಎಂದು ತಾವು ನೀಡಿದ ಹೇಳಿಕೆಯನ್ನು ಸ್ಮರಿಸಿಕೊಂಡರು. ಸಮ್ಮಿಶ್ರ ಸರ್ಕಾರ ರಚನೆಯಾದ ನಂತರದ ದಿನದಿಂದಲೂ ಗೊಂದಲ ಇದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಯಾದಾಗಿನಿಂದ ಯಾರ‌್ಯಾರು, ಏನೇನು ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿದೆ. ಅದರ ಬಗ್ಗೆ ಚರ್ಚೆಗೆ ಹೋಗುವುದಿಲ್ಲ. ಅದೇನೇ ಇರಲಿ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. 

ಸರ್ಕಾರ ಪತನವಾಗಲಿದೆ ಎಂಬುದೆಲ್ಲಾ ಸುಳ್ಳು. ಸರ್ಕಾರ ಉಳಿಯಲಿದ್ದು, ಐದು ವರ್ಷ ಅಧಿಕಾರ ನಡೆಸಲಿದೆ. ಮಾಧ್ಯಮಗಳು ಮನಬಂದಂತೆ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಅವರ ಸಾತಂತ್ರ್ಯಕ್ಕೆ ನನ್ನ ಅಡ್ಡಿ ಇಲ್ಲ ಎಂದು ಹೇಳಿದರು.