ಬೆಂಗಳೂರು :  ಜೆಡಿಎಸ್‌ಗೆ ಸೀಟು ಹಂಚಿಕೆ ಅಂತಿಮಗೊಂಡ ಬೆನ್ನಲ್ಲೇ ಪಕ್ಷದ ವರಿಷ್ಠ ದೇವೇಗೌಡರು ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ. ತಮ್ಮ ಕ್ಷೇತ್ರದ ವಾರಸುದಾರಿಕೆಯನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿರುವ ಜೆಡಿಎಸ್ ವರಿಷ್ಠ ಎಚ್ .ಡಿ.ದೇವೇಗೌಡ ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದ್ದು, ಸೀಟು ಹಂಚಿಕೆಯಲ್ಲಿ ಪಕ್ಷಕ್ಕೆ ಲಭ್ಯವಾಗಿರುವ ಕಾಂಗ್ರೆಸ್‌ನ ಕ್ಷೇತ್ರವಾದ ತುಮಕೂರಿನಿಂದ ಕಣಕ್ಕಿಳಿದರೂ ಅಚ್ಚರಿ ಪಡಬೇಕಾಗಿಲ್ಲ ಎನ್ನಲಾಗಿದೆ.

ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ನ ಬೆಂಬಲದೊಂದಿಗೆ ಮೈಸೂರು ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಜೆಡಿಎಸ್ ಪ್ರಯತ್ನ ವಿಫಲವಾಗಿದೆ. ಕಾಂಗ್ರೆಸ್ ಗೆ ಮೈಸೂರು ಲಭ್ಯವಾಗಿರುವ ಹಿನ್ನೆಲೆಯಲ್ಲಿ ತುಮಕೂರು ಜೆಡಿಎಸ್‌ಗೆ ಲಭ್ಯವಾಗಿದೆ. ತುಮಕೂರು ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸುವ ಸಾಧ್ಯತೆಯೂ ಇದೆ.

ಬಿಜೆಪಿಯ ತೆಕ್ಕೆಯಲ್ಲಿರುವ ಬೆಂಗಳೂರು ಉತ್ತರ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಹ ಜೆಡಿಎಸ್ ರಣತಂತ್ರ ರೂಪಿಸಲು ಮುಂದಾಗಿದೆ. ಇದೇ ಉದ್ದೇಶದಿಂದ ಬೆಂಗಳೂರು ಉತ್ತರ ಕ್ಷೇತ್ರವನ್ನು ಪಡೆದುಕೊಂಡಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ರಾಜಕೀಯ ತಂತ್ರಗಾರಿಕೆ ರೂಪಿಸಬೇಕಾದರೆ ಬಿಜೆಪಿ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವು ಅನಿವಾರ್ಯ. 

ಹೀಗಾಗಿ  ಬೆಂಗಳೂರು ಉತ್ತರ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಲು ಎಚ್.ಡಿ.ದೇವೇಗೌಡ ಅವರೇ ಕಣಕ್ಕಿಳಿಯುವ ಲೆಕ್ಕಾಚಾರವೂ ಸಹ ಇದೆ. ಆದರೂ ದೇವೇಗೌಡರ ರಾಜಕೀಯ ಮನದಾಳದ ಇಂಗಿತವನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಕೊನೆ ಕ್ಷಣದವರೆಗೆ ಅವರ ನಡೆ ನಿಗೂಢವಾಗಿರುತ್ತದೆ.