ಬೆಂಗಳೂರು : ಅತ್ಯಂತ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿಯೂ ಬಿಜೆಪಿ ಮೇಲುಗೈ ಸಾಧಿಸಲಿದೆ. ಕಳೆದ ಬಾರಿ 17 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿಯೂ ಸುಮಾರು ಅಷ್ಟೇ ಸ್ಥಾನಗಳನ್ನು ಗೆಲ್ಲಲಿದೆ. ಇದೇ ವೇಳೆ, ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕಿಳಿದರೂ ಅವುಗಳು ಗೆಲ್ಲುವ ಸ್ಥಾನಗಳಲ್ಲಿ ಹೆಚ್ಚಿನ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಅಚ್ಚರಿಯೆಂದರೆ ಕಳೆದ ಬಾರಿ ಒಂದೂ ಸ್ಥಾನಗಳನ್ನು ಗೆಲ್ಲದಿದ್ದ ಪಕ್ಷೇತರರು, ಈ ಬಾರಿ ಒಂದು ಕ್ಷೇತ್ರದಲ್ಲಿ ವಿಜಯಿಯಾಗುವ ಸಾಧ್ಯತೆ ಇದೆ.

27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲಿದ್ದರೆ, ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡು 20 ಕ್ಷೇತ್ರಗಳಲ್ಲಿ ತನ್ನ ಉಮೇದುವಾರರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್‌ ದ್ವಿತೀಯ ಸ್ಥಾನಿಯಾಗುವ ನಿರೀಕ್ಷೆ ಇದೆ. 7 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್‌ 3ನೇ ಸ್ಥಾನದಲ್ಲಿರಲಿದೆ.

ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್‌ ಸುದ್ದಿವಾಹಿನಿ ಮಾಧ್ಯಮ ಸಂಸ್ಥೆಗಳಿಗಾಗಿ ಎಝಡ್‌ ರೀಸಚ್‌ರ್‍ ಸಂಸ್ಥೆಯು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ.

ಬಿಜೆಪಿಗೆ 14ರಿಂದ 18: ಸಮೀಕ್ಷೆಯ ಪ್ರಕಾರ ಮೋದಿ ಅಲೆಯ ಬೆಂಬಲದೊಂದಿಗೆ ಬಿಜೆಪಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14ರಿಂದ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. 2009ರಲ್ಲಿ 19 ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದ ಬಿಜೆಪಿ, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 2 ಕ್ಷೇತ್ರ ನಷ್ಟಮಾಡಿಕೊಂಡು 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯೂ ಅಷ್ಟೇ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಅಥವಾ ಒಂದೆರಡು ಸ್ಥಾನಗಳು ಹೆಚ್ಚು-ಕಡಿಮೆ ಆಗುವ ನಿರೀಕ್ಷೆ ಇದೆ.

ಕಳೆದೆರಡು ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿಗೆ ಈ ಬಾರಿ ಸೀಟು ಗಳಿಕೆಯಲ್ಲಿ ಅನಿರೀಕ್ಷಿತ ಲಾಭ ಆಗದಿದ್ದರೂ, ಶೇಕಡಾವಾರು ಮತಗಳಲ್ಲಿ ತುಸು ಹೆಚ್ಚಿನ ಗಳಿಕೆ ಮಾಡುವ ಸಾಧ್ಯತೆ ಇದೆ. 2009ರಲ್ಲಿ ಶೇ.42 ಮತಗಳನ್ನು ಗಳಿಸಿದ್ದ ಬಿಜೆಪಿ, ನಂತರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.1ರಷ್ಟುಹೆಚ್ಚು ಅಂದರೆ ಶೇ.43 ಮತಗಳನ್ನು ಗಳಿಸಿತ್ತು. ಈ ಬಾರಿ ಬಿಜೆಪಿಯ ಮತ ಗಳಿಕೆ ಪ್ರಮಾಣ ಇನ್ನೂ ಹೆಚ್ಚಲಿದ್ದು, ಶೇ.2ರಷ್ಟುಹೆಚ್ಚಳದೊಂದಿಗೆ ಒಟ್ಟಾರೆ ಶೇ.43ರಷ್ಟುಮತಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

ಕಾಂಗ್ರೆಸ್‌ಗೆ 8ರಿಂದ 10: ಇದೇ ವೇಳೆ, ಕಾಂಗ್ರೆಸ್‌ ಪಕ್ಷ ತಾನು ಸ್ಪರ್ಧಿಸಿರುವ 20 ಕ್ಷೇತ್ರಗಳಲ್ಲಿ 8ರಿಂದ 10 ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ. 2009ರಲ್ಲಿ ಕೇವಲ 6 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌, ನಂತರ 2014ರಲ್ಲಿ 9 ಸೀಟು ಗೆಲ್ಲುವ ಮೂಲಕ ಶಕ್ತಿ ಹೆಚ್ಚಿಸಿಕೊಂಡಿತ್ತು. ಆದರೆ, ಈ ಸಲ ಕಾಂಗ್ರೆಸ್‌ ಸೀಟು ಗಳಿಕೆ ಮತ್ತಷ್ಟುಹೆಚ್ಚುವ ಸಾಧ್ಯತೆ ಇಲ್ಲ ಎಂದು ಸಮೀಕ್ಷೆ ಕಂಡುಕೊಂಡಿದೆ.

ಏತನ್ಮಧ್ಯೆ, ಕಾಂಗ್ರೆಸ್‌ ಮತ ಗಳಿಕೆ ಪ್ರಮಾಣದಲ್ಲಿ ತೀವ್ರ ಕುಸಿತ ಕಾಣುವ ಸಾಧ್ಯತೆ ಇದೆ. 2009ರಲ್ಲಿ ಬಿಜೆಪಿಗಿಂತ ಶೇ.4ರಷ್ಟುಕಡಿಮೆ ಅಂದರೆ ಶೇ.41 ಮತಗಳನ್ನು ಗಳಿಸಿದ್ದ ಕಾಂಗ್ರೆಸ್‌ ಪಕ್ಷ, 2014ರಲ್ಲಿ ಬಿಜೆಪಿಗಿಂತ ಶೇ.2ರಷ್ಟುಮಾತ್ರ ಕಡಿಮೆ ಮತ ಪಡೆದಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗಿಂತ ಶೇ.13ರಷ್ಟುಕಡಿಮೆ ಅಂದರೆ ಶೇ.32 ಮತಗಳನ್ನು ಕಾಂಗ್ರೆಸ್‌ ಗಳಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಜೆಡಿಎಸ್‌ಗೆ 1ರಿಂದ 3: ಮಂಡ್ಯ ಮತ್ತು ಹಾಸನದಲ್ಲಿ ತಮ್ಮ ಮೊಮ್ಮಕ್ಕಳನ್ನು ಕಣಕ್ಕಿಳಿಸಿ ತಾವು ತುಮಕೂರಿನಿಂದ ಕಣಕ್ಕಿಳಿದಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನೇತೃತ್ವದ ಜೆಡಿಎಸ್‌ ಸೀಟು ಗಳಿಕೆಯಲ್ಲಿ ಈ ಬಾರಿಯೂ ಭಾರೀ ವ್ಯತ್ಯಾಸವೇನೂ ಆಗಲಿಕ್ಕಿಲ್ಲ ಎಂದು ಸಮೀಕ್ಷೆ ಹೇಳುತ್ತಿದೆ. ಮೈತ್ರಿ ಸೂತ್ರದ ಅನ್ವಯ 7 ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್‌ 1ರಿಂದ 3 ಕ್ಷೇತ್ರಗಳಲ್ಲಷ್ಟೇ ಗೆಲ್ಲಲಿದೆ. 2009ರಲ್ಲಿ 3 ಸೀಟು ಗೆದ್ದಿದ್ದ ಜೆಡಿಎಸ್‌, 2014ರ ಚುನಾವಣೆಯಲ್ಲಿ ಕೇವಲ ಹಾಸನ ಮತ್ತು ಮಂಡ್ಯ ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿತ್ತು. ಈ ಬಾರಿಯೂ ಈ ಸಂಖ್ಯೆಯಲ್ಲಿ ಭಾರೀ ಬದಲಾವಣೆ ಆಗದಿರುವ ಅಂದಾಜಿದೆ.

ಆದರೆ, ಮತ ಗಳಿಕೆ ಪ್ರಮಾಣದಲ್ಲಿ ಜೆಡಿಎಸ್‌ ಕಳೆದ ಬಾರಿಗಿಂತ ಈ ಸಲ ಉತ್ತಮ ಸಾಧನೆ ಮಾಡಲಿದೆ. 2014ರಲ್ಲಿ ಶೇ.10ರಷ್ಟುಮತಗಳನ್ನು ಗಳಿಸಿದ್ದ ಜಾತ್ಯತೀತ ಜನತಾ ದಳ, ಈ ಬಾರಿ ಮತ ಗಳಿಕೆ ಪ್ರಮಾಣವನ್ನು ಶೇ.14ಕ್ಕೆ ಹೆಚ್ಚಿಸಿಕೊಳ್ಳುವ ಸಂಭವವಿದೆ. 2009ರಲ್ಲಿ ಜೆಡಿಎಸ್‌ ಮತ ಗಳಿಕೆ ಪ್ರಮಾಣ ಶೇ.13ರಷ್ಟಿತ್ತು.

ಒಬ್ಬ ಪಕ್ಷೇತರ ಗೆಲುವು?: ಕಳೆದೆರಡು ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದಲ್ಲಿ ಒಂದೂ ಸೀಟು ಗೆಲ್ಲದ ಪಕ್ಷೇತರ ಅಭ್ಯರ್ಥಿಗಳು ಈ ಬಾರಿ ಖಾತೆ ತೆರೆಯುವ ಸಾಧ್ಯತೆ ಇದೆ. ಮಂಡ್ಯದಲ್ಲಿ ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್‌ ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಗಮನ ಸೆಳೆಯುವಂತಹ ಪಕ್ಷೇತರ ಅಭ್ಯರ್ಥಿಗಳು ಇಲ್ಲದಿರುವ ಕಾರಣ, ಸಹಜವಾಗಿಯೇ ಆ ಕ್ಷೇತ್ರದ ಬಗ್ಗೆ ಕುತೂಹಲ ಹೆಚ್ಚಿದೆ.

ವಿಶೇಷವೆಂದರೆ, ಪಕ್ಷೇತರರು ಕಳೆದ ಬಾರಿಯ ಚುನಾವಣೆಗಿಂತ ಶೇ.2ರಷ್ಟುಹೆಚ್ಚು ಮತ ಗಳಿಸುವ ನಿರೀಕ್ಷೆ ಇದೆ. 2009ರಲ್ಲಿ ಶೇ.7ರಷ್ಟುಮತ ಗಳಿಸಿದ್ದ ಪಕ್ಷೇತರ ಅಭ್ಯರ್ಥಿಗಳು, 2014ರಲ್ಲಿ ಶೇ.6 ಮತಗಳನ್ನಷ್ಟೇ ಗಳಿಸಿದ್ದರು. ಈ ಬಾರಿ ಆ ಪ್ರಮಾಣ ಶೇ.8ಕ್ಕೇರುವ ಸಾಧ್ಯತೆ ಇದೆ ಎಂದು ಎಝಡ್‌ ರಿಸರ್ಚ್ ಅಂದಾಜಿಸಿದೆ.


ಬಿಜೆಪಿ    ಕಾಂಗ್ರೆಸ್‌    ಜೆಡಿಎಸ್‌    ಇತರೆ

14-18    8-10    1-3    0-1 ಸ್ಥಾನ

ಮತ ಗಳಿಕೆ ಶೇ.45    ಮತ ಗಳಿಕೆ ಶೇ.32    ಮತ ಗಳಿಕೆ ಶೇ.14    ಮತ ಗಳಿಕೆ ಶೇ.8

2014ರಲ್ಲಿ 17    2009ರಲ್ಲಿ 19    2014ರಲ್ಲಿ 9    2009ರಲ್ಲಿ 6    2014ರಲ್ಲಿ 2    2009ರಲ್ಲಿ 3    2014ರಲ್ಲಿ 0    2009ರಲ್ಲಿ 0