Asianet Suvarna News Asianet Suvarna News

ಡಿ.ಕೆ.ಶಿವಕುಮಾರ್ ಗೆ ಕಾಂಗ್ರೆಸ್ ಸಚಿವ ವಾರ್ನಿಂಗ್

ಕರ್ನಾಟಕ ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಡಿ.ಕೆ.ಶಿವಕುಮಾರ್ ಗೆ ಇದೀಗ ಕರ್ನಾಟಕ ಸರ್ಕಾರದ ಸಚಿವರೋರ್ವರು ಖಡಕ್ ವಾರ್ನಿಂಗ್ ನೀಡಿದ್ದಾರೆ. 

Lingayat Religion Issue MB Patil Warns Minister DK Shivakumar
Author
Bengaluru, First Published Apr 13, 2019, 8:06 AM IST

ವಿಜಯಪುರ :  ‘ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೇವೆ, ಇದಕ್ಕಾಗಿ ನಾವು ಕ್ಷಮೆ ಕೋರುತ್ತೇವೆ’ ಎಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಗೃಹ ಸಚಿವ ಎಂ.ಬಿ.ಪಾಟೀಲ ಮತ್ತೊಮ್ಮೆ ಗುಡುಗಿದ್ದಾರೆ. ಕಾಂಗ್ರೆಸ್‌ಗೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೂ ಸಂಬಂಧವೇ ಇಲ್ಲ. ಆದರೆ ಡಿಕೆಶಿ ಪದೇ ಪದೇ ಬಹಿರಂಗವಾಗಿ ಪ್ರಸ್ತಾಪಿಸುತ್ತಿದ್ದಾರೆ. ಈ ವಿಷಯವಾಗಿ ಕಾಂಗ್ರೆಸ್‌ ಪರ ಕ್ಷಮೆ ಕೇಳಲು ಡಿಕೆಶಿ ಯಾರು? ಅವರು ತಮ್ಮ ವರ್ತನೆ ತಿದ್ದಿಕೊಳ್ಳಬೇಕು. ಇಲ್ಲವಾದರೆ ಲೋಕಸಭೆ ಚುನಾವಣೆ ಬಳಿಕ ಇದರ ಹಿಂದಿನ ಡಿಕೆಶಿ ಉದ್ದೇಶ ಬಹಿರಂಗಪಡಿಸಬೇಕಾಗುತ್ತದೆ ಎಂದು ಎಂ.ಬಿ.ಪಾಟೀಲ ಎಚ್ಚರಿಸಿದ್ದಾರೆ.

ವಿಜಯಪುರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವೇ ಬೇರೆ. ಕಾಂಗ್ರೆಸ್‌ ಸಂಘಟನೆಯೇ ಬೇರೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ನೇತೃತ್ವ ವಹಿಸಿದ್ದ ನಾನೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಆಧರಿಸಿ ಮತ ಕೇಳಿಲ್ಲ. ಅಭಿವೃದ್ಧಿ ವಿಷಯದಲ್ಲೇ ಮತ ಕೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಹೈಕಮಾಂಡ್‌ಗೆ ದೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಕಾಂಗ್ರೆಸ್‌ ಕ್ಷಮೆ ಕೇಳುತ್ತದೆ ಎಂದು ಹೇಳಲು ಡಿಕೆಶಿ ಯಾರು? ಅವರಿಗೆ ಇದಕ್ಕೂ ಏನು ಸಂಬಂಧ? ಅವರಿಗೆ ಈ ಅಧಿಕಾರ ಕೊಟ್ಟವರಾರ‍ಯರು? ಡಿಕೆಶಿ ಮೊದಲು ಒಕ್ಕಲಿಗರು ಪ್ರಾಬಲ್ಯವಿರುವ ಸ್ಥಳಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ಕೊಡಿಸಲಿ. ಅಲ್ಲೂ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಎಲ್ಲ ತಪ್ಪುಗಳನ್ನು ಮುಚ್ಚಿಹಾಕಿಕೊಂಡು ಡಿಕೆಶಿ ನಮ್ಮೆಲ್ಲರ ಮೇಲೆ ಗೂಬೆ ಕೂರಿಸಲು ಮುಂದಾದರೆ ನಾವು ಸುಮ್ಮನಿರುವುದಿಲ್ಲ ಎಂದರು. ಜತೆಗೆ, ಡಿಕೆಶಿ ವರ್ತನೆ ಸರಿಯಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ಅದರಲ್ಲೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ದೂರು ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದರು.

ಪೂರ್ಣ ಅರಿವಿದೆ: ಡಿಕೆಶಿ ಏಕೆ ಈ ಬಗ್ಗೆ ಪದೇ ಪದೆ ಮಾತನಾಡುತ್ತಿದ್ದಾರೆ? ಇದರ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ನನಗೆ ಪೂರ್ಣ ಅರಿವಿದೆ. ಈಗ ಅದು ಬಹಿರಂಗ ಮಾಡಿದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ಅದರಲ್ಲೂ ಚುನಾವಣೆ ಸಮಯವಾಗಿರುವುದರಿಂದ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಯಾವುದೇ ಹೇಳಿಕೆ ನೀಡಲ್ಲ. ಚುನಾವಣೆ ನಂತರ ಪತ್ರಿಕಾಗೋಷ್ಠಿ ನಡೆಸಿ ಡಿಕೆಶಿ ಅವರಿಗೆ ಸುದೀರ್ಘ ಉತ್ತರ ನೀಡುತ್ತೇನೆ. ಕರಾವಳಿ, ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಬೇಕಾದ ಡಿಕೆಶಿ ಅದನ್ನು ಮರೆತಿದ್ದಾರೆ. ವಿನಾ ಕಾರಣ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Follow Us:
Download App:
  • android
  • ios