ಬೆಂಗಳೂರು :  ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್ಸಿನಲ್ಲಿ ಮತ್ತೆ ಭಿನ್ನಧ್ವನಿ ಕೇಳಿಬರತೊಡಗಿದ್ದು, ಶಾಸಕರ ನಡುವೆ ಪತ್ರ ಸಮರ ಆರಂಭವಾಗಿದೆ. 

ಪ್ರಸಕ್ತ ರಾಜಕೀಯ ಸನ್ನಿವೇಶವು ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಇದಕ್ಕೆ ಪರಿಹಾರ ಕಂಡು ಕೊಳ್ಳಲು ಸಮಾನಮನಸ್ಕರೆಲ್ಲಾ ಒಟ್ಟಾಗಿ ಸಭೆ ನಡೆಸಬೇಕು ಎಂದು ಯಶವಂತಪುರ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ಕರೆ ನೀಡಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರಿಂದಲೇ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. 

ಸೋಮಶೇಖರ್ ಬರೆದಿರುವ ಪತ್ರದಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ಸನ್ನಿವೇಶವು ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಹೀಗಾಗಿ ಎಲ್ಲ ಸಮಾನ ಮನಸ್ಕ ಶಾಸಕರು ಒಟ್ಟಾಗಿ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಲಿ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಬೆಳಗ್ಗೆ  11.30 ಕ್ಕೆ ನಗರದ ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆವ ಸಭೆಗೆ ತಪ್ಪದೆ ಹಾಜರಾಗಬೇಕು.

ಈ ವೇಳೆ ತಮ್ಮ ಅಮೂಲ್ಯ ಸಲಹೆಗಳನ್ನು ನೀಡ ಬೇಕೆಂದು ಮನವಿ ಮಾಡಿರುವ ಪತ್ರ ಬಹಿರಂಗ ವಾಗಿದೆ. ಆದರೆ ಈ ಬಗ್ಗೆ ಸ್ವಪಕ್ಷೀಯರೇ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಷತ್ ಸದಸ್ಯ ರಘು ಆಚಾರ್ ಬಹಿರಂಗ ಪತ್ರ ಬರೆಯುವ ಮೂಲಕ ಸೋಮಶೇಖರ್ ಅವರ ಕ್ರಮವನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ.

ಇನ್ನು, ಸೋಮಶೇಖರ್ ಅವರು ಸಭೆ ನಡೆಸಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅವರು ಯಾವ ವಿಚಾರಕ್ಕೆ ಸಭೆ ಕರೆದಿದ್ದಾರೆ ಎಂಬುದು ಗೊತ್ತಿಲ್ಲ. ಸೋಮಶೇಖರ್ ಒಳ್ಳೆ ವಿಚಾರಕ್ಕೆ ಸಭೆ ಕರೆದಿರಬಹುದು. ನಮ್ಮದೇನೂ ಹಿಟ್ಲರ್ ಆಡಳಿತ ಅಲ್ಲವಲ್ಲ. ಹೀಗಾಗಿ ಒಳ್ಳೆಯ ವಿಚಾರಕ್ಕೆ ಸಭೆ ಕರೆಯಲು ನಾವು ಅವಕಾಶ ನಿರಾಕರಿಸುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ತಪ್ಪು ಸಂದೇಶ ರವಾನೆ- ರಘು ಆಚಾರ್ ಕಿಡಿ: ಈ ಬಗ್ಗೆ ಸೋಮಶೇಖರ್ ಅವರಿಗೆ ಪತ್ರ ಬರೆದಿರುವ ರಘು ಆಚಾರ್ ತೀವ್ರವಾಗಿ ಕಿಡಿ ಕಾರಿದ್ದಾರೆ. ಮಂಗಳವಾರ ಸಭೆ ಕರೆದಿರುವ ನಿಮ್ಮ ನಡೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಮ್ಮಂತಹವರಿಗೆ ಬೇಸರ ಉಂಟು ಮಾಡಿದೆ. ರಾಜ್ಯದಲ್ಲಿ ಒಂದೆಡೆ ಬರದ ಛಾಯೆಯಿಂದ ಕಂಗೆಟ್ಟಿರುವ ಸನ್ನಿವೇಶವಿದೆ. 

ಮತ್ತೊಂದೆಡೆ ಈಗಷ್ಟೇ ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದೆ. ಜನರು ಕಾಂಗ್ರೆಸ್ ಪಕ್ಷದ ನೇತೃತ್ವದ ಮೈತ್ರಿ ಸರ್ಕಾರದ ಆಗುಹೋಗುಗಳನ್ನು ಗಮನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಾವು ಸರ್ಕಾರದ ಬಗ್ಗೆ ಏಕಾಏಕಿ ಅಸಮಾಧಾನ ತೋಡಿಕೊಂಡು ಪಕ್ಷದ ವರಿಷ್ಠರ ಜತೆ ಮಾತನಾಡದೆ ಒಮ್ಮೆಲೇ ಶಾಸಕರ ಸಭೆ ಕರೆದಿರುವುದು ಪಕ್ಷದಲ್ಲಿ ಮಾತ್ರವಲ್ಲದೇ ರಾಜ್ಯದ ಜನರಿಗೆ ತಪ್ಪು ಸಂದೇಶ ರವಾನಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಶಾಸಕರ ಕುಂದು ಕೊರತೆ ವಿಚಾರಿಸಲು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರಿದ್ದಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಡಿ.ಕೆ. ಶಿವಕುಮಾರ್ ಇದ್ದಾರೆ. ಇನ್ನು ತಮ್ಮ ಸಮಸ್ಯೆ ಆಲಿಸಲು ಪಕ್ಷದ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಇದ್ದಾರೆ. ಇದೆಲ್ಲ ಬಿಟ್ಟು ಶಾಸಕರ ಸಭೆ ಕರೆದಿರುವುದು ನನಗೆ ಶಾಕ್ ನೀಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಶಾಸಕರು ಆಗಿರುವ ತಾವು ನಮ್ಮಂತಹ ಕಿರಿಯ ಶಾಸಕರಿಗೆ ಮಾರ್ಗದರ್ಶಕರಾಗಿರುತ್ತೀರಾ ಎಂದು ನಂಬಿದ್ದೇನೆ. ಕಾಂಗ್ರೆಸ್ ಪಕ್ಷದ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ನಾನು ನನ್ನ ಅಭಿಪ್ರಾಯವನ್ನು ತಮ್ಮಲ್ಲಿ ನೇರವಾಗಿ ವ್ಯಕ್ತಪಡಿಸುತ್ತಿದ್ದೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.