ಗೋಕಾಕ :  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ್‌ನಿಂದ ಲಖನ್‌ ಜಾರಕಿಹೊಳಿಯವರು ಸ್ಪರ್ಧಿಸುವುದು ಖಚಿತವಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಗೋಕಾಕದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಕಾಂಗ್ರೆಸ್‌ ಪಕ್ಷದಿಂದ ದೂರ ಉಳಿದಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೋಕಾಕನಿಂದ ಲಖನ್‌ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದರು. 

ನಾವೆಲ್ಲ ದೊಡ್ಡ ಮಟ್ಟದಲ್ಲಿ ಈ ರೀತಿಯಾಗಿ ಪ್ರಚಾರ ಮಾಡುತ್ತಿದ್ದರೆ ರಮೇಶ ಜಾರಕಿಹೊಳಿ ಮಾತ್ರ ದೂರ ಉಳಿದಿದ್ದಾರೆ. ರಮೇಶ ಅವರ ಮೇಲೆ ಪಕ್ಷ ಚುನಾವಣೆಯ ಬಳಿಕ ಕ್ರಮ ಕೈಗೊಳ್ಳಲಿದೆ. ಲಖನ್‌ ಜಾರಕಿಹೊಳಿ ನೇತೃತ್ವದಲ್ಲಿ ಇನ್ಮುಂದೆ ಗೋಕಾಕ ಕಾಂಗ್ರೆಸ್‌ ಮುನ್ನಡೆಸಲಾಗುವುದು. ಈ ಬೆಳವಣಿಗೆಯಿಂದ ನನಗೇನೂ ತೊಂದರೆ ಆಗಲ್ಲ ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದರು.

ರಮೇಶ್‌ ಜಾರಕಿಹೊಳಿ ಅವರನ್ನು ಮನವೊಲಿಸುವ ಕೆಲಸ ನನ್ನ ಕೈಮೀರಿದ್ದು, ಅವರು ಬಿಜೆಪಿಗೆ ಪಕ್ಷಾಂತರ ಆದಲ್ಲಿ ಗೋಕಾಕರಿಂದ ಲಖನ್‌ ಸ್ಪರ್ಧಿಸಲಿದ್ದಾರೆ ಎಂದು ಗುರುವಾರವೇ ಸತೀಶ್‌ ಜಾರಕಿಹೊಳಿ ತಿಳಿಸಿದ್ದರು.