ಬೆಂಗಳೂರು[ಏ.11]: ಬೆಂಗಳೂರು ಕೇಂದ್ರದ ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ಪ್ರಚಾರದ ವೇಳೆ ಎಐಸಿಸಿ ವಕ್ತಾರೆ, ನಟಿ ಖುಷ್ಬೂ ಸುಂದರ್‌ ಅವರು ತಮ್ಮೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಕಪಾಳ ಮೋಕ್ಷ ಮಾಡಿರುವುದು ಹಾಗೂ ಪೊಲೀಸರು ಯುವಕನನ್ನು ದೂರ ಕಳಿಸುವುದು ದೃಶ್ಯಾವಳಿಗಳಲ್ಲಿ ದಾಖಲಾಗಿದೆ.

‘ನೂಕುನುಗ್ಗಲು ವೇಳೆ ಅಚಾತುರ್ಯದ ಘಟನೆ ನಡೆದಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಖುಷ್ಬೂ ಸುಂದರ್‌ ಹೊಡೆದಿದ್ದಾರೆ. ತಕ್ಷಣ ಪೊಲೀಸರು ಯುವಕನನ್ನು ದೂರ ಕಳಿಸಿದ್ದಾರೆ. ಯುವಕ ಹಾಗೂ ಖುಷ್ಬೂ ಇಬ್ಬರದ್ದೂ ದುರುದ್ದೇಶಪೂರ್ವಕ ನಡೆಯಲ್ಲ’ ಎಂದು ಕಾಂಗ್ರೆಸ್‌ ಮೂಲಗಳು ಸ್ಪಷ್ಟಪಡಿಸಿವೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅರ್ಷದ್‌, ‘ಖುಷ್ಬೂ ಅವರೊಂದಿಗೆ ಅಸಭ್ಯ ವರ್ತನೆ ತೋರಿದ್ದಕ್ಕಾಗಿ ಕಪಾಳ ಮೋಕ್ಷ ಮಾಡಿದ್ದಾಗಿ ಖುಷ್ಬೂ ಅವರು ತಿಳಿಸಿದರು. ಯಾರೇ ಆಗಲಿ ಮಹಿಳೆಯರಿಗೆ ಗೌರವ ಕೊಟ್ಟು ಅಂತರ ಕಾಯ್ದುಕೊಳ್ಳಬೇಕು. ಪ್ರಚಾರ ಸಂಧರ್ಭದಲ್ಲಿ ನೂರಾರು ಜನ ಭಾಗಿಯಾಗಿದ್ದರು. ಈ ವಿಷಯ ಬಹಿರಂಗಪಡಿಸುವುದು ಅನವಶ್ಯಕ ಎಂದು ಹೇಳಿರಲಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.