ಹುಬ್ಬಳ್ಳಿ (ಮೇ. 09): ಕುಂದಗೋಳ ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್‌ ನಾಯಕ, ಸಚಿ​ವ ಡಿ.ಕೆ.ಶಿವಕುಮಾರ್‌ ಹಾಗೂ ಬಿಜೆಪಿ ನಾಯಕ ಶ್ರೀರಾಮುಲು ಅಸ್ವಸ್ಥರಾಗಿ ಪ್ರಚಾ​ರ​ವನ್ನು ಮೊಟ​ಕು​ಗೊ​ಳಿ​ಸಿದ ಘಟನೆ ನಡೆ​ದಿ​ದೆ.

ಡಿ.ಕೆ. ಶಿವಕುಮಾರ್‌ ಅವರು ಕುಂದಗೋಳದಲ್ಲಿ ಬಿಡುವಿಲ್ಲದ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದಲ್ಲಿ ಎದ್ದಿದ್ದ ಬಂಡಾಯ ಶಮನದ ಜೊತೆ ಕುಸುಮಾವತಿ ಶಿವಳ್ಳಿ ಗೆಲುವಿಗಾಗಿ ನಿರಂತರ ಓಡಾಟ ನಡೆಸಿದ್ದಾರೆ. ಈ ನಡುವೆ ಕುಂದಗೋಳದಲ್ಲಿ ಪಕ್ಷದ ಕಚೇರಿ ಉದ್ಘಾಟನೆ, ಕಾರ್ಯಕರ್ತರ ಸಭೆ ನಡೆಸಿದ್ದಾರೆ.

ಇದರಿಂದಾಗಿ ಚುನಾವಣಾ ಒತ್ತಡದಿಂದ ಅಸ್ವಸ್ಥಗೊಂಡಿದ್ದಾರೆ. ಹುಬ್ಬಳ್ಳಿಯ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಡಿಕೆಶಿ, ಅಲ್ಲಿಯೇ ವೈದ್ಯರಿಂದ ಹೈ ಬಿಪಿ, ಶುಗ​ರ್‌ಗೆ ಚಿಕಿತ್ಸೆ ಪಡೆದಿದ್ದಾರೆ. ಕೊಠಡಿಯಿಂದ ಹೊರಬಂದಿಲ್ಲ. ವೈದ್ಯರ ಸಲಹೆ ಮೇರೆಗೆ ಪ್ರಮುಖರನ್ನು ಮಾತ್ರ ಕೊಠಡಿಯೊಳಗೆ ಕರೆಸಿಕೊಂಡು ಚರ್ಚೆ ನಡೆಸುತ್ತಿದ್ದಾರೆ.

ರಾಮುಲು ರೋಡ್‌ ಶೋ ಮೊಟಕು:

ಈ ನಡುವೆ ಬಿಜೆಪಿ ನಾಯಕ ಶ್ರೀರಾಮುಲು ಅವರು ಕಾಂಗ್ರೆಸ್‌ ನಾಯಕರಿಗೆ ಪ್ರತಿತಂತ್ರ ರೂಪಿಸಿ ಚುನಾವಣೆಯಲ್ಲಿ ನಿರತರಾಗಿದ್ದರು. ಪರಿಶಿಷ್ಟಜಾತಿ, ಪಂಗಡ ಮತ ಸೆಳೆಯುವುದು ಸೇರಿದಂತೆ ಇನ್ನಿತರ ಪ್ರಚಾರ ತಂತ್ರಗಳನ್ನು ಅವರು ಅನುಸರಿಸಿದ್ದರು.

ಬುಧವಾರ ಜ್ವರವಿದ್ದರೂ ಅಂಚಟಗೇರಿ, ಕರಡಿಕೊಪ್ಪ, ಬೆಟದೂರು ಗ್ರಾಮದಲ್ಲಿ ರೋಡ್‌ ಶೋ ನಡೆಸಿದ್ದರು. ಆದರೆ, ಬಿಸಿಲ ತಾಪಕ್ಕೆ ಜ್ವರ ಹೆಚ್ಚಾದ ಹಿನ್ನೆಲೆ ರೋಡ್‌ ಶೋವನ್ನು ಬೆಟದೂರಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಅಲ್ಲಿಂದ ನೇರವಾಗಿ ಬಳ್ಳಾರಿಗೆ ತೆರಳಿರುವ ರಾಮುಲು ಅಲ್ಲಿ ಎರಡು ದಿನ ವಿಶ್ರಾಂತಿ ಪಡೆದು ಬಳಿಕ ಮತ್ತೆ ಚುನಾವಣೆ ಪ್ರಚಾರಕ್ಕೆಂದು ಕುಂದಗೋಳ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.