ಮಂಡ್ಯ, [ಏ.10]: ದಿನದಿಂದ ದಿನಕ್ಕೆ ಮಂಡ್ಯ ಲೋಕಸಭಾ ಅಖಾಡ ರಂಗೇರುತ್ತಿದ್ದು, ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಆದ್ರೆ ಕೈ-ತೆನೆ ಹೊಂದಾಣಿಕೆಯಾಗುತ್ತಿಲ್ಲ.

ಏನೇ ಪ್ರಯತ್ನ ಮಾಡಿದರೂ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗುವುದು ಕಷ್ಟ ಎನ್ನುವುದು ರಾಜ್ಯ ನಾಯಕರಿಗೆ ಮನವರಿಕೆಯಾಗಿದೆ. ಈ ಹಿನ್ನಲೆಯಲ್ಲಿ  ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಬಹಿರಂಗವಾಗಿ ಗುರುತಿಸಿಕೊಂಡ ಮಂಡ್ಯ ಜಿಲ್ಲೆಯ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ವಜಾಗೊಳಿಸಿ ಕೆಪಿಸಿಸಿ ಆದೇಶ ಹೊರಡಿಸಿದೆ.  

ಸುಮಲತಾಗೆ ಬೆಂಬಲ: ಬಿಗ್ ಲೀಡರ್ ಬಿಟ್ಟು ಗುಬ್ಬಿ ಮೇಲೆ ಕಾಂಗ್ರೆಸ್ ಬ್ರಹ್ಮಾಸ್ತ್ರ

ನಿಖಿಲ್ ಕುಮಾರಸ್ವಾಮಿ ವಿರುದ್ಧ ಪ್ರಚಾರ ಮಾಡಿದ್ದ ಆರೋಪ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ವಜಾಗೊಳಿಸಿ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಘೋರ್ಪಡೆ ಅವರು ಇಂದು [ಬುಧವಾರ] ಆದೇಶ ಹೊರಡಿಸಿದ್ದಾರೆ.

ಇನ್ನು ರೆಬಲ್ ಆಗಿರುವ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಸೇರಿದಂತೆ  ಇತರೆ ಪ್ರಮುಖ ನಾಯಕರನ್ನು ಕಾಂಗ್ರೆಸ್ ಟಚ್ ಮಾಡಿಲ್ಲ. ಕೇವಲ ಸಣ್ಣಪುಟ್ಟ ಮುಖಂಡರನ್ನು ಮಾತ್ರ ವಜಾಗೊಳಿಸಿರುವುದು ಒಂದು ರೀತಿಯಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಾಗಿದೆ.

ಬೇರೆ ಕಡೆ ಮೈತ್ರಿಯಾಗಲೀ ಆದ್ರೆ ಮಂಡ್ಯದಲ್ಲಿ ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎಂದು ಬಹಿರಂಗವಾಗಿಯೇ ಚೆಲುವರಾಸ್ವಾಮಿ ಹೇಳಿದ್ದರು. ಅಷ್ಟೇ ಅಲ್ಲದೇ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಕೂಡ ಮಂಡ್ಯ ಜಿಲ್ಲಾ ನಾಯಕರ ಜೊತೆ ಸಂಧಾನ ಸಭೆ ನಡೆಸಿದ್ದರೂ ಪ್ರಯೋಜಕ್ಕೆ ಬಂದಿಲ್ಲ. ಇದ್ರಿಂದ ಅಂತಿಮವಾಗಿ ಕೆಪಿಸಿಸಿ ಈ ಉಚ್ಚಾಟನೆ ಅಸ್ತ್ರವನ್ನು ಪ್ರಯೋಗಿಸಿದೆ.

 ಉಚ್ಚಾಟನೆಗೊಂಡ 7 ಬ್ಲಾಕ್​ ಕಾಂಗ್ರೆಸ್ ಅಧ್ಯಕ್ಷರು

1) ಹೆಚ್.ಅಪ್ಪಾಜಪ್ಪ, ಮಂಡ್ಯ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
2) ಎ.ಎಸ್.ರಾಜೀವ್, ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
3) ಪುಟ್ಟರಾಮು, ಮಳವಳ್ಳಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
4) ಕೆ.ಜೆ.ದೇವರಾಜ್, ಮಳವಳ್ಳಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
5) ಎಂ.ಪ್ರಸನ್ನ, ನಾಗಮಂಗಲ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
6) ಕೆ.ಆರ್.ರವೀಂದ್ರ ಬಾಬು, ಕೆ.ಆರ್.ಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
7) ಎಸ್.ಬಿ.ಪ್ರಕಾಶ್, ಮೇಲುಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.