ಬೆಂಗಳೂರು :  ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ ಸ್ಥಳೀಯ ಕಾಂಗ್ರೆಸ್‌ ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸಿದರು ಎಂಬುದನ್ನು ಜೆಡಿಎಸ್‌ ನಾಯಕತ್ವ ದಾಖಲೆ ಸಮೇತ ನಿರೂಪಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿರುವ ವಿದ್ಯಮಾನಕ್ಕೆ ಕ್ಯಾರೇ ಎನ್ನದಿರಲು ಹಾಗೂ ಮಂಡ್ಯದ ಸ್ಥಳೀಯ ಕಾಂಗ್ರೆಸ್‌ ನಾಯಕರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಿರುವ ನಿಲುವಿಗೆ ರಾಜ್ಯ ಕಾಂಗ್ರೆಸ್‌ ನಾಯಕತ್ವ ಬಂದಿದೆ.

ಅಷ್ಟೇ ಅಲ್ಲ, ಒಂದು ವೇಳೆ ಇಂತಹ ದಾಖಲೆಗಳ ಆಧಾರದ ಮೇಲೆ ಕಾಂಗ್ರೆಸ್‌ ನಾಯಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದೇನಾದರೂ ಅಧಿಕೃತವಾಗಿ ದೂರು ನೀಡಿದರೆ, ಆಗ ಮೈಸೂರಿನಲ್ಲಿ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ ಜಿ.ಟಿ.ದೇವೇಗೌಡ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಬೇಕು ಎಂದು ತಿರುಗುಬಾಣ ನೀಡಲು ಸಜ್ಜಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸುಮಲತಾ ಅವರೊಂದಿಗೆ ಮಾಜಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಸಭೆ ನಡೆಸಿದ ವಿಡಿಯೋ ಕ್ಲಿಪಿಂಗ್‌ಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ಜೆಡಿಎಸ್‌ ನಾಯಕತ್ವವು ಸ್ಥಳೀಯ ಕಾಂಗ್ರೆಸ್‌ ನಾಯಕರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆಲಸ ಮಾಡಿದ್ದರು ಎಂದು ಬಿಂಬಿಸಲು ಮುಂದಾಗಿದೆ. ಅಲ್ಲದೆ, ಮಂಡ್ಯದಲ್ಲಿ ಕಾಂಗ್ರೆಸ್‌ ನಾಯಕರು ಕೈಕೊಟ್ಟಿದ್ದರ ಪರಿಣಾಮವಾಗಿಯೇ ಮೈಸೂರಿನಲ್ಲಿ ಜೆಡಿಎಸ್‌ ನಾಯಕರು ಕಾಂಗ್ರೆಸ್‌ಗೆ ಕೈಕೊಟ್ಟಿದ್ದಾರೆ ಎಂದು ಸಮರ್ಥಿಕೊಳ್ಳುವ ಪ್ರಯತ್ನಕ್ಕೂ ಮುಂದಾಗಿದೆ. ಜೆಡಿಎಸ್‌ ನಾಯಕತ್ವ ಇಷ್ಟಕ್ಕೇ ಸುಮ್ಮನಾಗದೆ, ಚಲುವರಾಯಸ್ವಾಮಿ ಸೇರಿದಂತೆ ಮಂಡ್ಯದ ಕಾಂಗ್ರೆಸ್‌ ನಾಯಕರ ಚಲನವಲನದ ಮೇಲೆ ಕಣ್ಣಿಟ್ಟಿದೆ ಹಾಗೂ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು ಎಂಬುದಕ್ಕೆ ದಾಖಲೆ ಸಂಗ್ರಹಿಸಿ ಹೈಕಮಾಂಡ್‌ಗೆ ದೂರು ನೀಡುವ ಉದ್ದೇಶ ಹೊಂದಿದೆ ಎಂಬ ಗುಮಾನಿ ಕಾಂಗ್ರೆಸ್‌ ನಾಯಕರಿಗೆ ಇದೆ. ಒಂದು ವೇಳೆ ದೂರು ನೀಡಿದರೂ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್‌ ನಾಯಕರ ಪರ ನಿಲ್ಲಲು ರಾಜ್ಯ ಕಾಂಗ್ರೆಸ್‌ ನಿರ್ಧರಿಸಿದೆ. ಜೆಡಿಎಸ್‌ನ ವಾದಕ್ಕೆ ಪ್ರತಿಯಾಗಿ ಜಿ.ಟಿ.ದೇವೇಗೌಡ ಅವರು ನೀಡಿರುವ ಬಹಿರಂಗ ಹೇಳಿಕೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್‌ ಸಜ್ಜಾಗಿದೆ.

ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‌ನ ಮಂಡ್ಯ ಜಿಲ್ಲೆಯ ನಾಯಕರು ಚುನಾವಣೆ ವೇಳೆ ಪಕ್ಷೇತರ ಸುಮಲತಾ ಪರ ಪ್ರಚಾರ ಮಾಡಿಲ್ಲ. ಕಾಂಗ್ರೆಸ್‌ ನಾಯಕರು ಹೇಳಿದ್ದರಿಂದ ಸುಮಲತಾ ಪರ ಪ್ರಚಾರ ನಡೆಸಿಲ್ಲ. ಆದರೆ, ಜೆಡಿಎಸ್‌ ನಾಯಕತ್ವವು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸದೇ ತಟಸ್ಥರಾಗಿದ್ದರು ಎಂದೇ ಬಿಂಬಿಸಲು ಕಾಂಗ್ರೆಸ್‌ ರಾಜ್ಯ ನಾಯಕತ್ವ ತೀರ್ಮಾನಿಸಿದೆ. ಒಂದು ವೇಳೆ ಮೈತ್ರಿ ಧರ್ಮ ಪಾಲನೆಗೆ ಮಂಡ್ಯ ನಾಯಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದೇನಾದರೂ ಜೆಡಿಎಸ್‌ ಪಟ್ಟು ಹಿಡಿದರೆ, ಆಗ ಮೈಸೂರಿನಲ್ಲಿ ಜೆಡಿಎಸ್‌ನವರು ಬಿಜೆಪಿ ಪರ ಮತ ಹಾಕಿದ್ದಾರೆ ಎಂಬ ಬಹಿರಂಗ ಹೇಳಿಕೆ ನೀಡಿದ ಜಿ.ಟಿ.ದೇವೇಗೌಡ ಅವರನ್ನು ಸಂಪುಟದಿಂದಲೇ ಕೈಬಿಡಬೇಕು ಎಂಬ ಷರತ್ತು ಮುಂದಿಡಲು ಕಾಂಗ್ರೆಸ್‌ ನಾಯಕತ್ವ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.