ಕೊಪ್ಪಳ(ಮಾ.26): ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಇನ್ನೂ ಅಭ್ಯರ್ಥಿ ಘೋಷಣೆಯಾಗದ ಹಿನ್ನಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ತಾವೇ ಅಭ್ಯರ್ಥಿಗಳೆಂದು ಪೋಸ್ಟ್ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರು, ನಾವು ಗೆಲ್ಲವುದು ಕಷ್ಟವಾದರೂ, ಠೇವಣಿಯನ್ನಾದರೂ ಉಳಿಸಿ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. 

ಚೌಕಿದಾರ್ ಶೇಖರ್ ಪಾಟೀಲ್, ಶಂಕರ್ ನಾಯಕ್ ಎನ್ನುವ ಬಿಜೆಪಿ ಕಾರ್ಯಕರ್ತರಿಂದ ಪೋಸ್ಟ್ ಮಾಡಲಾಗಿದ್ದು, ಕೊಪ್ಪಳ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ನಾನೇ ನೋಡ್ರಪ್ಪೊ ಎಂದು ಒಕ್ಕಣಿಕೆ ಬರೆಯಲಾಗಿದೆ.

ಅಲ್ಲದೇ ತಮಗೆ ಗೆಲುವು ಲಭಿಸದಿದ್ದರೂ, ಠೇವಣಿಯನ್ನಾದರೂ ಉಳಿಸುವ ಮೂಲಕ ಪಕ್ಷ ಮರ್ಯಾದೆ ಕಾಪಾಡುವಂತೆ ಮತದಾರರಲ್ಲಿ ಮನವಿ ಮಾಡಲಾಗಿದೆ.

ಕೊಪ್ಪಳ‌ ಲೋಕಸಭೆಯ ಬಿಜೆಪಿ ಟಿಕೆಟ್ ಗುರು ಆರೇರ್ ಅವರಿಗೆ ಅಂತಿಮವಾಗಿದ್ದು, ಎಪ್ರೀಲ್ 4 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದೂ ಶಂಕರ್ ನಾಯಕ್ ಪೋಸ್ಟ್ ಮಾಡಿದ್ದಾರೆ.

ಕೊಪ್ಪಳಕ್ಕೆ ಅಭ್ಯರ್ಥಿ ಘೋಷಣೆ ಮಾಡದ ಹಿನ್ನಲೆಯಲ್ಲಿ ಆಕ್ರೋಶದಿಂದ ಕಾರ್ಯಕರ್ತರು ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕಾರ್ಯಕರ್ತರ ಈ ವ್ಯಂಗ್ಯಭರಿತ ಪೋಸ್ಟ್ ಸಾಮಾಜಿಕ‌ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.