ಕೋಲಾರ (ಏ. 18): ಮತದಾನಕ್ಕೆ ಒಂದೇ ದಿನ ಬಾಕಿ ಇದೆ ಎನ್ನುವಾಗ ಮತಗಟ್ಟೆಯ ಬಾಗಿಲಿಗೆ ಬೆಂಕಿ ಹಚ್ಚಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಲೋಚರುಪಲ್ಲಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದಲ್ಲಿ ಕಾಂಗ್ರೆಸ್‌ ಮುಖಂಡರೊಬ್ಬರ ಕೈಯಲ್ಲಿ ಮತದಾರರಿಗೆ ಹಂಚಲು ಹಣ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಆ ವ್ಯಕ್ತಿ ಗ್ರಾಮದಲ್ಲಿ ಜೆಡಿಎಸ್‌ಗೆ ಸೇರಿದ ಮತದಾರರಿಗೆ ಹಣ ವಿತರಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಆ ಪಕ್ಷದ ಕಾರ್ಯಕರ್ತರು ಗ್ರಾಮದಲ್ಲಿ ಚುನಾವಣೆ ನಡೆಯುವುದೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ(ಸಂಖ್ಯೆ 94) ಬಾಗಿಲಿಗೇ ಬೆಂಕಿ ಹಚ್ಚಿದ್ದಾರೆನ್ನಲಾಗಿದೆ.

ಪ್ರತ್ಯೇಕ ಕೊಠಡಿ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಗುರುವಾರ ನಡೆಯಲಿರುವ ಮತದಾನದ ವೇಳೆ ಯಾವುದೇ ತೊಂದರೆಯಾಗದಂತೆ ಅದೇ ಶಾಲೆಯಲ್ಲಿ ಬೇರೆ ಕೊಠಡಿಯೊಂದನ್ನು ವ್ಯವಸ್ಥೆ ಮಾಡಿದ್ದಾರೆ.