ಚಂಡೀಗಡ[ಮೇ.20]: ಬಾಲಿವುಡ್ ನಟಿ ಹಾಗೂ ಬಿಜೆಪಿ ನಾಯಕಿ ಕಿರಣ್ ಖೇರ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಮತದಾನ ಮಾಡಲು ತೆರಳುತ್ತಿದ್ದ ಕಿರಣ್ ಖೇರ್ ಮುಗ್ಗರಿಸಿ ಬಿದ್ದಿದ್ದು, ಸದ್ಯ ಟ್ರೋಲಿಗರಿಗೆ ಆಹಾರವಾಗಿದೆ.

ಈ ವಿಡಿಯೋದಲ್ಲಿ ಚಂಡೀಗಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಿರಣ್ ಖೇರ್ ಹಾಗೂ ಅವರ ಗಂಡ, ಬಾಲಿವುಡ್ ನಟ ಅನುಪಮ್ ಖೇರ್ ಒಟ್ಟಾಗಿ ಮತ ಚಲಾಯಿಸಲು ಬೂತ್ ಕಡೆ ತೆರಳುತ್ತಿದ್ದರು. ಈ ವೇಳೆ ಹಲವಾರು ಮಂದಿ ಪತ್ರಕರ್ತರು ಅವರನ್ನು ಸುತ್ತಿವರೆಯುತ್ತಾರೆ ಹಾಗೂ ನಾನಾ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಅಷ್ಟರಲ್ಲಿ ಪತ್ರಕರ್ತರ ಪ್ರಶ್ನೆಗಳನ್ನು ಆಲಿಸುತ್ತಿದ್ದ ಕಿರಣ್ ಮಾತ್ರ ನಿಯಂತ್ರಣ ಕಳೆದು ದಢಾರನೆ ಬಿದ್ದಿದ್ದಾರೆ. 

ಅಷ್ಟರಲ್ಲಿ ನೆರೆದ ಜನರು ಅವರನ್ನು ಹಿಡಿದು ನಿಲ್ಲಿಸುತ್ತಾರೆ. ಎದ್ದ ಕೂಡಲೇ ಪತ್ರಕರ್ತರ ಬಳಿ 'ದಯವಿಟ್ಟು ಇದನ್ನು ರೆಕಾರ್ಡ್ ಮಾಡಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 

ಚಂಡೀಗಡ ಕ್ಷೇತ್ರದಿಂದ ಕಿರಣ್ ಖೇರ್ ಬಿಜೆಪಿ ಅಭ್ಯರ್ಥಿಯಾಗಿ ಈ ಬಾರಿ ಸ್ಪರ್ಧಿಸಿದ್ದಾರೆ. 2014ರಲ್ಲೂ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಿರಣ್ ಕಾಂಗ್ರೆಸ್ ಅಭ್ಯರ್ಥಿ ಪವನ್ ಬನ್ಸಾಲ್ ವಿರುದ್ಧ ಜಯ ಗಳಿಸಿದ್ದರು.