ಬೆಂಗಳೂರು :  ಜಗತ್ತಿನ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಭಾರತದ 17ನೇ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ.

ಶಾಂತಿಯುತವಾಗಿ ಮತದಾನ ನಡೆಸುವ ಸಂಬಂಧ ಚುನಾವಣಾ ಆಯೋಗವು ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಇಡೀ ರಾಜ್ಯದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರ ಸೇರಿದಂತೆ 14 ಲೋಕಸಭಾ ಕ್ಷೇತ್ರದಲ್ಲಿ 2.67 ಕೋಟಿ ಮತದಾರರು 241 ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸೇರಿದಂತೆ ಅವರ ಮೊಮ್ಮಕ್ಕಳಾದ ನಿಖಿಲ್‌ ಕುಮಾರಸ್ವಾಮಿ, ಪ್ರಜ್ವಲ್‌ ರೇವಣ್ಣ, ನಟಿ ಸುಮಲತಾ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವ ಕೃಷ್ಣ ಬೈರೇಗೌಡ, ಶೋಭಾ ಕರಂದ್ಲಾಜೆ, ವೀರಪ್ಪ ಮೊಯ್ಲಿ ಮುಂತಾದ ಘಟಾನುಘಟಿಗಳು ಅಖಾಡದಲ್ಲಿದ್ದು, ಗುರುವಾರ ಅವರ ಭವಿಷ್ಯ ನಿರ್ಧಾರವಾಗಲಿದೆ.

ಒಟ್ಟು 30,164 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಕಾರ್ಯಕ್ಕಾಗಿ 1,54,262 ಸಿಬ್ಬಂದಿ ನಿಯೋಜಿಸಲಾಗಿದೆ. 38,597 ಪೊಲೀಸ್‌ ಸಿಬ್ಬಂದಿ, 7,727 ಸಂಚಾರ ಸಿಬ್ಬಂದಿ ಮತ್ತು 10,819 ಇತರೆ ಸಿಬ್ಬಂದಿ ಕಾರ್ಯೋನ್ಮುಖವಾಗಿದ್ದಾರೆ. ಚುನಾವಣಾ ಕಾರ್ಯಕ್ಕಾಗಿ ನಿಯೋಜನೆಗೊಂಡಿರುವ ಎಲ್ಲಾ ಸಿಬ್ಬಂದಿ ಈಗಾಗಲೇ ತಮಗೆ ವಹಿಸಿರುವ ಮತಗಟ್ಟೆಗಳಿಗೆ ಮತಯಂತ್ರ ಸೇರಿದಂತೆ ಇತರೆ ಸಲಕರಣೆಗಳೊಂದಿಗೆ ತೆರಳಿ ವಾಸ್ತವ್ಯ ಹೂಡಿದ್ದಾರೆ.

ಉಡುಪಿ-ಚಿಕ್ಕಬಳ್ಳಾಪುರ, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆಯಲ್ಲಿ 6012 ಮತಗಟ್ಟೆಗಳನ್ನು ಕ್ಲಿಷ್ಟಕರ (ಅತಿಸೂಕ್ಷ್ಮ) ಎಂದು ಪರಿಗಣಿಸಲಾಗಿದೆ. 990 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ 55 ಕಂಪನಿಗಳನ್ನು ನಿಯೋಜಿಸಲಾಗಿದೆ. 2038 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 1666 ಮತಗಟ್ಟೆಗಳಲ್ಲಿ ವೆಬ್‌ ಕ್ಯಾಮೆರಾಗಳು ಇರಲಿವೆ. ಅಲ್ಲದೇ, 2308 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್‌ಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ಸಿದ್ಧತೆಯ ಕುರಿತು ವಿವರಣೆ ನೀಡಿದ ಅವರು, 14 ಲೋಕಸಭೆ ಕ್ಷೇತ್ರದಲ್ಲಿ 2.67 ಕೋಟಿ ಮತದಾರರು ಇದ್ದು, 1.35 ಕೋಟಿ ಪುರುಷರು, 1.32 ಕೋಟಿ ಮಹಿಳೆಯರು, 2817 ಇತರರು ಇದ್ದಾರೆ. ಮತದಾರರ ಗುರುತಿನ ಚೀಟಿ ಬದಲಿಗೆ ಇತರೆ 11 ದಾಖಲೆಗಳನ್ನು ತೋರಿಸಿ ಮತಚಲಾಯಿಸುವ ಅವಕಾಶ ಇದೆ. ಸಾಮಾಜಿಕ ಜಾಲತಾಣದ ಮೂಲಕ ಮತಚಲಾಯಿಸುವ ಅವಕಾಶ ಇಲ್ಲ ಹಾಗೂ ಮತ ಚಲಾಯಿಸಲು ಯಾವುದೇ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿಲ್ಲ. ಇಂತಹ ಸುಳ್ಳು ವದಂತಿಗಳ ಬಗ್ಗೆ ಮತದಾರರು ಕಿವಿಗೊಡದೆ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು ಎಂದು ವಿವರಿಸಿದರು.

ಮೊದಲ ಹಂತದ ಚುನಾವಣೆಗಾಗಿ 30164 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 2672 ಮತಗಟ್ಟೆಗಳಿದ್ದು, ಅತಿ ಹೆಚ್ಚು ಮತಗಟ್ಟೆಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರವು ಕಡಿಮೆ ಮತಗಟ್ಟೆಯನ್ನು ಹೊಂದಿದ್ದು, ಅಲ್ಲಿ 1837 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 393 ಸಖಿ ಮತಗಟ್ಟೆಗಳು, 32 ಪಾರಂಪರಿಕ ಮತ್ತು 61 ಅಂಗವಿಕಲ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.


ಬೆಂಗಳೂರು ಕೇಂದ್ರದಲ್ಲಿ ಎಂ.3 ಇವಿಎಂ ಬಳಕೆ

ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಮಾತ್ರ ಹೊಸ ತಂತ್ರಜ್ಞಾನವುಳ್ಳ ಎಂ.3 ಇವಿಎಂ ಬಳಕೆ ಮಾಡಲಾಗುತ್ತಿದ್ದು, ಇನ್ನುಳಿದ ಕ್ಷೇತ್ರದಲ್ಲಿ ಎಂ.2 ಇವಿಎಂ ಬಳಕೆ ಮಾಡಲಾಗುತ್ತಿದೆ. ಎಂ.2 ಇವಿಎಂಗಿಂತ ಎಂ.3 ಇವಿಎಂ ಸುಧಾರಿತ ಹೊಸ ತಂತ್ರಜ್ಞಾನಗಳನ್ನು ಹೊಂದಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 4996 ಬ್ಯಾಲೆಟ್‌ ಯೂನಿಟ್‌, 2498 ಕಂಟ್ರೋಲ್‌ ಯೂನಿಟ್‌ ಮತ್ತು 2855 ವಿವಿಪ್ಯಾಟ್‌ಗಳನ್ನು ಬಳಸಲಾಗುವುದು. ಎಂ.2 ಇವಿಎಂ ಬಳಕೆ ಕ್ಷೇತ್ರದಲ್ಲಿ 47,116 ಬ್ಯಾಲೆಟ್‌ ಯೂನಿಟ್‌, 33698 ಕಂಟ್ರೋಲ್‌ ಯೂನಿಟ್‌ ಮತ್ತು 35103 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. 14 ಕ್ಷೇತ್ರದಲ್ಲಿ ಒಟ್ಟು 30,164 ಮತಗಟ್ಟೆಗಳಲ್ಲಿ 52,112 ಬ್ಯಾಲೆಟ್‌ ಯೂನಿಟ್‌, 36,196 ಕಂಟ್ರೋಲ್‌ ಯೂನಿಟ್‌ ಮತ್ತು 37,705 ವಿವಿಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮತ ಹಾಕಲು ಈ ದಾಖಲೆಗಳಿದ್ದರೂ ಸಾಕು

ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತ ಚಲಾಯಿಸಬಹುದಾಗಿದೆ. 11 ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು. ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಕೇಂದ್ರ/ರಾಜ್ಯ/ಖಾಸಗಿ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ಬ್ಯಾಂಕ್‌ ಅಥವಾ ಅಂಚೆ ಕಚೇರಿಯ ಫೋಟೋ ಪಾಸ್‌ಬುಕ್‌, ಪಾನ್‌ಕಾರ್ಡ್‌, ಎನ್‌ಪಿಆರ್‌ ಸ್ಮಾರ್ಟ್‌ಕಾರ್ಡ್‌, ನರೇಗಾ ಕಾರ್ಡ್‌, ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌, ಪೆನ್ಷನ್‌ ದಾಖಲೆ, ಆಧಾರ್‌ ಕಾರ್ಡ್‌, ಶಾಸಕರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಸಾಧ್ಯವಿದೆ.


- ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತ ಚಲಾವಣೆ

- ಉಡುಪಿ-ಚಿಕ್ಕಬಳ್ಳಾಪುರ, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರದಲ್ಲಿ ಚುನಾವಣೆ

- 2.67 ಕೋಟಿ ಮತದಾರರಿಂದ 241 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

- 30,164 ಮತಗಟ್ಟೆಗಳಲ್ಲಿ ಮತದಾನ

- ಚುನಾವಣಾ ಕಾರ್ಯಕ್ಕಾಗಿ 1,54,262 ಸಿಬ್ಬಂದಿ, 38,597 ಪೊಲೀಸ್‌ ಸಿಬ್ಬಂದಿ, 7,727 ಸಂಚಾರ ಸಿಬ್ಬಂದಿ ಮತ್ತು 10,819 ಇತರೆ ಸಿಬ್ಬಂದಿ ನಿಯೋಜನೆ

- 6012 ಕ್ಲಿಷ್ಟಕರ (ಅತಿಸೂಕ್ಷ್ಮ) ಮತಗಟ್ಟೆಗಳು, 990 ಮತಗಟ್ಟೆಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ 55 ಕಂಪನಿ ನಿಯೋಜನೆ

- 2038 ಮತಗಟ್ಟೆಯಲ್ಲಿ ಸೂಕ್ಷ್ಮ ವೀಕ್ಷಕರಿಂದ ಮೇಲ್ವಿಚಾರಣೆ, 1666 ಮತಗಟ್ಟೆಗಳಲ್ಲಿ ವೆಬ್‌ ಕ್ಯಾಮೆರಾ, 2308 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್‌ಗಳ ಕಾರ್ಯನಿರ್ವಹಣೆ

- ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು (2672) ಮತಗಟ್ಟೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಡಿಮೆ (1837) ಮತಗಟ್ಟೆ

- 393 ಸಖಿ ಮತಗಟ್ಟೆಗಳು, 32 ಪಾರಂಪರಿಕ ಮತ್ತು 61 ಅಂಗವಿಕಲ ಮತಗಟ್ಟೆ

- ಅಂಗವಿಕಲರನ್ನು ಮತಗಟ್ಟೆಗೆ ಕರೆದೊಯ್ಯಲು ವಾಹನಗಳ ಸೌಲಭ್ಯ

- ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ 11 ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು

(ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ ಆವೃತ್ತಿಗಳಿಗೆ)

ರಾಜ್ಯದಲ್ಲಿಂದು ಮೊದಲ ಹಂತದ ಮತದಾನ

- ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮತದಾನ

ಬಿಸಿಲು ಲೆಕ್ಕಿಸದೆ ವೋಟ್‌ ಹಾಕಿ ಮತದಾರರು ಪ್ರಜಾಪ್ರಭುತ್ವವನ್ನು ಗೆಲ್ಲಿಸ್ತಾರಾ?

ದೇಶದ 13 ರಾಜ್ಯ, 95 ಕ್ಷೇತ್ರಗಳಲ್ಲಿ ಇಂದು ಮತದಾನ

ನವದೆಹಲಿ: ರಾಜ್ಯದಲ್ಲಿ ಗುರುವಾರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯಲಿದ್ದರೆ, ದೇಶಾದ್ಯಂತ 2ನೇ ಹಂತದ ಮತದಾನ ನಡೆಯಲಿದೆ. ಒಟ್ಟಾರೆ 12 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ 95 ಲೋಕಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅದರ ಅಂಕಿ ಅಂಶ ಇಂತಿದೆ.

13 ರಾಜ್ಯ: ಕರ್ನಾಟಕ ಸೇರಿ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮತದಾನ

95 ಕ್ಷೇತ್ರ: ತಮಿಳುನಾಡಿನ ವೆಲ್ಲೂರು, ತ್ರಿಪುರ ಮತದಾನ ಮುಂದಕ್ಕೆ. ಹಾಗಾಗಿ, 97ರ ಬದಲು 95ರಲ್ಲಿ ಮತದಾನ

15.8 ಕೋಟಿ: ದ್ವಿತೀಯ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾದ ಮತದಾರರ ಸಂಖ್ಯೆ

1600 ಮಂದಿ: ದ್ವಿತೀಯ ಹಂತದ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟಪರೀಕ್ಷೆಗಳಿದಿರುವ ಅಭ್ಯರ್ಥಿಗಳ ಸಂಖ್ಯೆ

1.8 ಲಕ್ಷ: ದ್ವಿತೀಯ ಹಂತದ ಲೋಕಸಭಾ ಚುನಾವಣೆಯ ಮತದಾನಕ್ಕಾಗಿ ಸಿದ್ಧಪಡಿಸಲಾಗಿರುವ ಮತಗಟ್ಟೆಗಳ ಸಂಖ್ಯೆ