ಬೆಂಗಳೂರು : ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕುತೂಹಲಕ್ಕೆ ತೆರೆ ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದಷ್ಟು ಸ್ಥಾನಗಳಲ್ಲಿ ಗೆಲುವು ಪಡೆದಿದೆ. 

ಕಾಂಗ್ರೆಸ್ ರಾಜ್ಯದ 28 ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರವೇ ಜಯಗಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪನ್ನು ಒಪ್ಪಿಕೊಳ್ಳಲೇಬೇಕು ಎಂದು ಹೇಳಿದ್ದಾರೆ. 
 
ಈ ಸೋಲಿನಿಂದ ಕಾಂಗ್ರೆಸ್ ವರ್ಚಸ್ಸು ಕಡಿಮೆ ಆಗಿಲ್ಲ. ಸೋತ ಬಳಿಕ ಕಾಂಗ್ರೆಸ್ ವರ್ಚಸ್ಸು ಕಡಿಮೆ ಆಯ್ತು ಎಂದಲ್ಲ. ಕಾಂಗ್ರೆಸ್ ನಿರ್ನಾಮ ಆಗುವುದು ಅಸಾಧ್ಯ. ಜನರು ಮೋದಿ ಆರಿಸುವ ನಿರ್ಧಾರ ಕೈಗೊಂಡಿದ್ದರು. ಅದರಂತೆ ತೀರ್ಪು ಹೊರಬಿದ್ದಿದೆ ಎಂದರು. 

 

ಇನ್ನು ಸುಧಾಕರ್ ಮನೆಗೆ ಊಟಕ್ಕೆ ತೆರಳಿರುವ ಬಗ್ಗೆ ಮಾತನಾಡಿದ ಅವರು ಅವರ ಮನೆಗೆ ಊಟಕ್ಕಷ್ಟೇ ತೆರಳಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು. 

 

ಚುನಾವಣೆಗಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡಿ ಗೆಲುವಿಗಾಗಿ ಶ್ರಮಿಸಿದ್ದೆವು. ನನಗೆ ಮೈಸೂರು ಮಾತ್ರವೇ ಪ್ರತಿಷ್ಟೆಯ ಕ್ಷೇತ್ರ ಆಗಿರಲಿಲ್ಲ ಫಲಿತಾಂಶದಿಂದ ಮೈತ್ರಿ ಸರ್ಕಾರ ವಿಫಲ ಆಗಿದೆ ಎಂದಲ್ಲ. ಈ ಫಲಿತಾಂಶವು ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. 

ಇನ್ನು ಕರ್ನಾಟಕದಿಂದ ಆಯ್ಕೆಯಾದ ಸಂಸದರೆಲ್ಲರಿಗೂ ಅಭಿನಂದನೆ ತಿಳಿಸಿದ್ದು, ಅವರೆಲ್ಲರೂ ರಾಜ್ಯದ ಪಕ್ಷಾತೀತ ಪ್ರತಿನಿಧಿಗಳಾಗಿರುತ್ತಾರೆ ಎಂದು ಹೇಳಿದರು.