ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮುಂದಿನ ಸಿಎಂ ವಿಚಾರದ ಚರ್ಚೆ ಜೋರಾಗುತ್ತಿದ್ದಂತೆ ಇತ್ತ ಬಿಜೆಪಿಯಲ್ಲೂ  ತಂತ್ರಗಾರಿಕೆ ಮಾಡಲಾಗುತ್ತಿದೆ. ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಸ್ಪಷ್ಟವಾಗಿ ಹಾಗೂ ಗಟ್ಟಿಯಾಗಿ ಹೇಳುವ ಮೂಲಕ ಮೈತ್ರಿ ಕೂಟ ಬೆಂಬಲ ವಿಚಾರದಲ್ಲಿ ಬೇಲಿ ಮೇಲೆ ಕುಳಿತಿರುವ ಮತದಾರರಲ್ಲಿ ಸಂಶಯ ಹುಟ್ಟುಹಾಕುವ ಹಾಗೂ ಅದರ ಲಾಭವನ್ನು ಪಡೆಯುವ ಉದ್ದೇಶ ಸ್ಪಷ್ಟವಾಗಿ ಕಂಡು ಬರುತ್ತಿದೆ. 

ಹೀಗಾಗಿಯೇ ಯಡಿಯೂರಪ್ಪರಂತಹ ನಾಯಕರು ಫಲಿತಾಂಶ ಹೊರ ಬರುತ್ತಿದ್ದಂತೆಯೇ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರೆ, ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜುಗೌಡರಂತಹ ನಾಯಕರು ಸರ್ಕಾರ ಕುಸಿದು ಬೀಳುವ ಮಹೂರ್ತವನ್ನು ಘೋಷಿಸತೊಡಗಿದ್ದಾರೆ. ಕಾಂಗ್ರೆಸ್‌ನಿಂದ ಒಂದು ಹೆಜ್ಜೆಯನ್ನು ಈಗಾಗಲೇ ಹೊರಗಿಟ್ಟಿರುವ ರಮೇಶ್‌ ಜಾರಕಿಹೊಳಿ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ಇಂತಹ ಒಂದು ಪ್ರಯತ್ನವನ್ನು ಫಲಿತಾಂಶದ ನಂತರ ಆರಂಭಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಫಲಿತಾಂಶದ ನಂತರ ವಿಪ್ಲವ!:

ಎರಡನೇ ಹಂತದ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ತಂತ್ರಗಾರಿಕೆ ನಡೆಯುತ್ತಿದ್ದರೂ, ಫಲಿತಾಂಶ ಮಾತ್ರ ಸರ್ಕಾರದ ಮೇಲೆ ಪ್ರಭಾವ ಬೀರುವ ಎಲ್ಲಾ ಸಾಧ್ಯತೆಯಿರುವುದನ್ನು ಅಲ್ಲಗಳೆಯಲಾಗದು. ಫಲಿತಾಂಶ ಮೈತ್ರಿ ಕೂಟದ ಪರವಿದ್ದರೆ ಆಗ ಸರ್ಕಾರಕ್ಕೆ ಹೆಚ್ಚು ಸಮಸ್ಯೆಯಾಗದಿರಬಹುದು. ಆದರೆ, ಫಲಿತಾಂಶ ಸಾರಸಗಟಾಗಿ ಮೈತ್ರಿ ಕೂಟದ ವಿರುದ್ಧ ಬಂದರೆ ಆಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ವಿಪ್ಲವ ಉಂಟಾಗುವ ಸಾಧ್ಯತೆಯನ್ನು ಮುಂಗಾಣಲಾಗುತ್ತಿದೆ.