ಬೆಂಗಳೂರು (ಮಾ.26):  ಬೆಂಗಳೂರು ದಕ್ಷಿಣದ ಟಿಕೆಟ್​ ತೇಜಸ್ವಿನಿ ಅನಂತ್​ಕುಮಾರ್​ ಅವರಿಗೇ ಸಿಗಲಿದೆ ಎನ್ನಲಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಟಿಕೆಟ್​ ಅವರ ಕೈ ತಪ್ಪಿದ್ದು, ಆರ್​ಎಸ್​​ಎಸ್​ ಹಿನ್ನೆಲೆ ಹೊಂದಿರುವ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಮಣೆ ಹಾಕಿದೆ.

ಇದ್ರಿಂದ ತೇಜಸ್ವಿನಿ ಸೇರಿದಂತೆ ಕೆಲ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ನಡೆಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಅಸಮಾಧಾನವನ್ನು ತಣ್ಣಗಾಗಿಸಲು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ಅವರು, ಇಂದು [ಗುರುವಾರ] ತೇಜಸ್ವಿನಿ ಅನಂತ ಕುಮಾರ್ ನಿವಾಸಕ್ಕೆ ಭೇಟಿ ನೀಡಿದರು.

ಈ ವೇಳೆ  ತೇಜಸ್ವಿನಿ  ಅವರು ಮುರಳಿಧರ್ ರಾವ್ ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದುವರೆ ತಿಂಗಳ ಹಿಂದೆ ನೀವೆ ನನಗೆ ಸೂಚನೆ ನೀಡಿದ್ರಿ. ಅಷ್ಟೇ ಅಲ್ಲದೇ ಕ್ಷೇತ್ರದಲ್ಲಿ ಓಡಾಡುವಂತೆ ಸೂಚಿಸಿದ್ರಿ. ಆದರೆ ಟಿಕೆಟ್ ಬೇರೆಯವರಿಗೆ ನೀಡುವ ವೇಳೆ ಯಾಕೆ ನನ್ನ ಸಂಪರ್ಕ ಮಾಡಲಿಲ್ಲ.

ರವಿಸುಬ್ರಹ್ಮಣ್ಯಗೆ, ಸುರೇಶ್ ಕುಮಾರ್'ಗೆ ಕರೆ ಮಾಡಿ ಸ್ಪರ್ಧೆ ಮಾಡುವಂತೆ ದೂರವಾಣಿ ಕರೆ ಮಾಡ್ತೀರಿ. ಆದ್ರೆ ನನಗೆ ಯಾಕೆ ಕರೆ ಮಾಡಲಿಲ್ಲ ಎಂದು ಮುರಳಿಧರ್ ರಾವ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಬೇರೆ ಜವಬ್ದಾರಿ ನೀಡುವುದಾಗಿ ಭರವಸೆ ಮಾತುಗಳನ್ನಾಡಿದ ಮುರಳಿಧರ್ ರಾವ್ ಮೇಲೆ ಮತ್ತಷ್ಟು ಗರಂ ಆದ ತೇಜಸ್ವಿನಿ, ಅನಂತ್ ಕುಮಾರ್ ಕೇಂದ್ರದಲ್ಲಿ ಬಹಳ ವರ್ಷ ಸಚಿವರಾಗಿ ಕೆಲಸ ಮಾಡಿದ್ದಾರೆ.  

ನೀವು ಅನಂತ್ ಕುಮಾರ್ ಕುಟುಂಬಕ್ಕೆ ಅಧಿಕಾರದ ಆಸೆ ತೋರಿಸಿ ಅವಮಾನ ಮಾಡಬೇಡಿ ಎಂದು ಖಡಕ್ ಆಗಿ ಹೇಳಿದರು. ತೇಜಸ್ವಿನಿ ಅವರ ಖಡಕ್ ಮಾತಿಗೆ ತುಟಿ ಬಿಚ್ಚದೆ ಮುರಳಿಧರ್ ರಾವ್ ಅಲ್ಲಿಂದ ವಾಪಸ್ ಆಗಿದ್ದಾರೆ.