ಪಾಟ್ನಾ[ಮಾ.27]: ಬಿಹಾರದ ಬೆಗೂಸರಾಯ್ ಕ್ಷೇತ್ರದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಕಣಕ್ಕಿಳಿದಿದ್ದಾರೆ. ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿರುವ ಕನ್ಹಯ್ಯಾ ಕುಮಾರ್ ಇದೀಗ ಚುನಾವಣಾ ಪ್ರಚಾರಕ್ಕಾಗಿ ಪ್ರತಿಯೊಬ್ಬರು 1 ರೂಪಾಯಿ ದಾನ ಮಾಡಿ ಎಂದು ಮನವಿ ಮಾಡಿದ್ದಾರೆ.

'ಹನಿ ಹನಿಗೂಡಿ ಹಳ್ಳ ಎನ್ನುವಂತೆ ಪ್ರತಿಯೊಬ್ಬರು 1 ರೂಪಾಯಿ ದಾನ ಮಾಡಿದರೆ ಆ ಮೊತ್ತದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ನಿಮ್ಮ ಧ್ವನಿಯನ್ನು ಲೋಕಸಭೆಯಲ್ಲಿ ಪ್ರತಿಧ್ವನಿಸುವಂತೆ ಮಾಡುತ್ತೇನೆ. ಚುನಾವಣಾ ಪ್ರಚಾರಕ್ಕಾಗಿ 70ಲಕ್ಷದ ಅಗತ್ಯವಿದೆ' ಎಂದಿದ್ದಾರೆ.

ಈ ನಿಟ್ಟಿನಲ್ಲಿ ಕಾರ್ಯ ಆರಂಭಿಸಿರುವ ಕನ್ಹಯ್ಯಾ ಕುಮಾರ್ ಹಣ ಹೊಂದಿಸಲು ಈಗಾಗಲೇ ಆನ್ ಲೈನ್ ಮೊರೆ ಹೋಗಿದ್ದಾರೆ. ಕನ್ಹಯ್ಯಾ ಕುಮಾರ್ ಮನವಿಗೆ ಅತ್ತಯುತ್ತಮ ಸ್ಪಂದನೆ ದೊರಕಿದ್ದು, ಈಗಾಗಲೇ 5,00,000ಕ್ಕೂ ಅಧಿಕ ಮಂದಿ ದಾನ ಮಾಡಿದ್ದಾರೆ. 

ಕನ್ಹಯ್ಯಾ ಕುಮಾರ್ ಬಿಜೆಪಿ ನಾಯಕ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಭ್ಯರ್ಥಿಯಾಗಿರುವ ಗಿರಿರಾಜ್ ಸಿಂಗ್ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ. ಎದುರಾಳಿ ಬಲಶಾಲಿಯಾಗಿರುವುದರಿಂದ ಈ ಸ್ಪರ್ಧೆ ಅತ್ಯಂತ ಕಠಿಣವಾಗಿದೆ. ಇದಕ್ಕೆ ಜನರ ಸಹಕಾರವೂ ಬೇಕು ಎಂದು ಪಕ್ಷದ ಮುಖಂಡರು ಕನ್ಹಯ್ಯ ಕುಮಾರ್ ಗೆ ಸ್ಪಷ್ಟಪಡಿಸಿದ್ದರು. ಹೀಗಾಗಿ ಅವರು ಜನರ ಸಹಕಾರ ಹಾಗೂ ವೋಟು ಹೀಗೆ ಎರಡೂ ಅಭಿಯಾನವನ್ನು ಆರಂಭಿಸಿದ್ದಾರೆ.