ಇಂಧೋರ್(ಮೇ.14): ಲೋಕಸಭೆ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಮೇ.18ಕ್ಕೆ ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಗಿದರೆ, ಅಲ್ಲಿಗೆ ಲೋಕಸಭೆ ಚುನಾವಣೆ ಮುಗಿಯಿತು ಎಂತಲೇ ಅರ್ಥ. ಆದರೆ ಕೊನೆಯ ಹಂತ ಸಮೀಪಿಸುತ್ತಿದ್ದಂತೇ ರಾಜಕೀಯ ನಾಯಕರ ಎಲುಬಿಲ್ಲದ ನಾಲಿಗೆ ಅಪರಿಮಿತವಾಗಿ ಹೊರ ಚಾಚುತ್ತಿದೆ.

ಅದರಲ್ಲೂ ಪ್ರಧಾನಿ ಮೋದಿ ಅವರನ್ನೇ ಟಾರ್ಗೆಟ್ ಮಾಡಿರುವ ವಿಪಕ್ಷಗಳು, ಮೋದಿ ಅವರನ್ನು ತರಹೇವಾರಿ ಹೆಸರುಗಳಿಂದ ಸಂಬೋಧಿಸುತ್ತಾ, ರಾಜಕೀಯ ಕ್ಷೇತ್ರದ ಮಹತ್ವವನ್ನು ಮತ್ತಷ್ಟು ಕೆಳಗಿಳಿಸುತ್ತಿದ್ದಾರೆ. ಮೋದಿ ಅವರನ್ನು ರಾವಣ, ದುಶ್ಯಾಸನ, ಚೋರ್, ದುರ್ಯೋಧನ ಅಂತೆಲ್ಲಾ ಕರೆದು, ತಮ್ಮ ನಾಲಿಗೆ ಮೇಲೆ ತಮಗೆ ಹಿಡಿತವಿಲ್ಲ ಎಂದು ತೋರಿಸಿದ್ದಾರೆ.

ಅದರಂತೆ ಪ್ರಧಾನಿ ಮೋದಿ ವಿರುದ್ಧ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಕೂಡ ತಮ್ಮ ನಾಲಿಗೆ ಹರಿಬಿಟ್ಟಿದ್ದು, ಪ್ರಧಾನಿ ವಿರುದ್ಧ ಕೀಳು ಪದ ಪ್ರಯೋಗಿಸಿ ಕುಹುಕವಾಡಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಪೈಜಾಮ್ ಹಾಕಲೂ ಗೊತ್ತಿಲ್ಲದ ವೇಳೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಈ ದೇಶದ ಸೈನ್ಯ ಕಟ್ಟಿದ್ದಾರೆ ಎಂದು ಕಮಲ್ ನಾಥ್ ಗುಡುಗಿದ್ದಾರೆ.

ದೇಶದ ಸೈನ್ಯ ಇಂದು ಇಷ್ಟು ಬಲಿಷ್ಠವಾಗಿರಲು ಈ ಹಿಂದಿನ ಸರ್ಕಾರಗಳು ಕೈಗೊಂಡ ಕ್ರಮಗಳೇ ಕಾರಣ ಎಂದಿರುವ ಕಮಲ್ ನಾಥ್, ಎಲ್ಲಾ ನಾನೇ ಮಾಡಿರುವೆ ಎಂದು ಬೀಗುತ್ತಿರುವ ಪ್ರಧಾನಿ ಮೋದಿ ದೇಶದ ಮತ್ತು ಸೈನ್ಯದ ಇತಿಹಾಸ ಅರಿಯಲಿ ಎಂದು ಕಿಚಾಯಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ