ನಾಥೂರಾಮ್ ಗೋಡ್ಸೆ ದೇಶಭಕ್ತ ಎಂಬ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿಕೆ| ಸಾಧ್ವಿ ಹೇಳಿಕೆಯಿಂದ ಎಲ್ಲೆಡೆ ಭಾರೀ ವಿರೋಧ| ಸಾಧ್ವಿ ಹೇಳಿಕೆ ಖಂಡಿಸಿದ ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ| ‘ಗೋಡ್ಸೆ ಗಾಂಧಿಯನ್ನು ಕೊಂದ, ಸಾಧ್ವಿ ಅವರ ಆತ್ಮವನ್ನೇ ಕೊಂದಳು’| ಟ್ವಿಟ್ಟರ್‌ನಲ್ಲಿ ಸಾಧ್ವಿ ವಿರುದ್ಧ ಹರಿಹಾಯ್ದ ಕೈಲಾಶ್ ಸತ್ಯಾರ್ಥಿ|

ನವದೆಹಲಿ(ಮೇ.18): ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಓರ್ವ ದೇಶಭಕ್ತ ಎಂಬ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಾಧ್ವಿ ಹೇಳಿಕೆಗೆ ಪ್ರಧಾನಿ ಮೋದಿಯಾದಿಯಾಗಿ ಎಲ್ಲೆಡೆಯಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಈ ಮಧ್ಯೆ ಸಾಧ್ವಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ, ಗೋಡ್ಸೆ ಕೇವಲ ಗಾಂಧಿ ಅವರ ದೇಹವನ್ನು ಕೊಂದರೆ ಗೋಡ್ಸೆ ಬೆಂಬಲಕ್ಕೆ ನಿಲ್ಲುವ ಮೂಲಕ ಸಾಧ್ವಿ ಗಾಂಧಿ ಅವರ ಆತ್ಮವನ್ನೇ ಕೊಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Scroll to load tweet…

ಈ ಕುರಿತು ಟ್ವಿಟ್ ಮಾಡಿರುವ ಕೈಲಾಶ್ ಸತ್ಯಾರ್ಥಿ, ವ್ಯಕ್ತಿಯನ್ನು ಹತ್ಯೆ ಮಾಡಬಹುದು ಆದರೆ ವಿಚಾರಗಳನ್ನಲ್ಲ ಎಂಬ ನಂಬಿಕೆ ಹುಸಿಯಾಗಿದೆ. ವಿಚಾರಗಳನ್ನೂ ಅತ್ಯಂತ ಕ್ರೂರವಾಗಿ ಕೊಲೆ ಮಾಡಬಹುದು ಎಂಬುದಕ್ಕೆ ಸಾಧ್ವಿ ಹೇಳಿಕೆಯೇ ಸಾಕ್ಷಿ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಗೋಡ್ಸೆ ಕೇವಲ ಗಾಂಧಿ ಎಂಬ ವ್ಯಕ್ತಿಯನ್ನು ಕೊಂದ, ಆದರೆ ಅವರ ಆದರ್ಶಗಳ ಸೌಧದ ಮೇಲೆಯೇ ದೇಶ ಇಷ್ಟು ವರ್ಷಗಳ ಕಾಲ ಜೀವಂತವಾಗಿದೆ. ಆದರೆ ಗೋಡ್ಸೆ ಬೆಂಬಲಿಸುವ ಮೂಲಕ ಸಾಧ್ವಿ ಗಾಂಧಿ ಅವರ ಆತ್ಮವನ್ನೂ ಕೊಂದು ಬಿಟ್ಟರು ಎಂದು ಕೈಲಾಶ್ ಮಾರ್ಮಿಕವಾಗಿ ನುಡಿದಿದ್ದಾರೆ.