Asianet Suvarna News Asianet Suvarna News

7 ಕ್ಷೇತ್ರ ಒಡಲಲ್ಲಿ: ಪ್ರಧಾನಿ ಯಾರೆಂದು ನಿರ್ಧರಿಸಲಿದೆ ದೆಹಲಿ!

ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನ ಪೂರ್ಣ| ನವದೆಹಲಿಯ ಏಳೂ ಕ್ಷೇತ್ರಗಳಿಗೆ ಇಂದು ಮತದಾನ| 7 ಕ್ಷೇತ್ರವಿದ್ದರೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ದೆಹಲಿ| ದೆಹಲಿ ಯಾವ ಪಕ್ಷಕ್ಕೆ ಮತ ನೀಡುತ್ತದೆಯೋ ಅದೇ ಪಕ್ಷ ಅಧಿಕಾರಕ್ಕೆ| 1998ರಿಂದ ಕೇಂದ್ರದಲ್ಲಿ ಯಾವ ಪಕ್ಷದ ಅಧಿಕಾರ ಇರಬೇಕೆಂಬುದನ್ನು ನಿರ್ಧರಿಸುವ ದೆಹಲಿ| 2019ರಲ್ಲಿ ಯಾವ ಪಕ್ಷಕ್ಕೆ ದೆಹಲಿ ಮತದಾರ ಆಶೀರ್ವಾದ ನೀಡಲಿದ್ದಾನೆ?|

Just 7 Lok Sabha Seats Delhi Decides Who Becomes PM
Author
Bengaluru, First Published May 12, 2019, 6:37 PM IST
  • Facebook
  • Twitter
  • Whatsapp

ನವದೆಹಲಿ(ಮೇ.12): ಲೋಕಸಭೆ ಚುನಾವಣೆಗೆ ಇಂದು 6ನೇ ಹಂತದ ಮತದಾನ ಪ್ರಕ್ರಿಯೆ ಮುಗಿದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೂ ಇಂದು ಮತದಾನವಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿ ಕ್ಷೇತ್ರವಾರು ಸಂಖ್ಯೆಗಳನ್ನು ಗಮನಿಸಿದರೆ ಪಕ್ಕದ ಉತ್ತರಪ್ರದೇಶಕ್ಕೆ ಎಳ್ಳಷ್ಟೂ ಸರಿಸಮನಲ್ಲದ ದೆಹಲಿ, ಹೊಸ ಸರ್ಕಾರ ರಚನೆಯಲ್ಲಿ ಆ ರಾಜ್ಯದಷ್ಟೇ ಮಹತ್ವದ ಪಾತ್ರ ನಿರ್ವಹಿಸುತ್ತಾ ಬಂದಿರುವುದು ನಿಜಕ್ಕೂ ಅಚ್ಚರಿಯ ವಿಷಯ.

ಕೇವಲ 7 ಲೋಕಸಭಾ ಕ್ಷೇತ್ರಗಳನ್ನು ಒಡಲಲ್ಲಿಟ್ಟುಕೊಂಡಿರುವ ದೆಹಲಿ, ಮುಂದಿನ ಪ್ರಧಾನಿ ಯಾರಾಗಬೇಕು?, ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ನಿರ್ಧರಿಸುವ ಕ್ಷಮತೆ ಹೊಂದಿದೆ.

ಅದ್ಹೇಗೆ ಅಂತೀರಾ?. ಲೋಕಸಭೆ ಚುನಾವಣೆಯ ಇತಿಹಾಸ ಗಮನಿಸಿದರೆ ಇದಕ್ಕೆ ಖಂಡಿತ ಉತ್ತರ ಸಿಗುತ್ತದೆ. ತುಂಬ ಹಿಂದಿನ ಇತಿಹಾಸವನ್ನು ಕೆದಕುವ ಅವಶ್ಯಕತೆ ಇಲ್ಲ. ಕೇವಲ 1998ರ ನಂತರದ ಲೋಕಸಭಾ ಚುನಾವಣೆ ಇತಿಹಾಸ ಗಮನಿಸಿದರೆ ದೆಹಲಿಯ ಮಹತ್ವ ಅರಿವಾಗುತ್ತದೆ.

1998ರ ಬಳಿಕ ದೆಹಲಿ ಯಾವ ಪಕ್ಷಕ್ಕೆ ಅಧಿಕ ಮತ ನೀಡಿದೆಯೋ ಅದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದು ವಿಶೇಷ. ಇದರಲ್ಲಿ ಮತ್ತೊಂದು ವಿಶೇಷ ಅಂದರೆ ದೆಹಲಿ ಯಾವಾಗಲೂ ತನ್ನ ಎಲ್ಲಾ ಕ್ಷೇತ್ರಗಳನ್ನೂ ಒಂದೇ ಪಕ್ಷಕ್ಕೆ ಬಿಟ್ಟು ಕೊಟ್ಟಿದೆ.

ಅದರಂತೆ 1998ರಲ್ಲಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳು ಬಿಜೆಪಿ ಪಾಲಾದವು. ಆಗ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದರೂ, ಆಸರ್ಕಾರ ಕೇವಲ 13 ತಿಂಗಳಷ್ಟೇ ಬಾಳಿಕೆ ಬಂದಿತ್ತು.

ಮುಂದೆ 1999ರಲ್ಲಿ ಬಿಜೆಪಿ ದೆಹಲಿಯ ಎಲ್ಲಾ ಏಳೂ ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಂಡಿತು. ಮತ್ತೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಪಟ್ಟಕ್ಕೇರಿದರು.

ಆದರೆ 2004ರಲ್ಲಿ ಬಿಜೆಪಿಯಿಂದ ದೂರ ಸರಿದದೆಹಲಿ ಮತದಾರ ಬರೋಬ್ಬರಿ ಆರು ಕ್ಷೇತ್ರಗಳನ್ನು ಕಾಂಗ್ರೆಸ್ ಕೈಗೆ ಕೊಟ್ಟ. ಪರಿಣಾಮ ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು.

2009ರಲ್ಲೂ ಕಾಂಗ್ರೆಸ್ ಪರ ಒಲವು ತೋರಿದ ದೆಹಲಿ ಮತದಾರ ಎಲ್ಲಾ ಏಳೂ ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ನೀಡಿ ಮತ್ತೆ ಡಾ. ಸಿಂಗ್ ಅವರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಿದ.

ಆದರೆ ಮುಂಧೆ 2014ರಲ್ಲಿ ನರೇಂದ್ರ ಮೋದಿ ಅಲೆಯಲ್ಲಿ ಕೊಚ್ಚಿ ಹೋದ ರಾಷ್ಟ್ರ ರಾಜಧಾನಿ, ಎಲ್ಲಾ ಏಳೂ ಕ್ಷೇತ್ರಗಳನ್ನು ಬಿಜೆಪಿಗೆ ನೀಡಿತು. ಪರಿಣಾಮ ನರೇಂದ್ರ ಮೋದಿ ರಾಷ್ಟ್ರದ ಚುಕ್ಕಾಣಿ ಹಿಡಿದರು.

ಹೀಗೆ ದೆಹಲಿ ಯಾರ ಪರ ಮತ ಚಲಾಯಿಸುತ್ತದೆಯೋ ಅದೇ ಪಕ್ಷ ಕೇಂದ್ರದಲ್ಲಿ ಅಧಿಕಕಾರಕ್ಕೆ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios