ಬೆಂಗಳೂರು : ಲೋಕಸಭಾ ಚುನಾವಣಾ ಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಗೆ ಕೊಚ್ಚಿ ಹೋಗಿರುವ ಮಿತ್ರ ಪಕ್ಷಗಳಲ್ಲಿ ಕಿತ್ತಾಟ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಹೆಚ್ಚಿದ್ದು, ಜೆಡಿಎಸ್‌ನ ಹಲವು ನಾಯಕರು ಪಕ್ಷಾಂತರವಾಗುವ ಪರ್ವ ಶುರುವಾಗುವ ಸಾಧ್ಯತೆ ಇದೆ.

ಚುನಾವಣೆಯಲ್ಲಿ ಕಳಪೆ ಸಾಧನೆ ತೋರಿರುವುದು ಜೆಡಿಎಸ್‌ನ ಹಲವು ನಾಯಕರಲ್ಲಿ ಬೇಸರ ತಂದಿದೆ. ಪಕ್ಷದ ವರಿಷ್ಠರ ನಡೆಯೇ ಜೆಡಿಎಸ್‌ಗೆ ತೀವ್ರ ಮುಖಭಂಗವಾಗಲು ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಪಕ್ಷ ತೊರೆಯುವ ಆಲೋಚನೆಗೆ ಮುಂದಾಗಿದ್ದಾರೆ. ಜೆಡಿಎಸ್ ಬಿಟ್ಟು ಬಿಜೆಪಿ ಅಥವಾ ಕಾಂಗ್ರೆಸ್‌ಗೆ ವಲಸೆ ಹೋಗುವ ಚಿಂತನೆ ನಡೆಸಿದ್ದಾರೆ ಎಂದುಮೂಲಗಳು ತಿಳಿಸಿವೆ.

ತಮ್ಮ ಭದ್ರಕೋಟೆ ಮಂಡ್ಯ ಮತ್ತು ಹಾಸನಕ್ಕೆ ಸಿಮೀತವಾಗಿದ್ದ ಜೆಡಿಎಸ್‌ಗೆ ಕ್ಷೇತ್ರಗಳನ್ನು ವಿಸ್ತರಿಸಿಕೊಳ್ಳುವ ಸದವಕಾಶ ಲಭಿಸಿತ್ತು. ಬಿಜೆಪಿಯನ್ನು ಮಣಿಸಲು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಮಾಡಿಕೊಳ್ಳಲಾಗಿತ್ತು. ಏಳು ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಕನಿಷ್ಠ 3 - 4 ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಜೆಡಿಎಸ್‌ನಲ್ಲಿತ್ತು. 

ಆದರೆ, ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿಯೂ ಸೋಲನುಭವಿಸಿದ್ದಲ್ಲದೇ, ತುಮಕೂರಿನ ಲ್ಲಿಯೂ ಮುಖಭಂಗ ಅನುಭವಿಸಬೇಕಾಯಿತು. ಹಾಸನ ಕ್ಷೇತ್ರದಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. 

ಕೇವಲ ಒಂದು ಸ್ಥಾನಕ್ಕೆ ಕುಸಿತ ಕಂಡ ಹಿನ್ನೆಲೆಯಲ್ಲಿ ಜೆಡಿಎಸ್‌ನ ನಾಯಕರಲ್ಲಿ ಮನೋಸ್ಥೈರ್ಯ ಕುಗ್ಗಿಂತಾಗಿದೆ. ಅಲ್ಲದೇ, ಪಕ್ಷಕ್ಕೆ ದುಡಿದ ಹಲವು ನಾಯಕರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಚ್ಚಿನ ಮನ್ನಣೆ ನೀಡಲಿಲ್ಲ. ಇದು ಪಕ್ಷದ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾರಣ ತಮ್ಮ
ಅಸ್ತಿತ್ವವನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡುವ ಲೆಕ್ಕಾಚಾರ ಇದೆ ಎಂದು ಹೇಳಲಾಗಿದೆ.

ಜೆಡಿಎಸ್‌ಗೆ ಅಧಿಕಾರ ಲಭಿಸಿದರೂ ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನ-ಮಾನ ನೀಡುವಲ್ಲಿ ವರಿಷ್ಠರು ವಿಫಲರಾದರು. ಅಲ್ಲದೇ, ಮಿತ್ರ ಪಕ್ಷದಲ್ಲಿನ ಕಿತ್ತಾಟವು ಸಹ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಬೇಸರ ಮೂಡಿಸಿತು. ಚುನಾವಣೆ ವೇಳೆ ಮಿತ್ರ ಪಕ್ಷಗಳ ನಾಯಕರು ಒಗ್ಗೂಡಿ ಪ್ರಚಾರ ಕೈಗೊಂಡಿಲ್ಲ. ಅಸಮಾಧಾನ ಬಹಿರಂಗವಾಗಿ ವ್ಯಕ್ತವಾದರೂ ಪಕ್ಷದ ವರಿಷ್ಠ ಗಂಭೀರವಾಗಿ ಪರಿಗಣಿಸಿ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಒಟ್ಟಿಗೆ ಪ್ರಚಾರದಲ್ಲಿ ತೊಡಗುವಂತೆ ಹೇಳಿಕೆ ನೀಡಿದ್ದರು. ಆರ್ಥಿಕವಾಗಿ ಸಬಲವಾಗಿರುವ ನಾಯಕರಿಗೆ ಆದ್ಯತೆ ನೀಡಿದ್ದರಿಂದ ಸಹಜವಾಗಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಲ್ಲಿ ಅಸಮಾಧಾನವನ್ನುಂಟು ಮಾಡಿದೆ ಎನ್ನಲಾಗಿದೆ.