ಬೆಂಗಳೂರು (ಏ. 18): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ 150 ಕೋಟಿ ರು. ವೆಚ್ಚ ಮಾಡುವ ಸಂಬಂಧ ವೈರಲ್‌ ಆಗಿದ್ದ ಆಡಿಯೋಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಡಿಯೋ ಸಂಭಾಷಣೆ ನಡೆಸಿದ ಜೆಡಿಎಸ್‌ ನಾಯಕರನ್ನು ವಿಚಾರಣೆ ನಡೆಸಿದ್ದಾರೆ.

ಹಾಲಿ ಸಂಸದ ಶಿವರಾಮೇಗೌಡ ಪುತ್ರ ಚೇತನ್‌ ಗೌಡ ಮತ್ತು ಪಿ.ರಮೇಶ್‌ ಅವರನ್ನು ಇತ್ತೀಚೆಗೆ ಕರೆದು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇಬ್ಬರನ್ನು ಮುಖಾಮುಖಿ ಮಾಡಿಸಿ ವಿಚಾರಣೆ ನಡೆಸಿದಾಗ ಸಂಭಾಷಣೆ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಸ್ಟಾರ್‌ ಹೊಟೇಲ್‌ವೊಂದರಲ್ಲಿ ಡಿನ್ನರ್‌ ವೇಳೆ ನಡೆದ ಮಾತುಕತೆ ಆದಾಗಿದ್ದು, ಈ ವೇಳೆ ಕೆಲವು ನಾಯಕರು ಸಹ ಜೊತೆ ಇದ್ದರು ಎಂದು ರಮೇಶ್‌ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ವೇಳೆ ಆಡಿಯೋವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ. ಆಡಿಯೋ ಸಂಭಾಷಣೆ ತಮ್ಮದೇ ಎಂದು ಒಪ್ಪಿಕೊಂಡಿದ್ದರೂ ಸಹ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಅಧಿಕೃತವಾದ ದಾಖಲೆಯಾಗಲಿದೆ ಎಂದ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಕಳೆದ ವಾರವಷ್ಟೇ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ 150 ಕೋಟಿ ರು. ವೆಚ್ಚ ಮಾಡುತ್ತಿರುವ ಬಗ್ಗೆ ನಾಯಕರ ಆಡಿಯೋ ವೈರಲ್‌ ಆಗಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಬ್ಬರಿಗೂ ನೋಟಿಸ್‌ ಜಾರಿಗೊಳಿಸಿ ವಿಚಾರಣೆಗೆ ಕರೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.